Advertisement

ಜನ ಚೇಂಜ್‌ ಕೇಳ್ತಿದ್ದಾರೆ!

07:30 AM Mar 23, 2018 | Team Udayavani |

ಈಗೊಂದೆರೆಡು ವಾರಗಳ ಹಿಂದೆ, “ನನಗಿಷ್ಟ’ ಎಂಬ ಚಿತ್ರದ ಜಾಹೀರಾತು ಮತ್ತು ಪೋಸ್ಟರ್‌ಗಳು ಎಲ್ಲಾ ಕಡೆ ಕಾಣಿಸಿಕೊಂಡವು. ಅದರಲ್ಲಿ “ಎ ಫಿಲ್ಮ್ ಬೈ ದಿನೇಶ್‌ ಬಾಬು’ ಅಂತಿತ್ತು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು, ದಿನೇಶ್‌ ಬಾಬು ಸದ್ದಿಲ್ಲದೆ ಒಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ ಎಂದು. ಎರಡು ವರ್ಷಗಳ ಹಿಂದೆ ಪ್ರಿಯಾಂಕಾ ಉಪೇಂದ್ರ ಅಭಿನಯದ “ಪ್ರಿಯಾಂಕಾ’ ಚಿತ್ರದ ನಂತರ ದಿನೇಶ್‌ ಬಾಬು ಅವರ ಹೆಸರು ಎಲ್ಲೂ ಕೇಳಿರಲಿಲ್ಲ. ಈಗ “ನನಗಿಷ್ಟ’ ಮೂಲಕ ಮತ್ತೂಮ್ಮೆ ಕೇಳುವಂತಾಗಿದೆ.

Advertisement

ಒಂದು ಕಾಲದ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕ ದಿನೇಶ್‌ ಬಾಬು. ವಿಷ್ಣುವರ್ಧನ್‌ ಅವರ “ಸುಪ್ರಭಾತ’ದಿಂದ ಪ್ರಾರಂಭಿಸಿ “ಹೆಂಡ್ತೀಗೆಳ್ಬೇಡಿ’, “ಇನ್‌ ಸ್ಪೆಕ್ಟರ್‌ ವಿಕ್ರಂ’, “ಅಮೃತವರ್ಷಿಣಿ’, “ಲಾಲಿ’, “ಮಿಸ್ಟರ್‌ ಗರಗಸ’, “ಗಣೇಶ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದವರು ಅವರು. ಈಗ ಎರಡು ವರ್ಷಗಳ ಗ್ಯಾಪ್‌ನ ನಂತರ ಮತ್ತೆ ಅವರ ನಿರ್ದೇಶನದ “ನನಗಿಷ್ಟ’ ಚಿತ್ರ ಬಿಡುಗಡೆಯಾಗಿದೆ. ಹಾಗಾದರೆ, ದಿನೇಶ್‌ ಬಾಬು ಇಷ್ಟು ದಿನ ಎಲ್ಲಿದ್ದರು? ಏನು ಮಾಡುತ್ತಿದ್ದರು? ಎಂದರೆ, ಕೇರಳದಲ್ಲಿ ಎಂಬ ಉತ್ತರ ಅವರಿಂದ ಬರುತ್ತದೆ. ಬಾಬು ಅವರು ಮಲಯಾಳಂನಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. “ಕೃಷ್ಣಂ’ ಅಂತ ಹೆಸರು. ಆ ಚಿತ್ರ ಕಾರಣಾಂತರಗಳಿಂದ ನಿಧಾನವಾಗುತ್ತಿದೆಯಂತೆ. ಅದೇ ಕಾರಣಕ್ಕೆ, ಕಳೆದೊಂದು ವರ್ಷದಿಂದ ಅವರು ಯಾವ ಕನ್ನಡ ಚಿತ್ರಗಳನ್ನೂ ಮಾಡಿಲ್ಲ. ದಿನೇಶ್‌ ಬಾಬು ಚಿತ್ರಗಳೆಂದರೆ, ಅದು ಚಿಕ್ಕ ಮತ್ತು ಚೊಕ್ಕ ಎಂದರ್ಥ.

ಅದಕ್ಕೆ ಸರಿಯಾಗಿ, ಅವರು ಇತ್ತೀಚೆಗೆ ಅವರು ಯಾವುದೇ ದೊಡ್ಡ ಹೀರೋನ ಅಥವಾ ದೊಡ್ಡ ಬಜೆಟ್‌ನ ಚಿತ್ರಗಳನ್ನು ಮಾಡಿಲ್ಲ. “ನನಗೆ ಆ ತರಹ ಸಿನಿಮಾಗಳು ಮಾಡುವುದಕ್ಕೆ ಬರುವುದಿಲ್ಲ. ತುಂಬಾ ದೊಡ್ಡ ಸ್ಟಾರ್‌ ಆದರೆ, ಆ ತರಹ ಇರಬೇಕು, ಈ ತರಹ ಇರಬೇಕು ಎಂಬ ಷರತ್ತುಗಳು ಇರುತ್ತವೆ. ನನ್ನ ಚಿತ್ರಗಳಲ್ಲಿ ಹೀರೋಯಿಸಂ ಆಗಲೀ, ಹೀರೋ ಇಂಟ್ರೋಡಕ್ಷನ್‌ ಆಗಲೀ ಇರುವುದಿಲ್ಲ. ಬಹಳ ಸಹಜವಾಗಿರುತ್ತದೆ. ಇಲ್ಲಿ ಕಥೆ ಮುಖ್ಯವಾಗಿರುತ್ತದೆ. ಅದು ನನ್ನ ಸ್ಟೈಲು. ಈಗ ಸಾಕಷ್ಟು ಬದಲಾಗಿದೆ. ಅದೇ ಕಾರಣಕ್ಕೆ ಹೊಸಬರ ಜೊತೆಗೆ ಚಿತ್ರ ಮಾಡಿದೆ. ಹೊಸಬರ ಚಿತ್ರದ ಒಂದು ಸಮಸ್ಯೆ ಎಂದರೆ, ಅದು ಪ್ರೇಕ್ಷಕರಿಗೆ ತಲುಪಿಸೋದು ಬಹಳ ಕಷ್ಟ. ತುಂಬಾ ಪಬ್ಲಿಸಿಟಿ ಮಾಡಬೇಕು. ಈಗ “ನನಗಿಷ್ಟ’ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಆದರೆ, ರೀಚ್‌ ಮಾಡಿಸೋದು ಕಷ್ಟ’ ಎಂಬುದು ಅವರ ಅಭಿಪ್ರಾಯ.

ಬಾಬು ಗಮನಿಸಿರುವಂತೆ, ಒಟ್ಟಾರೆ ಜನರ ಟೇಸ್ಟ್‌ ಸಾಕಷ್ಟು ಬದಲಾಗಿದೆ. “ನಾನು ಬರೀ ಕನ್ನಡದ ಬಗ್ಗೆ ಹೇಳುತ್ತಿಲ್ಲ. ಇಲ್ಲಿ 
ಕೇರಳದಲ್ಲೂ ನೋಡುತ್ತಿದ್ದೀನಲ್ಲ. ಅವರಿಗೆ ಹೊಸ ಹೊಸ ವಿಷಯಗಳು ಬೇಕು. ಒಂದಾನೊಂದು ಕಾಲದಲ್ಲಿ … ಅಂತ ಶುರುವಾಗುವ ಕಥೆಗಳು ಬೇಡ. ಹಳೆಯ ನಿರೂಪಣೆ ಸಹ ಇಷ್ಟವಾಗುವುದಿಲ್ಲ. ಜಗತ್ತು ಬದಲಾಗುತ್ತಿದೆ. ಪ್ರತಿದಿನ ಹೊಸ ಹೊಸ ವಿಷಯಗಳು ಸಿಗುತ್ತಿವೆ. ಹಾಗಾಗಿ ಹಳೆಯದನ್ನು ನೋಡುವುದಕ್ಕೆ ಮನಸ್ಸು ಮಾಡುವುದಿಲ್ಲ. ಅವರಿಗೆ ಹೊಸದೇನನ್ನೋ ಕೊಡಬೇಕು. “ನನಗಿಷ್ಟ’ ಅಂಥದ್ದೇ ಒಂದು ಪ್ರಯತ್ನ. ಒಳ್ಳೆಯ ಪ್ರಚಾರ ಸಿಕ್ಕರೆ, ಈ ತರಹದ ಚಿತ್ರಗಳನ್ನು ನಿಲ್ಲಿಸಬಹುದು’ ಎನ್ನುತ್ತಾರೆ ಅವರು.

ಕಡಿಮೆ ಬಜೆಟ್‌ನ ಮತ್ತು ಕಡಿಮೆ ದಿನಗಳಲ್ಲಿ ಚಿತ್ರ ಮಾಡುವ ಟ್ರೆಂಡ್‌ ಬಹಳ ವರ್ಷಗಳ ಹಿಂದೆಯೇ ಶುರು ಮಾಡಿದ್ದರು ಬಾಬು. ಈಗ ಅಂಥದ್ದೊಂದು ಟ್ರೆಂಡ್‌ ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಚಾಲ್ತಿಯಲ್ಲಿದೆ. “ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡುವುದು ಅಂದರೆ ಕಡಿಮೆ ದುಡ್ಡಿನಲ್ಲಿ ಚಿತ್ರ ಮಾಡುವುದಿಲ್ಲ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಎಂದರ್ಥ. ಇವತ್ತು ಸ್ಟಾರ್‌ಗಳ ಸುತ್ತ ಒಂದಿಷ್ಟು
ಖರ್ಚುಗಳಿವೆ. ಪ್ರಮುಖವಾಗಿ ಕ್ಯಾರಾವಾನ್‌. ಹಾಗಂತ ಅದು ತಪ್ಪು ಎನ್ನುವುದಿಲ್ಲ. ಮುಂಚೆ ಕಲಾವಿದರು ಒಂದು ಶಾಟ್‌ ಆದ ನಂತರ ಸ್ಥಳದಲ್ಲೇ ಇರೋರು. ಬೇರೆಯವರು ಹೇಗೆ ನಟಿಸುತ್ತಿದ್ದಾರೆ ಅಂತ ನೋಡೋರು. ಬಿಡುವಿದ್ದ ಸಮಯದಲ್ಲಿ ಒಳ್ಳೆಯ ಚರ್ಚೆಗಳು ನಡೆಯೋದು. ಆದರೆ, ಈಗ ಹಾಗಿಲ್ಲ. ಈಗ ಎಲ್ಲಾ ಹೀರೋಗಳು ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡಿರುತ್ತಾರೆ. ಅವರಿಗೆ ಅವರದೇ ಆದ್ಯತೆಗಳು ಇರುತ್ತವೆ. ನಾನು ಹೇಳುವುದೇನೆಂದರೆ, ಒಬ್ಬ ನಟ ಮುಖ್ಯವಾಗಿ ತನ್ನ ಪಾತ್ರವನ್ನ ನೋಡಬೇಕು. ಅವರಿಂದ
ಬೇರೆಯದಕ್ಕೆ ತೊಂದರೆಯಾಗಬಾರದು’ ಎನ್ನುತ್ತಾರೆ ಬಾಬು.

Advertisement

ವಿಷ್ಣುವರ್ಧನ್‌, ಅನಂತ್‌ ನಾಗ್‌ ಅವರ ಜೊತೆಗೆ ಕಳೆದ ಸಮಯ ತಮ್ಮ ಗೋಲ್ಡನ್‌ ಪೀರಿಯಡ್‌ ಎಂದು ನೆನಪಿಸಿಕೊಳ್ಳುವ ಬಾಬು, “ಎಂಥಾ ದೊಡ್ಡ ಕಲಾವಿದರು ಅವರೆಲ್ಲಾ. ಒಂದೇ ಒಂದು ದಿನಕ್ಕೂ ಇಂಟರ್‌ ಫಿಯರ್‌ ಮಾಡುತ್ತಿರಲಿಲ್ಲ. ತಮ್ಮ ಪಾತ್ರ, ದೃಶ್ಯ, ಸಂಭಾಷಣೆ ಚೆನ್ನಾಗಿರಬೇಕು ಅಂತ ಬಯಸುತ್ತಿದ್ದರು. ಬರೀ ತಮ್ಮದಲ್ಲ, ಇಡೀ ಸಿನಿಮಾ ಅವರ ತಲೆಯಲ್ಲಿರೋದು. ಹಾಗಾಗಿ 
ಎಲ್ಲವೂ ಚೆನ್ನಾಗಿ ಬರಲಿ ಅಂತ ಸಾಕಷ್ಟು ಚರ್ಚೆ ಮಾಡೋರು. ಹಾಗೆ ಚರ್ಚೆ ಮಾಡಿದ್ದಕ್ಕೆ ಒಳ್ಳೆಯ ಚಿತ್ರಗಳನ್ನು ಕೊಡೋದಕ್ಕೆ 
ಸಾಧ್ಯವಾಗೋದು’ ಎನ್ನುತ್ತಾರೆ ಬಾಬು.

ಎಲ್ಲಾ ಸರಿ, ಅವರ ಮುಂದಿನ ಕನ್ನಡ ಚಿತ್ರ ಯಾವುದು ಎಂಬ ಪ್ರಶ್ನೆಗೆ, ಸದ್ಯಕ್ಕೆ ಗೊತ್ತಿಲ್ಲ ಎಂಬ ಉತ್ತರ ಬರುತ್ತದೆ. “ತಲೆಯಲ್ಲಿ 
ಯಾವಾಗಲೂ ನಾಲ್ಕೈದು ಕಥೆಗಳು ಇರುತ್ತವೆ. ಮುಂಚೆಯೇ ಯಾವುದನ್ನೂ ಬರೆದಿಟ್ಟುಕೊಂಡಿರುವುದಿಲ್ಲ. ಯಾವ ಕಥೆ ಓಕೆ
ಆಗುತ್ತದೋ, ಅದರ ತಯಾರಿಯಲ್ಲಿ ತೊಡಗಿಕೊಳ್ಳುತ್ತೇನೆ. ಸದ್ಯಕ್ಕೆ ಯಾವುದೂ ಪಕ್ಕಾ ಆಗಿಲ್ಲ’ ಎಂದು ಮಾತು ಮುಗಿಸುತ್ತಾರೆ ಬಾಬು.

ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next