Advertisement

ತ್ಯಾಜ್ಯ ಸಂಸ್ಕರಣ ಘಟಕ ಇಲ್ಲದ ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ದಂಡ

08:53 PM Oct 16, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 30ಕ್ಕಿಂತ ಹೆಚ್ಚು ಮನೆ/ಫ್ಲ್ಯಾಟ್‌ ಹೊಂದಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತು ಇತರ ದೊಡ್ಡ ಸಂಸ್ಥೆಗಳಲ್ಲಿ (ಹೊಟೇಲ್‌, ಆಸ್ಪತ್ರೆ, ಲಾಡ್ಜ್, ಕಲ್ಯಾಣ ಮಂಟಪ, ಕೆಟರಿಂಗ್‌ ಇತ್ಯಾದಿ) ಸ್ವಂತ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್‌ ಘಟಕವನ್ನು (ಆನ್‌- ಸೈಟ್‌ ಕಾಂಪೋಸ್ಟಿಂಗ್‌) ಹೊಂದುವಂತೆ ಈಗಾಗಲೇ ಸೂಚಿಸಲಾಗಿದ್ದು, ಅದರಂತೆ ಸ್ವಂತ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್‌ ಘಟಕವನ್ನು ಸ್ಥಾಪಿಸದಿರುವ ಅಪಾರ್ಟ್‌ಮೆಂಟ್‌ಗಳಿಗೆ ನ. 1ರಿಂದ ಅನ್ವಯಿಸುವಂತೆ ದಂಡವನ್ನು ವಿಧಿಸಿ ಕೊಂಡು ತ್ಯಾಜ್ಯ ಸಂಗ್ರಹಿಸಲಾಗುವುದು ಎಂದು ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್‌ ಘಟಕವನ್ನು ಸ್ಥಾಪಿಸಲು ವಿಫಲವಾದ ಅಪಾರ್ಟ್‌ಮೆಂಟ್‌ ನವರು ಮೊದಲ ತಿಂಗಳಲ್ಲಿ ಪ್ರತಿ ದಿನಕ್ಕೆ ಪ್ರತಿ ಫ್ಲ್ಯಾಟ್‌ಗೆ 15 ರೂ. ನಂತೆ ಒಂದು ತಿಂಗಳ ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸಿ ತ್ಯಾಜ್ಯ ಸಂಗ್ರಹಕಾರರ ವಾಹನದ ಚಾಲಕರಿಗೆ ಚಲನ್‌ ಹಾಜರು ಪಡಿಸಿ ತ್ಯಾಜ್ಯವನ್ನು ನೀಡುವುದು. ಒಂದು ತಿಂಗಳ ಅನಂತರ 2ನೇ ತಿಂಗಳಿನಿಂದ ಪ್ರತಿ ದಿನಕ್ಕೆ ಪ್ರತಿ ಫ್ಲ್ಯಾಟ್‌ಗೆ 25 ರೂ. ನಂತೆ ಒಂದು ತಿಂಗಳ ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸಿ ತ್ಯಾಜ್ಯ ಸಂಗ್ರಹಕಾರರ ವಾಹನದ ಚಾಲಕರಿಗೆ ಚಲನ್‌ ಹಾಜರುಪಡಿಸಿ ತ್ಯಾಜ್ಯವನ್ನು ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಸ್ಥಳ ದಲ್ಲಿಯೇ ತ್ಯಾಜ್ಯವನ್ನು ತಿರಸ್ಕರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ 2016ರ ಮತ್ತು ಮಂಗಳೂರು ಮಹಾನಗರ ಪಾಲಿಕೆ ಘನತ್ಯಾಜ್ಯ ವಸ್ತು ನಿರ್ವಹಣೆಯ ಬೈಲಾ ಪ್ರಕಾರ ಪಾಲಿಕೆಯು 30ಕ್ಕಿಂತ ಹೆಚ್ಚು ಮನೆ/ಫ್ಲ್ಯಾಟ್‌ ಹೊಂದಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತು ಇತರ ದೊಡ್ಡ ಸಂಸ್ಥೆಗಳಲ್ಲಿ (ಹೊಟೇಲ್‌, ಆಸ್ಪತ್ರೆ, ಲಾಡ್ಜ್, ಕಲ್ಯಾಣ ಮಂಟಪ, ಕೆಟರಿಂಗ್‌ ಇತ್ಯಾದಿ) ಸ್ವಂತ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್‌ ಘಟಕವನ್ನು (ಆನ್‌- ಸೈಟ್‌ ಕಾಂಪೋಸ್ಟಿಂಗ್‌) ಕಡ್ಡಾಯವಾಗಿ ನಿರ್ಮಿಸಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ ಸಂಸ್ಕರಣೆ ಮಾಡುವಂತೆ ತಿಳಿಸಿ ಸಂಬಂಧಪಟ್ಟ ಎಲ್ಲ ಬೃಹತ್‌ ತ್ಯಾಜ್ಯ ಉತ್ಪಾದಕರಿಗೆ ಹಲವಾರು ಬಾರಿ ಸಭೆ ಕರೆದು /ಪತ್ರಿಕಾ ಪ್ರಕಟನೆ ಮುಖಾಂತರ ಹಾಗೂ ನೋಟಿಸ್‌ ನೀಡಲಾಗಿತ್ತು. ಆದರೆ ಈ ಆದೇಶವನ್ನು ಲಘುವಾಗಿ ಪರಿಗಣಿಸಿ ಇದುವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ನೀಡದಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ.

ಇದನ್ನೂ ಓದಿ:ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

ಪ್ರಸ್ತುತ ಮನಪಾ ಘನತ್ಯಾಜ್ಯ ನಿರ್ವಹಣೆಯ ಕುರಿತಾಗಿ ಹೈಕೋರ್ಟ್‌ ನಲ್ಲಿ ದಾಖಲಾದ ರಿಟ್‌ ಅರ್ಜಿಯು ವಿಚಾರಣೆ ಹಂತದಲ್ಲಿದ್ದು, ಘನತ್ಯಾಜ್ಯ ನಿಯಮಗಳ ಅನುಷ್ಠಾನದ ನಿಟ್ಟಿನಲ್ಲಿ ಸಾ ಧಿಸಿರುವ ಪ್ರಗತಿಯು ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಹಾಗಾಗಿ ತ್ಯಾಜ್ಯ ನಿರ್ವಹಣೆ ಚಟುವಟಿಕೆಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕಾಗಿರುವ ಅನಿವಾರ್ಯ ಪಾಲಿಕೆಗೆ ಇದೆ.

Advertisement

ಅ. 31ರೊಳಗೆ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್‌ ಘಟಕ ನಿರ್ಮಿಸಿ
ಪ್ರಸ್ತುತ ತ್ಯಾಜ್ಯ ವಿಲೇವಾರಿಯ ಗಂಭೀರತೆಯನ್ನು ಪರಿಗಣಿಸಿ ಸಂಬಂಧಪಟ್ಟ ಎಲ್ಲ ಸಂಸ್ಥೆಗಳು ತಮ್ಮ ಕಟ್ಟಡ ಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯಗಳನ್ನು ಸ್ಥಳದಲ್ಲಿಯೇ ಸಂಸ್ಕರಣೆ ಮಾಡಲು ಅ. 31ರೊಳಗೆ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣ ಕಾಂಪೋಸ್ಟಿಂಗ್‌ ಘಟಕ ನಿರ್ಮಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ಈಗಾಗಲೇ ನೀಡಲಾಗಿದೆ. ಆದರೆ ಬಹಳಷ್ಟು ಸಂಸ್ಥೆಗಳಲ್ಲಿ ಇನ್ನೂ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಪಾಲಿಕೆಯು ತಪ್ಪಿತಸ್ಥರಿಗೆ ನ. 1ರಿಂದ ಅನ್ವಯಿಸುವಂತೆ ದಂಡ ವಿಧಿಸಿಕೊಂಡು ತ್ಯಾಜ್ಯ ಸಂಗ್ರಹಿಸಲು ತೀರ್ಮಾನಿ ಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪಾಲಿಕೆಯ ಸಹಾಯವಾಣಿ
ಹಣ ಪಾವತಿಸಲು ಚಲನ್‌ಗಳನ್ನು ಪಾಲಿಕೆಯ ಆರೋಗ್ಯ ವಿಭಾಗದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-220310 (-318)ಗೆ ಕರೆ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next