Advertisement

ಜನಕ್ಕೆ ಮುಖ ತೋರಿಸಲಾಗ್ತಿಲ್ಲ, ಸಭೆಗೆ ಹೋಗಲು ಹೆದರಿಕೆ… 

12:14 PM Nov 19, 2017 | Team Udayavani |

ಮೈಸೂರು: ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಯಿಂದ ಜನರಿಗೆ ಮುಖತೋರಿಸಲಾಗದ ಪರಿಸ್ಥಿತಿಯಿದೆ… ಗ್ರಾಮದ ಸಭೆ-ಸಮಾರಂಭಗಳಿಗೆ ಹೆದರಿಕೆಯಿಂದ ಹೋಗುವಂತಾಗಿದೆ… ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿಲ್ಲ… 

Advertisement

ಹೀಗೆಂದು ಅಳಲು ತೋಡಿಕೊಂಡಿದ್ದು ಜಿಪಂ ಸದಸ್ಯರು. ಜಿಪಂ ಸಭಾಂಗಣದಲ್ಲಿ ಶನಿವಾರ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಹಾಗೂ ಅನುದಾನದ ಕುರಿತು ಪûಾತೀತವಾಗಿ ಚರ್ಚೆ ನಡೆಸಿದರು. 

ಸಭೆಯ ಆರಂಭದಲ್ಲಿ ಮಾತನಾಡಿದ ಜೆಡಿಎಸ್‌ ಸದಸ್ಯ ಬೀರಿಹುಂಡಿ ಬಸವಣ್ಣ, ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಲು ಜಿಪಂನಲ್ಲಿ ಕಳೆದ 3 ವರ್ಷಗಳಿಂದ ಅನುದಾನ ನೀಡಿಲ್ಲ. ಆದರೆ ಜಿಲ್ಲೆ ಕಳೆದ 6 ವರ್ಷದಿಂದ ಬರಗಾಲದಿಂದ ತತ್ತರಿಸಿದೆ.

ಕುಡಿಯುವ ನೀರಿನ ಸಮಸ್ಯೆ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜವೂ ಆಗಿಲ್ಲ. ಸರ್ಕಾರ ಪ್ರತಿ ಸದಸ್ಯರ ಕ್ಷೇತ್ರ ಅಭಿವೃದ್ಧಿಗೆ ಅಂದಾಜು 10-11 ಲಕ್ಷ ರೂ. ಅನುದಾನ ನೀಡುತ್ತಿದೆ. ಹೀಗಾಗಿ ಎಲ್ಲಾ 49 ಜಿಪಂ ಸದಸ್ಯರು ತಮ್ಮ ಕ್ಷೇತ್ರದ ಜನರಿಗೆ ಮುಖ ತೋರಿಸಲಾಗದಂತಾಗಿದೆ ಎಂದರು.

ಇದಕ್ಕೆ ದನಿಗೂಡಿಸಿದ ಪುಷ್ಪಾಅಮರ್‌ನಾಥ್‌, ಇತ್ತೀಚಿನ ದಿನಗಳಲ್ಲಿ ಜಿಪಂಗಳಿಗೆ ನೀಡುವ ಅನುದಾನ ಹಾಗೂ ಅಧಿಕಾರಕ್ಕಿಂತ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರವಿದೆ. ಇದರಿಂದಾಗಿ ಇಂದು ಜಿಪಂ ಹಲ್ಲುಕಿತ್ತಿರುವ ಹಾವಿನಂತಾಗಿದೆ ಎಂದರು.

Advertisement

ಬಳಿಕ ಮಾತನಾಡಿದ ಮಂಗಳಾ ಸೋಮಶೇಖರ್‌,  ಕ್ಷೇತ್ರದ ನೀರಿನ ಸಮಸ್ಯೆಗೆ ಸ್ಪಂದಿಸಲು ಜಿಪಂ ಸದಸ್ಯರಿಗೆ ಆಗುತ್ತಿಲ್ಲ ಎಂದು ಹೇಳಿದರು. ಉಳಿದಂತೆ ಸದಸ್ಯರಾದ ರವಿಶಂಕರ್‌, ಸಾ.ರಾ.ನಂದೀಶ್‌, ವೆಂಕಟಸ್ವಾಮಿ ಮತ್ತಿತರರು ಚರ್ಚಿಸಿದರು.

ಸರ್ಕಾರ ಪತ್ರ ಬರೆಯೋಣ: ಅಂತಿಮವಾಗಿ ತುರ್ತು ಕಾಮಗಾರಿಗಳಿಗೆ ಅಗತ್ಯವಿರುವ 23.32 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂಬ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ತೀರ್ಮಾನಿಸಲಾಯಿತು.

ಶೇ.78 ಮೇಲ್ಮೆ„ ನೀರು: ಸದಸ್ಯರ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಶಿವಶಂಕರ್‌, ಸರ್ಕಾರ ನಿಗದಿಗಿಂತ ಹೆಚ್ಚು ಹಣ ನೀಡಿದ್ದು, ಕಳೆದ ವರ್ಷ 82 ಕೋಟಿ ರೂ. ಅನುದಾನದ ಬದಲು 109 ಕೋಟಿ ರೂ. ಬಿಡುಗಡೆ ಮಾಡಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಜಿಲ್ಲೆಯಲ್ಲಿ 571 ಕೋಟಿ ರೂ. ಅವಶ್ಯಕತೆ ಇದ್ದು, ಈ ಯೋಜನೆಯಡಿ 31 ಕಾಮಗಾರಿಗಳು ನಡೆಯುತ್ತಿವೆ.

ಒಟ್ಟು 51 ಯೋಜನೆ ಕೈಗೊಂಡಲ್ಲಿ ಶೇ.78 ಭಾಗದ ಜನವಸತಿಗೆ ಮೇಲ್ಮೆ„ ಶುದ್ಧ ಕುಡಿಯುವ ನೀರು ಒದಗಿಸಬಹುದಾಗಿದೆ. ಹೀಗಾಗಿ ಸರ್ಕಾರ ಈ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿದೆ. ಹೀಗಾಗಿ ಸದಸ್ಯರು ಹೇಳುತ್ತಿರುವ ಮುಂದುವರಿದ ಕಾಮಗಾರಿಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

ಪ್ರಗತಿ ಪರಿಶೀಲಿಸಿ ಕ್ರಮ: ಈ ವರ್ಷದ ಆರಂಭದಲ್ಲಿ 289 ಕೋಟಿ ರೂ. ಗಳಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರ 147 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಾಗಲೇ 114 ಕೋಟಿ ರೂ. ವೆಚ್ಚವಾಗಿದೆ. ಇದರ ಹೆಚ್ಚಿನ ಹಣ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಹೋಗಿದೆ. ಇನ್ನೂ ಎಸ್‌ಸಿಪಿ, ಟಿಎಸ್‌ಪಿ ಟಾಸ್ಕ್ ಪೋರ್ಸ್‌ 18 ಕೋಟಿ ರೂ., ಕಾಮಗಾರಿ ಹಣ ಬಾಕಿ ಉಳಿದಿದೆ.

ಈ ಬಗ್ಗೆ ಪ್ರಗತಿ ಪರಿಶೀಲನೆ ಮಾಡುತ್ತೇನೆಂದರು. ಇದಕ್ಕೂ ಮುನ್ನ ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸಭೆ ಕೋರಂ ಕೊರತೆಯಿಂದ 45 ನಿಮಿಷ ತಡವಾಗಿ ಆರಂಭವಾಯಿತು. ಆರಂಭದಲ್ಲಿ ಶಾಸಕ ಚಿಕ್ಕಮಾದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಪಂ ಉಪಾಧ್ಯಕ್ಷ ನಟರಾಜ್‌ ಇದ್ದರು.

ಅಸಂವಿಧಾನಿಕ ಬಳಕೆಗೆ ವಿರೋಧ: ಕುಡಿಯುವ ನೀರಿಗೆ ಸಂಬಂಧಿಸಿದ ನಿಲುವಳಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಜೆಡಿಎಸ್‌ ಸದಸ್ಯ ಸಾ.ರಾ.ನಂದೀಶ್‌, ಕುಡಿಯುವ ನೀರಿನ ಬಗ್ಗೆ ಸ್ಪಂದಿಸದ ಸರ್ಕಾರ ಬುದ್ಧಿಮಾಂದ್ಯ ಸರ್ಕಾರ ಎಂದು ಕಿಡಿಕಾರಿದರು.

ಈ ಹೇಳಿಕೆಯಿಂದ ಕೆರಳಿದ ಕಾಂಗ್ರೆಸ್‌ ಸದಸ್ಯರು, ಸಭೆಯಲ್ಲಿ ಮನಬಂದಂತೆ ಮಾತನಾಡುತ್ತಿರುವುದು ಖಂಡನೀಯ, ಅಸಂವಿಧಾನಿಕ ಪದ ಬಳಕೆ ಮಾಡಬಾರದು ಎಂದು ಟೀಕಿಸಿದರು. ಈ ವೇಳೆ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಹಿರಿಯ ಸದಸ್ಯರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು. 

Advertisement

Udayavani is now on Telegram. Click here to join our channel and stay updated with the latest news.

Next