ಬೆಂಗಳೂರು: ಕೋವಿಡ್ 19 ಎಲ್ಲೆಡೆ ವ್ಯಾಪಿಸುತ್ತಿದ್ದು, ಮಾರುಕಟ್ಟೆಗಳಿಗೆ ತರಕಾರಿ ಆವಕ ಗಣನೀಯ ಇಳಿಕೆಯಾಗಿದೆ. ಪ್ರತಿದಿನಕ್ಕೆ ಹೋಲಿಸಿದರೆ ಶೇ.15-20ರಷ್ಟು ಮಾತ್ರ ತರಕಾರಿ ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ಉಪ ರಸ್ತೆಗಳಲ್ಲಿರುವ ಅಂಗಡಿ ಗಳಿಗೆ ತರಕಾರಿ ಸರಬರಾಜಾಗುತ್ತಿಲ್ಲ. ಇದರ ಪರಿಣಾಮ ಗುರುವಾರ ತರಕಾರಿ ಬೆಲೆ ದುಪ್ಪಟ್ಟಾಗಿದೆ.
ಇನ್ನೊಂದೆಡೆ ತರಕಾರಿ ಕೊಳ್ಳಲು ರಸ್ತೆಗೆ ಬರಲು ಜನರಿಗೆ ಪೊಲೀಸರ ಭಯ ಎದುರಾಗಿದೆ. ಇದರ ನಡುವೆ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಜನಸಮಾನ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೋವಿಡ್ 19 ಹಿನ್ನೆಲೆ ಬೆಂಗಳೂರು ನಗರದಿಂದ ಬರುವ ಹೊರವಲಯದ ವಾಹನ ಗಳಿಗೆ ನಿರ್ಬಂಧ ಹೇರಲಾಗಿದ್ದು, ರೈತರು ತರ ಕಾರಿಗಳನ್ನು ಮಾರುಕಟ್ಟೆಗಳಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ.
ಕಲಾಸಿಪಾಳ್ಯ ಮಾರುಕಟ್ಟೆ, ಕೆ.ಆರ್ ಮಾರು ಕಟ್ಟೆ, ಯಶವಂತಪುರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ ಸೇರಿ ವಿವಿಧ ಮಾರು ಕಟ್ಟೆಗಳಿಂದಲೇ ನಗರಕ್ಕೆ ತರಕಾರಿಗಳು ಸರಬ ರಾಜು ಆಗಲಿದ್ದು, ರಾಜ್ಯ ಲಾಕ್‌ಡೌನ್ ನಿಂದಾಗಿ ಸಣ್ಣ ಅಂಗಡಿಯವರು ಮಾರಕಟ್ಟೆಗೆ ಬಂದಿಲ್ಲ. ಈಗಾಗಲೇ ಸರ್ಕಾರ ಬೆಳಗ್ಗೆ ಮತ್ತು ಸಂಜೆ ದಿನಸಿ ಕೊಳ್ಳಲು ಅವಕಾಶ ನೀಡಿದ್ದರೂ, ಕೆಲವು ಕಡೆ ಪೊಲೀಸರು ಅಂಗಡಿಗಳನ್ನು ಮುಚ್ಚಿಸುತ್ತಿ ದ್ದಾರೆ ಎಂಬ ಆರೋಪಗಳು ಇವೆ.
ಮಾರುಕಟ್ಟೆಗಳು ಖಾಲಿ ಖಾಲಿ!: ಕೆ.ಆರ್. ಮಾರುಕಟ್ಟೆ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನ ಸೇರುತ್ತಾರೆ ಎಂದು ಪೊಲೀಸರು ವ್ಯಾಪಾರಸ್ಥರಿಗೆ ಮಾರಾಟಕ್ಕೆ ಅವಕಾಶ ನೀಡುತ್ತಿಲ್ಲ. ನಗರದ ಉಪ ರಸ್ತೆಗಳಲ್ಲಿರುವ ಅಂಗಡಿಯವರು ತರಕಾರಿಯನ್ನು ಮಾರುಕಟ್ಟೆಯಿಂದಲೇ ಕೊಂಡೊಯ್ಯುತ್ತಿದ್ದು, ಗುರುವಾರ ಅವರ ಸಂಖ್ಯೆಯೂ ಕಡಿಮೆ ಇತ್ತು. ಇದರ ಪರಿಣಾಮ ನಗರದಲ್ಲಿ ತರಕಾರಿಗಳ ಅಭಾವ ಉಂಟಾಯಿತು.
-ಮಂಜುನಾಥ ಗಂಗಾವತಿ