ಗದಗ: ಪೆನ್ ಡ್ರೈವ್ ಪ್ರಕರಣಗಳ ದೂರುದಾರರ, ನೊಂದ ಮಹಿಳೆಯರ, ಸಾಕ್ಷಿದಾರರ ಗೌಪ್ಯತೆ ಕಾಪಾಡುವುದು, ರಕ್ಷಣೆ ನೀಡುವ ಸಲುವಾಗಿ ವಿಚಾರಣೆ ದಿನಗಳಂದು ಎಸ್ಐಟಿ ವಿಚಾರಣೆ ನಡೆಸುವ ನ್ಯಾಯಾಲಯಗಳನ್ನು ಗುರುನಾನಕ ಭವನಕ್ಕೆ ಸ್ಥಳಾಂತರಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಗೆ ಪತ್ರ ಬರೆಯಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಸೂಕ್ಷ್ಮವಾಗಿ ತನಿಖೆ ಮಾಡುತ್ತಿದೆ. ಪೆನ್ ಡ್ರೈವ್ ಪ್ರಕರಣಗಳ ವಿಚಾರಣೆ ಸಲುವಾಗಿ ಪ್ರಕರಣಗಳ ವಿಚಾರಣೆ ದಿನಗಳಂದು ಮಾತ್ರ ಬೆಂಗಳೂರಿನ ಯುಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಗುರುನಾನಕ ಭವನಕ್ಕೆ 42ನೇ ಎಸಿಎಂಎಂ ನ್ಯಾಯಾಲಯ, ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ, ಸಿವಿಲ್ ಕೋರ್ಟ್ ಆಂಡ್ ಸೆಷನ್ ಜಡ್ಜ್ ನ್ಯಾಯಾಲಯಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವಂತೆ ಪತ್ರ ಬರೆಯಲಾಗಿದೆ ಎಂದರು.
ಬಡವ-ಶ್ರೀಮಂತರ ನಡುವಿನ ಚುನಾವಣೆ: ಶಾಂತಿಯುತ ಚುನಾವಣೆ ನಡೆದಿದ್ದು, ಬಹುದೊಡ್ಡ ಸಂಖ್ಯೆಯಲ್ಲಿ ಮತದಾರ ಶಾಂತಿ, ಶಿಸ್ತು ಕಾಪಾಡಿಕೊಂಡು ಮತದಾನ ಮಾಡಿದ್ದಾರೆ. ಯಾವುದೇ ಗದ್ದಲ, ಗಲಾಟೆ, ಪ್ರಕರಣ ದಾಖಲಾಗದೇ ಶಾಂತಿಯುತ ಮತದಾನ ನಡೆದಿದ್ದಕ್ಕೆ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಹಿಳೆಯರು ಈಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಳಿಗ್ಗೆ 7ರಿಂದಲೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ. ಬದುಕು-ಭಾವನೆ, ಬಡವ-ಶ್ರೀಮಂತರ ನಡುವೆ ನಡೆದ ಚುನಾವಣೆಯಾಗಿದ್ದು, ಈ ಚುನಾವಣೆ ಗ್ಯಾರಂಟಿ ಯೋಜನೆಗೆ ರೆಫರೆಂಡಂ ಇದ್ದಹಾಗೆ ಎಂದು ಎಚ್.ಕೆ ಪಾಟೀಲ್ ಹೇಳಿದರು.
ಗದಗ ಮತಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೂ ಹೆಚ್ವಿನ ಮತಗಳನ್ನು ಗಳಿಸುತ್ತೇವೆ, ಅದೇ ರೀತಿ ರೋಣ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿಯೂ ಹೆಚ್ಚಿನ ಲೀಡ್ ಪಡೆಯಲಿದ್ದೇವೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು 1.5ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದ ವಾರ್ಡವಾರು ಮುಖಂಡರ ಸಭೆ ನಡೆಸಿದ್ದು, 20 ಸಾವಿರ ಮತಗಳು ಲೀಡ್ ಬರಲಿವೆ. ಮತದಾನದ ಪ್ರಮಾಣ ಹೆಚ್ಚಳವಾಗಿದ್ದು ಮತದಾರರು ಜಾಗೃತರಾಗಿದ್ದಾರೆ ಎಂದರು.
ಮಿತವಾಗಿ ನೀರು ಬಳಸಿ: ಗದಗ-ಬೆಟಗೇರಿ ಅವಳಿ ನಗರದ ಸೇರಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ನದಿಪಾತ್ರಗಳಲ್ಲಿಯೂ ನೀರಿಲ್ಲ, ಭದ್ರಾ ಡ್ಯಾಂನಲ್ಲಿ 8 ಟಿಎಂಸಿ ಮಾತ್ರ ನೀರಿದೆ, ನೀರು ಬಿಡಲು ಮನವಿ ಮಾಡಲಾಗಿದೆ. ಡೆಡ್ ಸ್ಟೋರೇಜ್ ಮೂಲಕ ನೀರನ್ನು ಬಳಕೆ ಮಾಡಲಾಗುತ್ತಿದೆ, ನೀರನ್ನು ಮಿತವಾಗಿ ಬಳಸಲು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ ಎಂದು ಸಚಿವರು ಹೇಳಿದರು.