Advertisement

ರಸ್ತೆಗೆ ಬಿಡಾಡಿ ದನ ಬಿಟ್ಟರೆ ದಂಡ

03:18 PM Jul 24, 2018 | |

ಯಾದಗಿರಿ: ಬಿಡಾಡಿ ದನಗಳನ್ನು ರಸ್ತೆಗೆ ಬಿಟ್ಟರೆ ಅವುಗಳನ್ನು ವಶಪಡಿಸಿಕೊಂಡು ಗೋ ಶಾಲೆಗೆ ಸಾಗಿಸಬೇಕು. ಅವುಗಳ
ಮಾಲೀಕರು ಬಿಡಿಸಿಕೊಂಡು ಹೋಗಲು ಬಂದರೆ ಒಂದು ದನಕ್ಕೆ 2 ಸಾವಿರದಂತೆ ದಂಡ ವಿಧಿ ಸಬೇಕು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ಸೂಚಿಸಿದರು.

Advertisement

ನಗರದ ಮಿನಿವಿಧಾನಸೌಧದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರ ಪ್ರಥಮ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದನಗಳನ್ನು ರಸ್ತೆಗೆ ಬಿಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಅಲ್ಲದೇ, ಬೈಕ್‌ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಕಾರಣ ಗೋ ಶಾಲೆಗೆ ಸಾಗಿಸಿದ ಬಿಡಾಡಿ ದನಗಳನ್ನು ದಂಡ ವಿಧಿಸದೇ ಬಿಡುಗಡೆ ಮಾಡಬಾರದು. ಬಿಡುಗಡೆ ಮಾಡುವಂತೆ ಯಾವುದೇ ಒತ್ತಡ ಬಂದರೆ ಸಂಬಂಧಪಟ್ಟ ಪೌರಾಯುಕ್ತರು ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಜಿಲ್ಲೆಯ ನಗರ ಸಭೆಗಳ ವ್ಯಾಪ್ತಿಯಲ್ಲಿ ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಮಾತನಾಡಿ, ಬಿಡಾಡಿ ದನಗಳ ಹಾವಳಿ ತಡೆಗೆ ನಗರಸಭೆ
ಕೈಗೊಂಡ ಕ್ರಮ, ವಶಪಡಿಸಿಕೊಂಡ ಬಿಡಾಡಿ ದನಗಳನ್ನು ಒಂದು ತಿಂಗಳ ನಂತರ ನಡೆಸುವ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.

ಯಾದಗಿರಿ ಹನುಮಾನ ಗೋ ಶಾಲೆ ಅಧ್ಯಕ್ಷರು ಮಾತನಾಡಿ, ಬಿಡಾಡಿ ದನಗಳು ಪ್ಲಾಸ್ಟಿಕ್‌ ಮತ್ತು ಇನ್ನಿತರ ವಸ್ತುಗಳನ್ನು
ತಿನ್ನುವುದರಿಂದ ಗೋ ಶಾಲೆ ಒಣಮೇವಿಗೆ ಹೊಂದಿಕೊಳ್ಳುವುದಿಲ್ಲ. ಕೆಲವೇ ದಿನಗಳಲ್ಲಿ ಅವು ಸಾವನ್ನಪ್ಪುತ್ತವೆ ಎಂದು ಸಭೆ ಗಮನಕ್ಕೆ ತಂದರು.

Advertisement

ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿಗಳನ್ನು ಹಾರಿಸದಂತೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು.
ಈ ಸಮಯದಲ್ಲಿ ವಶಪಡಿಸಿಕೊಂಡ ಕುರಿಮರಿಗಳನ್ನು ಹರಾಜು ನಡೆಸಿದ್ದು, 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಬಂದಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಜಿಲ್ಲಾಕಾರಿಗಳು ಅಭಿನಂದಿಸಿದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ| ಶರಣುಭೂಪಾಲರೆಡ್ಡಿ ಮಾತನಾಡಿ, ಜಿಲ್ಲಾ ಪ್ರಾಣಿ ದಯಾ ಸಂಘ 2014-15ನೇ ಸಾಲಿನಲ್ಲಿ ನೋಂದಣಿಯಾಗಿದೆ. ಸಂಘವನ್ನು ಲೆಕ್ಕ ಪರಿಶೋಧನೆಗೊಳಪಡಿಸಿ ನವೀಕರಿಸಲಾಗಿದ್ದು, ಸಂಘದ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆಯಲಾಗಿದೆ. ಸರಕಾರದಿಂದ 80 ಸಾವಿರ ರೂ. ಅನುದಾನ ಬಿಡುಗಡೆಯಾಗಿದ್ದು, ಅನುದಾನಕ್ಕೆ ತಕ್ಕಂತೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಘದ ಬಗ್ಗೆ ಅರಿವು ಮೂಡಿಸಲು ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ಜಿಪಂ ಸದಸ್ಯರ ಸಹಕಾರದಲ್ಲಿ 45 ಸಾವಿರ ರೂ. ವೆಚ್ಚದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವುದು. 24 ಸಾವಿರದಲ್ಲಿ ಹೋಬಳಿ ಮಟ್ಟದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ಆಯೋಜಿಸುವುದು. ಇನ್ನುಳಿದ 11 ಸಾವಿರ ರೂಪಾಯಿ ಬಿಡಾಡಿ ದನಗಳನ್ನು ರಸ್ತೆ ಮೇಲೆ ಬಿಡದಂತೆ ಜಾನುವಾರು ಮಾಲೀಕರಿಗೆ ತಿಳಿವಳಿಕೆ ನೀಡಲು ಆಟೋದಲ್ಲಿ ಧ್ವನಿ ವರ್ಧಕ ಮೂಲಕ ಪ್ರಚಾರ ಮತ್ತು ಕರಪತ್ರ ಮುದ್ರಿಸಲು ಖರ್ಚು ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕರಪತ್ರದಲ್ಲಿ ಸಹಾಯವಾಣಿ ಸಂಖ್ಯೆ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಂಘದ ಸದಸ್ಯರಾದ ಸಂದೀಪ ದೋಖಾ ಜೈನ್‌, ಅಜಿತ್‌ ದೋಖಾ ಜೈನ್‌, ಶಹಾಪುರದ ವಿಶ್ವ ಗೋಮಾತಾ ಗುರುಕುಲ
ಗೋ ಶಾಲೆ ಅಧ್ಯಕ್ಷರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು, ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next