Advertisement
ಕೆಪಿಎಂಇ ಕಾಯ್ದೆ ತಿದ್ದುಪಡಿ ವಿಧೇಯಕದ ಪ್ರಸ್ತಾಪಿತ ಕೆಲ ಅಂಶಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು, ವೈದ್ಯರಿಂದ ಆರಂಭದಿಂದಲೂ ವಿರೋಧವಿದೆ. ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳ ಶೋಷಣೆ ತಪ್ಪಿಸಲು ಕೆಲ ನಿಯಂತ್ರಣ ಕ್ರಮ ಅಗತ್ಯ ಎಂದು ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
Related Articles
Advertisement
ಪ್ರತಿಷ್ಠೆಯಿಂದ ಜನರಿಗೆ ಪರದಾಟಈ ವಿಚಾರ ಕುರಿತಂತೆ ಆರಂಭದಿಂದಲೂ ಖಾಸಗಿ ಆಸ್ಪತ್ರೆಗಳು, ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಚರ್ಚೆ ನಡೆಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿರಬಹುದು. ಆದರೆ ಸರ್ಕಾರ, ವೈದ್ಯರು ಪ್ರತಿಷ್ಠೆಯನ್ನು ಪಣಕ್ಕಿಟ್ಟಂತೆ ವರ್ತಿಸುತ್ತಿರುವುದರಿಂದ ಸಾಮಾನ್ಯ ಜನರ ಆರೋಗ್ಯ ಸೇವೆಯಲ್ಲಿ ಏರುಪೇರು ಉಂಟಾಗುತ್ತಿದೆ. ಮುಂಚಿತವಾಗಿ ಮಾಹಿತಿ ನೀಡಿದರೂ ಸರ್ಕಾರ ಸೌಜನ್ಯಕ್ಕೂ ಮಾತುಕತೆಗೆ ಆಹ್ವಾನಿಸಿಲ್ಲ ಎಂದು ವೈದ್ಯರು ದೂರಿದರೆ, ಮುಷ್ಕರದ ಬಗ್ಗೆ ಮಾಹಿತಿಯೇ ಇಲ್ಲ ಎಂದು ಸಚಿವರು ಹೇಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಖಾಸಗಿ ಆಸ್ಪತ್ರೆಗಳು, ವೈದ್ಯರು ಜೂನ್‌ನಲ್ಲೇ ಮುಷ್ಕರ ನಡೆಸಿ ಎಚ್ಚರಿಕೆ ನೀಡಿದ್ದರು. ಕಳೆದ ವಾರವೂ ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ಒಪಿಡಿ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಪ್ರಕಟಿಸಿತ್ತು. ಇಷ್ಟಾದರೂ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಾಹಿತಿ ಇರಲಿಲ್ಲ ಎಂಬುದು ಎಷ್ಟು ಸರಿ?
ಜೂನ್‌ನಲ್ಲೇ ಮುಷ್ಕರ ನಡೆಸಿದಾಗ ಸರ್ಕಾರ ಸ್ಪಂದಿಸಲಿಲ್ಲ. ಇತ್ತೀಚೆಗೆ ಮುಷ್ಕರ ನಡೆಸುವ ವಿಚಾರವನ್ನು ಮುಂಚಿತವಾಗಿ ಪ್ರಚಾರಪಡಿಸಿದ್ದರೂ ಸಚಿವರು ತಮಗೆ ಮಾಹಿತಿ ಇರಲಿಲ್ಲ ಎಂದು ಹೇಳಿರುವುದು ಎಷ್ಟು ಸರಿ. ಪರಿಸ್ಥಿತಿ ನಿಭಾಯಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ರಜೆಯಲ್ಲಿರುವ ವೈದ್ಯರು, ಸಿಬ್ಬಂದಿಯನ್ನು ಸೇವೆಗೆ ಕರೆಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಮಾಹಿತಿ ಇಲ್ಲದೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿದೆಯೇ. ಸರ್ಕಾರದ ಗಮನ ಸೆಳೆಯಲು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದ್ದು, ಭಾನುವಾರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಫೆಡರೇಷನ್ ಆಫ್ ಹೆಲ್ತ್‌ಕೇರ್ ಅಸೋಸಿಯೇಷನ್ ಪ್ರಧಾನ ಸಂಚಾಲಕ ಡಾ.ನಾಗೇಂದ್ರಸ್ವಾಮಿ ತಿಳಿಸಿದ್ದಾರೆ. ಸರ್ಕಾರ ಹೇಳುವುದೇನು?
“ತಿದ್ದುಪಡಿ ವಿಧೇಯಕದಲ್ಲಿ ರೋಗಿಗಳಿಗೆ ತಮ್ಮ ಹಕ್ಕುಬಾಧ್ಯತೆ ತಿಳಿದಿರಬೇಕು. ಜಿಲ್ಲಾ ಮಟ್ಟದಲ್ಲಿ ದೂರು ಪರಿಹಾರ ವ್ಯವಸ್ಥೆ ಇರಬೇಕು. ವಸ್ತುನಿಷ್ಠ ಬೆಲೆ ನಿಯಂತ್ರಣ ವ್ಯವಸ್ಥೆ ಜತೆಗೆ ಆಸ್ಪತ್ರೆಗಳ ನಡುವೆ ಶುಲ್ಕದಲ್ಲಿ ವ್ಯತ್ಯಾಸವಿರಬಾರದು ಎಂಬ ಅಂಶಗಳ ಪ್ರಸ್ತಾಪವಿದೆ. ಸದನ ಆಯ್ಕೆ ಸಮಿತಿಯು ತಿದ್ದುಪಡಿ ವಿಧೇಯಕ ಕುರಿತಂತೆ ಏನೇನು ಬದಲಾವಣೆ ತರಬೇಕು ಎಂದು ಸಲಹೆ ನೀಡಿದೆ. ಆ ಸಮಿತಿಗೆ ವರದಿ ಸಲ್ಲಿಕೆಯಾಗಿದ್ದು, ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ತಿದ್ದುಪಡಿ ವಿಧೇಯಕದಲ್ಲಿ ತಜ್ಞರ ಸಮಿತಿ ರಚಿಸಬೇಕು ಎಂಬ ಅಂಶವಿದೆ. ಅದರಂತೆ ಚಿಕಿತ್ಸಾ ದರಕ್ಕೆ ಸಂಬಂಧಪಟ್ಟಂತೆ ತಜ್ಞರ ಸಮಿತಿ ರಚನೆಯಾಗಿ ಎಲ್ಲರನ್ನು ಸಂಪರ್ಕಿಸಿ ಮಾನದಂಡ ನಿಗದಿಪಡಿಸಲಿದೆ. ಬಳಿಕ ಈ ಬಗ್ಗೆ ಕರಡು ದರ ವಿವರ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಕೆಗೂ ಅವಕಾಶ ನೀಡಿ ಅಂತಿಮವಾಗಿ ದರ ನಿಗದಿಯಾಗಲಿದೆ. ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ,’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಹೇಳಿದ್ದಾರೆ. 24 ಗಂಟೆ ಒಪಿಡಿ ಸ್ಥಗಿತಗೊಳಿಸಿ ಸಾಂಕೇತಿಕ ಹೋರಾಟ ನಡೆಸಲಾಯಿತು. ಇದಕ್ಕೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸರ್ಕಾರ ಪೂರ್ವಾಗ್ರಹ ಚಿಂತನೆ ಬಿಟ್ಟು ಆಹ್ವಾನ ನೀಡಿದರೆ ಮಾತುಕತೆಗೆ ಸಿದ್ಧರಿದ್ದೇವೆ. ಭಾನುವಾರ ಖಾಸಗಿ ಆಸ್ಪತ್ರೆಗಳ ನಾನಾ ಸಂಘಟನೆಗಳೊಂದಿಗೆ ಸಂಘದ ಪದಾಧಿಕಾರಿಗಳ ಸಭೆಯಿದ್ದು, ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು.
-ಎಚ್.ಎನ್.ರವೀಂದ್ರ, ಐಎಂಎ ಕರ್ನಾಟಕ ಘಟಕದ ಅಧ್ಯಕ್ಷ