Advertisement

ಶಾಲಾ ಪರಿಸರದಲ್ಲಿ ಸಂಚಲನ ತಂದ ಪೆನ್ಸಿಲ್‌

02:01 PM Nov 14, 2021 | Team Udayavani |

ಸಿಂಧನೂರು: ಶಾಲಾ ಮಕ್ಕಳಿಂದಲೇ ರೂಪುಗೊಳ್ಳುವ ಈ ಪತ್ರಿಕೆಗೆ ಶಿಕ್ಷಕರು ಕರಡು ವಾಚಕರು. ಇನ್ನುಳಿದಂತೆ ಅವರೇ ತಮ್ಮ ಪರಿಸರ, ಅಭಿರುಚಿ ಕಟ್ಟಿಕೊಡುವ ಮೂಲಕ ಇತರರಲ್ಲೂ ಸ್ಪೂರ್ತಿ ತರುವ ಕೆಲಸ ಮಾಡುತ್ತಿದ್ದಾರೆ.

Advertisement

ತಿಡಿಗೋಳ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಿ. ಕೊಟ್ರೇಶ್‌ ಅವರ ಕಾಳಜಿ ಮೂಲಕ ಆರಂಭವಾದ ಈ ಪೆನ್ಸಿಲ್‌ ಪತ್ರಿಕೆ ಶಾಲಾ ಪರಿಸರದಲ್ಲಿ ಹೊಸ ಸಂಚಲನ ಮೂಡಿಸಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತೆ ಬರಹಗಳನ್ನು ಜೋಡಿಸಿ, ಹೊರತರುವ ಪೆನ್ಸಿಲ್‌ ಪತ್ರಿಕೆ ಚಿಣ್ಣರಲ್ಲಿ ಕಲರವ ಮೂಡಿಸಿದೆ. ಕಳೆದ 8 ವರ್ಷದಿಂದ ಪೆನ್ಸಿಲ್‌ ಹೊರ ಬರುತ್ತಿದ್ದು, ಸರ್ಕಾರಿ ಶಾಲೆ ಶಿಕ್ಷಕರ ಪ್ರಯತ್ನ ಮೆಚ್ಚುಗೆ ಗಳಿಸಿದೆ.

ವಿಶೇಷ ಏನು?

ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳೇ ತಮ್ಮೂರಿನ ಜಾತ್ರೆ, ವಿಶೇಷ ವ್ಯಕ್ತಿಗಳ ಸಂದರ್ಶನ, ಕವನ-ಕತೆ ಇದರಲ್ಲಿ ಬರೆಯುತ್ತಾರೆ. ಚಿತ್ರಕಲೆಗೂ ಪ್ರೋತ್ಸಾಹ ಇದೆ. ಎಲ್ಲವನ್ನೂ ಸಂಗ್ರಹಿಸಿದ ಬಳಿಕ ವಿದ್ಯಾರ್ಥಿಗಳನ್ನೊಳಗೊಂಡ ಸಂಪಾದಕೀಯ ಮಂಡಳಿಯೇ ನಾಲ್ಕು ಪುಟದ ಪೆನ್ಸಿಲ್‌ ಪತ್ರಿಕೆಯಲ್ಲಿ ಪರಿಗಣಿಸುವ ಲೇಖನಗಳನ್ನು ಅಂತಿಮಗೊಳಿಸುತ್ತದೆ. ಬಳಿಕ ಶಿಕ್ಷಕರೊಬ್ಬರು ಕರಡು ವಾಚನ ಮಾಡಿ, ಮಾಸಿಕವಾಗಿ ಈ ಪತ್ರಿಕೆ ಪ್ರಕಟಿಸಲು ಅಂತಿಮ ಷರಾ ಬರೆಯುತ್ತಾರೆ.

Advertisement

ಇದನ್ನೂ ಓದಿ:ಅನ್ನದಾತನೇ ನಮ್ಮ‌ದೈವ: ‘ರೈತರೊಂದಿಗೊಂದು ದಿನ’ದಲ್ಲಿ ಸಚಿವ ಬಿ.ಸಿ.ಪಾಟೀಲ್

ದೇಣಿಗೆಯಿಂದಲೇ ಖರ್ಚು

ಶಿಕ್ಷಣ ಇಲಾಖೆ ಗೋಡೆ ಬರಹದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲು ನೀಡಿದ ಅವಕಾಶವನ್ನು ಶಿಕ್ಷಕ ಬಿ. ಕೊಟ್ರೇಶ್‌ ಪತ್ರಿಕೆ ರೂಪಕ್ಕೆ ತಂದಿದ್ದಾರೆ. ತಮ್ಮೂರಿನ ಮಕ್ಕಳೇ ಬರೆದ ಬರಹ, ಲೇಖನ, ಪರಿಚಯಾತ್ಮಕ ಸಂದರ್ಶನ ಒಳಗೊಂಡ ಪತ್ರಿಕೆಗಳನ್ನು ಆಯಾ ಗ್ರಾಮದಲ್ಲಿ ಹಂಚಿಕೆ ಮಾಡಲಾಗುತ್ತದೆ. ಸಹಜವಾಗಿಯೇ ಸರ್ಕಾರಿ ಶಾಲೆ ಮೇಲೆ ಗ್ರಾಮಸ್ಥರಲ್ಲಿ ಹಿರಿಮೆ ಮೂಡುತ್ತಿದೆ. ಮಕ್ಕಳ ಪ್ರತಿಭೆ ಬಗ್ಗೆಯೂ ಹೆಮ್ಮೆ ಬರುವುದರಿಂದ ಅವರು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಜತೆಗೆ ಇದಕ್ಕೆ ತಗಲುವ ಖರ್ಚು-ವೆಚ್ಚ ದಾನಿಗಳಿಂದ ಸಂಗ್ರಹಿಸಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ.

ಪ್ರಾಥಮಿಕ ಶಾಲೆಯಲ್ಲಿದ್ದಾಗ ಪತ್ರಿಕೆ ಆರಂಭಿಸಿದ್ದು, 8ನೇ ವರ್ಷಕ್ಕೆ ಕಾಲಿಟ್ಟಿದೆ. ನಿರಂತರ ಕಲಿಕೆ ಪ್ರೋತ್ಸಾಹಿಸಲು, ಅವರಲ್ಲಿನ ಪ್ರತಿಭೆ ಹೊರತರಲು ಇದೊಂದು ವೇದಿಕೆಯಾಗಿದೆ. ನಮಗೆ ಇದೊಂದು ಖುಷಿ ಕೆಲಸ. -ಬಿ. ಕೊಟ್ರೇಶ್‌, ಶಿಕ್ಷಕ, ತಿಡಿಗೋಳ ಸರ್ಕಾರಿ ಪ್ರೌಢಶಾಲೆ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next