ಬೆಂಗಳೂರು: ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಸರ್ಕಾರ ಕೋವಿಡ್ ನಿಯಂತ್ರಣ, ನೆರೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಸುಳ್ಳು ಭರವಸೆಗಳನ್ನು ನೀಡುವುದಷ್ಟೇ ಅಲ್ಲ ಕೋವಿಡ್‌ದಿಂದ ಸಾವಿಗೀಡಾದವರ ಲೆಕ್ಕದಲ್ಲೂ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳ ಬಗ್ಗೆ ಯೋಚಿಸಬೇಕಾದ ಸರ್ಕಾರ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಹೆಸರು ಬದಲಾವಣೆ ಮಾಡುವ ಸಣ್ಣತನದ ರಾಜಕಾರಣ ಮಾಡುತ್ತಿದೆ. ಸರ್ಕಾರದ ವೈಫಲ್ಯಗಳಿಂದ ಜನರ ದೃಷ್ಟಿ ಬೇರೆ ಕಡೆ ತಿರುಗಿಸುವ ಹುನ್ನಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ತಮ್ಮದೇ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆಂದರೆ ಇನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಸಿಗುವ ಅನುದಾನದ ಬಗ್ಗೆ ನೀವೆ ಊಹೆ ಮಾಡಿ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಕ್ರಮ : ಸಚಿವ ಪ್ರಭು ಚವ್ಹಾಣ್
ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ಅದನ್ನು ತಡೆಯುವ ಅಧಿಕಾರ ತಮಿಳುನಾಡಿಗಾಗಲೀ, ಕೇರಳಕ್ಕಾಗಲೀ ಇಲ್ಲ. ಸಿ.ಟಿ ರವಿಗೆ ನೆಲ ಜಲದ ಬಗ್ಗೆ ಬದ್ಧತೆ ಇದ್ದರೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಯೋಜನೆ ಜಾರಿಗೆ ಅನುಮತಿ ಕೊಡಿಸಲಿ. ಸಿ.ಟಿ ರವಿ ತಮಿಳುನಾಡಿನ ಬಿಜೆಪಿ ಉಸ್ತುವಾರಿಯಾದ ಕಾರಣಕ್ಕೆ ಹೀಗೆ ಎಡಬಿಡಂಗಿ ನಿಲುವು ತಾಳಿದ್ದಾರೆ ಎಂದು ದೂರಿದರು.
ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿ.ಎಸ್.ಟಿ ಕೌನ್ಸಿಲ್ ಸದಸ್ಯರಾಗಿದ್ದರು. ಒಮ್ಮೆಯಾದರೂ 15 ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನವನ್ನು ಕೇಳಿದ್ದಾರಾ, ಇಂಥವರಿಂದ ರಾಜ್ಯದ ಹಿತ ರಕ್ಷಣೆ ಸಾಧ್ಯವೇ ಎಂದರು.