Advertisement

e-KYC: ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರದಲ್ಲಿ ಇ-ಕೆವೈಸಿಗೆ ಮುಗಿಬಿದ್ದ ಗ್ರಾಹಕರು

10:56 AM Dec 23, 2023 | |

ದಾಂಡೇಲಿ : ನಗರದ ಜೆ.ಎನ್ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರದ ಬಳಿ ಅಡುಗೆ ಅನಿಲ ಗ್ರಾಹಕರು ಇ-ಕೆವೈಸಿ ಮಾಡಲು ಮುಗಿಬಿಳುತ್ತಿರುವ ದೃಶ್ಯ ಕಳೆದ ಕೆಲವು ದಿನಗಳಿಂದ ಸಾಮಾನ್ಯವಾಗಿ ಕಂಡುಬರತೊಡಗಿದೆ.

Advertisement

ಇ-ಕೆವೈಸಿ ಮಾಡಲು ಗಡುವು ನೀಡದೇ ಇದ್ದರೂ ಕೂಡ ಡಿಸೆಂಬರ್ 31 ಕೊನೆಯ ದಿನ ಎಂಬ ಅಪೂರ್ಣವಾದ ಮಾಹಿತಿ ಜನಸಾಮಾನ್ಯರಲ್ಲಿ ಚರ್ಚೆಯಲ್ಲಿರುವ ಹಿನ್ನೆಲೆಯೆ ಈ ಗೊಂದಲಕ್ಕೆ ಕಾರಣವಾಗಿದೆ.

ಕಳೆದ 15 ದಿನಗಳಿಂದ ಗ್ಯಾಸ್ ವಿತರಣಾ ಕೇಂದ್ರದ ಮುಂಭಾಗದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಲ್ಲಿ ಅಡುಗೆ ಅನಿಲ ಗ್ರಾಹಕರು ಬಂದು ನಿಲ್ಲುತ್ತಿದ್ದಾರೆ. ಕೆವೈಸಿ ಮಾಡುವ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದೆಯಾದರೂ, ಗಡುವು ನೀಡಲಾಗಿದೆ ಎಂಬ ಕಾರಣಕ್ಕೆ ಸಿಲಿಂಡರ್ ವಿತರಣಾ ಕೇಂದ್ರದಲ್ಲಿ ನಿತ್ಯ ಜನ ಜಾತ್ರೆಯಾಗತೊಡಗಿದ್ದು ಪರಿಣಾಮವಾಗಿ ಸರ್ವರ್ ಸಮಸ್ಯೆಯೂ ಉಂಟಾಗಿ ಕೆವೈಸಿ ಮಾಡಲು ವಿಳಂಬವಾಗುತ್ತಿದೆ.

ಇನ್ನೂ ನಗರದಲ್ಲಿ ಕಾರ್ಮಿಕರೇ ಹೆಚ್ಚಿರುವುದರಿಂದ, ಕಾಗದ ಕಾರ್ಖಾನೆ ಸೇರಿದಂತೆ ವಿವಿಧಡೆ ಕೆಲಸಕ್ಕೆ ಹೋಗಿ ಬರುವಷ್ಟರೊಳಗೆ ಗ್ಯಾಸ್ ವಿತರಣಾ ಕೇಂದ್ರದ ಕೆಲಸದ ಅವಧಿಯು ಮುಗಿಯುವುದರಿಂದ ಮತ್ತು ಭಾನುವಾರ ರಜೆ ಇರುವುದರಿಂದ ಕಾರ್ಮಿಕರಿಗೆ, ಉದ್ಯೋಗದಲ್ಲಿರುವವರಿಗೆ ಸ್ವಲ್ಪ ತೊಂದರೆಯಾಗತೊಡಗಿದೆ. ಹೀಗಾಗಿ ಭಾನುವಾರವು ಗ್ಯಾಸ್ ವಿತರಣಾ ಕೇಂದ್ರ ತೆರೆದಿಡಬೇಕೆಂಬ ಮಾತು ಕೇಳಿ ಬರತೊಡಗಿದೆ.

ಅಡುಗೆ ಅನಿಲ ವಿತರಣಾ ಕೇಂದ್ರದ ಸಿಬ್ಬಂದಿಗಳಿಗೆ ನಿತ್ಯ ಮನೆ, ಮನೆಗೆ ಗ್ಯಾಸ್ ಪೂರೈಕೆಯ ಕಾರ್ಯವನ್ನು ಮಾಡಬೇಕಾಗಿದೆ. ನಿತ್ಯದ ಕೆಲಸದ ಒತ್ತಡದ ನಡುವೆಯೂ ಇ-ಕೆವೈಸಿ ಮಾಡಬೇಕಾಗಿದೆ.

Advertisement

ಇ-ಕೆವೈಸಿ ಮಾಡಲು ಸ್ಪಷ್ಟವಾದ ಗಡುವು ನಮಗೂ ನೀಡಿಲ್ಲ ಎಂದು ಗ್ಯಾಸ್ ವಿತರಕರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಶನಿವಾರವೂ ಎಂದಿನಂತೆ ಭಾರತ್ ಗ್ಯಾಸ್ ವಿತರಣಾ ಕೇಂದ್ರದ ಮುಂಭಾಗದಲ್ಲಿ ಗ್ರಾಹಕರು ಸರತಿಯ ಸಾಲಲ್ಲಿ ಇ-ಕೆವೈಸಿಗಾಗಿ ಮುಗಿಬಿದ್ದಿದ್ದಾರೆ.

ಇ-ಕೆವೈಸಿ ಮಾಡುವ ಗಡುವಿನ ಬಗ್ಗೆ ಸಾಕಷ್ಟು ಗೊಂದಲ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಗ್ಯಾಸ್ ವಿತರಣಾ ಏಜೆನ್ಸಿಗಳಿಗೆ ಸೂಕ್ತ ರೀತಿಯ ಸೂಚನೆಯನ್ನು ನೀಡಿ ಅವರ ಮೂಲಕ ಗ್ರಾಹಕರಿಗೆ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.

ಇದನ್ನೂ ಓದಿ: Thirthahalli: ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು

Advertisement

Udayavani is now on Telegram. Click here to join our channel and stay updated with the latest news.

Next