Advertisement

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

05:49 PM Apr 23, 2024 | Team Udayavani |

ಉದಯವಾಣಿ ಸಮಾಚಾರ
ಚಳ್ಳಕೆರೆ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು,ಎಲ್ಲೆಡೆ ಬಿಜೆಪಿಯ ಚುನಾವಣಾ ಬಹಿರಂಗ ಸಭೆಗಳಿಗೆ ನಿರೀಕ್ಷೆಗೂ ಮೀರಿ ಹೆಚ್ಚು ಜನರು ಸೇರುತ್ತಿದ್ದಾರೆ. ಬಿಜೆಪಿಯ ಜನಪ್ರಿಯತೆಗೆ ಅಡ್ಡಿ ಉಂಟು ಮಾಡುವ ಉದ್ದೇಶದಿಂದ ಕಾಂಗ್ರೆಸ್‌ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ಮರಳು ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ದೂರಿದರು.

Advertisement

ತಾಲೂಕಿನ ಗಡಿ ಭಾಗದ ಜಾಜೂರು ಗ್ರಾಮದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರಯೋಜನೆಗಳು ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ.

ಮೋದಿಯವರಂತಹ ದಕ್ಷ, ಪ್ರಾಮಾಣಿಕ ಪ್ರಧಾನಿಯನ್ನು ಕಾಣಲು ಸಾಧ್ಯವಿಲ್ಲ. ರಾಷ್ಟ್ರದ ಹಿತಕ್ಕಾಗಿ ಪ್ರತಿನಿತ್ಯ 20 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಪ್ರಧಾನಿ ಎಂದರೆ ಅದು ಮೋದಿ. ಆದರೆ ಮೋದಿಯವರ ಜನಪ್ರಿಯತೆ ಕಾಂಗ್ರೆಸ್‌ ಪಕ್ಷದ ವಿಜಯಕ್ಕೆ ಅಡ್ಡಿಯಾಗುತ್ತದೆ.

ಆದ್ದರಿಂದಲೇ ಯಾವುದೇ ಆರೋಪ ಇಲ್ಲದಿದ್ದರೂ ಪ್ರಧಾನಿ ವಿರುದ್ದ ಸುಳ್ಳು ಆರೋಪ ಮಾಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ರಾಷ್ಟ್ರವನ್ನಾಳಿದ ಪ್ರಧಾನಿ ಮೋದಿ ಹಾಗೂ ಅವರ ಸಂಪುಟದ ಸಚಿವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಇಂತಹ ಜನಪ್ರಿಯತೆಯನ್ನು ಹೊಂದಿದ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ದೃಢ ನಿರ್ಧಾರವನ್ನು ಮತದಾರರು ಮಾಡಿದ್ದಾರೆ ಎಂದರು.

ಬಿಜೆಪಿ ಯುವ ಮುಖಂಡ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಾಣಿವಿಲಾಸ ಕುಡಿಯುವ ನೀರೂ ಸೇರಿದಂತೆ ಹಲವಾರು ಯೋಜನೆಗಳಿಗೆ ಅಂದಿನ ಶಾಸಕರಾಗಿದ್ದ ತಿಪ್ಪೇಸ್ವಾಮಿ ಕಾರಣಕರ್ತರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಸುಮಾರು 25 ಸಾವಿರ ಎಕರೆ ಬಗರ್‌ಹುಕುಂ ಭೂಮಿಯನ್ನು ನೀಡಿದ ಕೀರ್ತಿ ಮಾಜಿ ಶಾಸಕ ಜಿ. ಬಸವರಾಜ ಮಂಡಿಮಠ ಅವರಿಗೆ ಸಲ್ಲುತ್ತದೆ. ಇವುಗಳ ಬಗ್ಗೆ ಜನರಲ್ಲಿ ಇನ್ನೂ ಉತ್ತಮ ಭಾವನೆ ಇದೆ. ಹಳೆಯ ಸಾಧನೆಗಳ ಬಗ್ಗೆ ಮರೆಮಾಚುವ ಕಾರ್ಯ ಆಗುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ತಿಳಿಸಿದರು.

Advertisement

ಜೆಡಿಎಸ್‌ ಮುಖಂಡ ಎಂ. ರವೀಶ್‌ಕುಮಾರ್‌ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಗೆಲುವಿನ ಕ್ಷೇತ್ರವಾಗಿ
ಪರಿವರ್ತನೆಯಾಗಿದೆ. ವಿಶೇಷವಾಗಿ ನರೇಂದ್ರ ಮೋದಿಯವರ ಕೊಡುಗೆ ಜೊತೆಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಸೇವೆಯನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ಜೆಡಿಎಸ್‌-ಬಿಜೆಪಿ ಹೊಂದಾಣಿಕೆ ಕಾಂಗ್ರೆಸ್‌ ಗೆಲುವಿಗೆ ಕಗ್ಗಂಟಾಗಲಿದೆ ಎಂದರು.

ಡಿ. ಸೋಮಶೇಖರ ಮಂಡಿಮಠ, ಜೆಡಿಎಸ್‌ ತಾಲೂಕು ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ ಯಾದವ್‌, ಆರ್‌.ಅನಿಲ್‌ ಕುಮಾರ್‌, ಜಯಪಾಲಯ್ಯ, ಬಿ.ಎಸ್‌. ಶಿವಪುತ್ರಪ್ಪ, ಸಿ.ಎಸ್‌. ಪ್ರಸಾದ್‌, ವಿ.ವೈ.ಪ್ರಮೋದ್‌, ಸಿ. ಶ್ರೀನಿವಾಸ್‌, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ್‌, ಹೊಸಮನೆ ಮನೋಜ್‌, ಚಿದಾನಂದ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next