ಬೆಂಗಳೂರಿನಲ್ಲಿ ಒಂದು ಸಭೆ ನಡೆಯುತ್ತಿತ್ತು. ಪೇಜಾವರ ಶ್ರೀಗಳ ಹೆಸರಿನಲ್ಲಿ ನಡೆಯುವ ಸಾಮಾಜಿಕ ಯೋಜನೆಗಳಿಗೆ ದೇಣಿಗೆ ನೀಡುವ ಅವಕಾಶವಿತ್ತು. ಈ ಅವಕಾಶವನ್ನು ಒಬ್ಬ ದುರುಪಯೋಗಿಸಿಕೊಂಡ. ಸಿಕ್ಕಿ ಬಿದ್ದಾಗ ಆತನನ್ನು ಸ್ವಾಮಿಗಳ ಮುಂದೆ ಹಾಜರುಪಡಿಸಲಾಯಿತು. ಅವರು ಮೊದಲು ಕೇಳಿದ್ದು “ಊಟ ಆಗಿದೆಯೆ?’. ಆತ “ಇಲ್ಲ’ ಎಂದ. ಅವನಿಗೆ ಊಟ ಹಾಕಿಸಿ ದುಡ್ಡನ್ನೂ ಕೊಟ್ಟು ಇನ್ನು ಮುಂದೆ ಹೀಗೆ ಮಾಡಬೇಡ ಎಂದು ಕಳುಹಿಸಿದರು. “ನಾನು ಯಾರಿಗಾಗಿ ಹಣ ಕೇಳುವುದು, ನನಗಾಗಿಯೋ? ಅಲ್ಲ, ನೊಂದವರಿಗಾಗಿ. ಅವನೂ ಅದೇ ಗುಂಪಿನಲ್ಲಿ ಸೇರಿದವ. ನನ್ನ ಹೆಸರಿನಿಂದ ಅವನಿಗೆ ಹೀಗೆ ಸಂದಾಯವಾಯಿತು. ಅದು ದೈವೇಚ್ಛೆ’. ಇದು ಶ್ರೀ ವಿಶ್ವೇಶತೀರ್ಥರ ವಿಚಾರ ಸರಣಿ.
Advertisement
ಜೀವನೋಪಾಯಕ್ಕೆ ಕಳವುಶ್ರೀಕೃಷ್ಣ ಮಠದಲ್ಲಿ ಅವರ ಮೂರನೇ ಪರ್ಯಾಯ ಅವಧಿಯಲ್ಲಿ ಹೀಗೆಯೇ ಒಂದು ಘಟನೆ ನಡೆಯಿತು. ಬಡಗುಮಾಳಿಗೆಯಲ್ಲಿ ಒಬ್ಬ ಹಿಂಬಾಗಿಲಿನಿಂದ ಬಂದು ಗೋಣಿ ಚೀಲ ಕದಿಯುತ್ತಿದ್ದ. ಒಂದು ದಿನ ಸಿಕ್ಕಿಬಿದ್ದ. ಹತ್ತಾರು ಸಿಬಂದಿ ಸೇರಿ ಹೊಡೆಯುತ್ತಿದ್ದರು. ಸ್ವಾಮಿಗಳು ನೋಡಿದರು. ಏನು ಎಂದು ವಿಚಾರಿಸಿದಾಗ ಕಳ್ಳ ಎಂದರು. ವಿಷಯ ತಿಳಿದುಕೊಂಡ ಸ್ವಾಮೀಜಿ, “ಆತ ಜೀವನೋಪಾಯಕ್ಕಾಗಿ ಕದಿಯುತ್ತಿದ್ದಾನೆ. ಬಿಟ್ಟುಬಿಡಿ’ ಎಂದರು. “ಊಟ ಆಯಿತೇ’ ಎಂದು ವಿಚಾರಿಸಿ ಊಟ ಆಗಿಲ್ಲ ಎಂದಾಗ ಊಟಕ್ಕೆ ಕಳುಹಿಸಿಕೊಟ್ಟರು.
ನಾಲ್ಕನೇ ಪರ್ಯಾಯದಲ್ಲಿ ಅಪರಾಹ್ನ 3.30ಕ್ಕೆ ಉತ್ತರ ಕರ್ನಾಟಕ ಶಾಲಾ ಮಕ್ಕಳು ಬಂದು ಸ್ವಾಮೀಜಿಯವರನ್ನು ನೇರವಾಗಿ ಭೇಟಿ ಮಾಡಿದರು. ವಿಚಾರಿಸಿದಾಗ ಅವರ ಊಟ ಆಗಿರಲಿಲ್ಲ. ಊಟದ ವ್ಯವಸ್ಥಾಪಕರಿಗೆ ಹೇಳಿ ಊಟಕ್ಕೆ ಹೋಗಲು ತಿಳಿಸಿದರು. ಅಲ್ಲಿ ಬಡಿಸುವವರು ಉದಾಸೀನ ಮಾಡುವುದು ತಿಳಿದುಬಂತು. ಶ್ರೀಗಳೇ ಕಾವಿಶಾಟಿಯನ್ನು ಸೊಂಟಕ್ಕೆ ಕಟ್ಟಿ ಬಡಿಸಲು ಆರಂಭಿಸಿದಾಗ ಸಿಬಂದಿ ಎಚ್ಚರಗೊಂಡರು ಎನ್ನುತ್ತಾರೆ ಶ್ರೀಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸುಬ್ರಹ್ಮಣ್ಯ ಪೆರಂಪಳ್ಳಿ. ಮಠಾಧಿಪತಿಗಳಿಗೆ ಈ ಉಸಾಬರಿ ಏಕೆ ಎಂದವರಿಗೆ ಉತ್ತರ
ಶ್ರೀಗಳು 1986ರಲ್ಲೊಮ್ಮೆ ಗದುಗಿನಿಂದ ಬಾಗಲಕೋಟೆಗೆ ಹೊರಟಿದ್ದರು. ಬಿಸಿಲ ಝಳ. ನೀರಿನ ಸುಳಿವೇ ಇಲ್ಲದ ಹಳ್ಳಿ. ಕುಡಿಯಲು ನೀರಿನ ಅನುಕೂಲವಿದೆಯೆ ಎಂದು ಒಬ್ಬರಲ್ಲಿ ಪ್ರಶ್ನಿಸಿದರು. “ಇನ್ನೆನ್ರಿಯಪ್ಪಾ ಗಂಗಾಳ, ಚರಿಗೆ ಮಾರೋದೊಂದು ಉಳಿದೈತಿ’ ಎಂದ. ಶ್ರೀಗಳ ಸೂಚನೆಯಂತೆ ವಿಹಿಂಪ ಕಾರ್ಯಕರ್ತರು ಸಹಾಯಕ್ಕೆ ಬಂದರು. 75,000 ರೂ. ಯೋಜನೆ ರೂಪಿಸಿ ಕಾರಡಗಿರಿ ಕೆರೆಯ ಹೂಳೆತ್ತಿದರು. ಜನರ ಹೊಟ್ಟೆ ತುಂಬಿತು, ಕೆರೆ ನೀರಿನಿಂದ ಕೂಡಿತು. ಪರ್ಯಾಯ ಮುಗಿಸಿದ ಬಳಿಕ ಶ್ರೀಗಳ ಮೊದಲು ಭೇಟಿ ನೀಡಿದ್ದು ಬಾಗಲಕೋಟೆಯ ಕರುವಿನಕೊಪ್ಪ ಗೋಶಾಲೆಗೆ. 1978ರ ಹಂಸಲದಿವಿ ಸಮುದ್ರದ ಅಲೆ ಅಬ್ಬರಕ್ಕೆ ತುತ್ತಾದ ಬಡಜನತೆಗೆ, 1995ರ ಗೋವಿಂದಪುರ ಭೂಕಂಪದ ಗುರಿಯಾದ ಸಂದರ್ಭ ಸಾರ್ವಜನಿಕರ ಕೊಡುಗೆಯಿಂದ 150 ಮನೆಗಳನ್ನು ಕಟ್ಟಿಸಿಕೊಟ್ಟರು.