Advertisement

ಪೇಜಾವರ ಶ್ರೀ ಶಿಲಾವೃಂದಾವನಕ್ಕೆ ಅಂತಿಮ ಸ್ಪರ್ಶ! ನಿರ್ಯಾಣ ಹೊಂದಿ ವರ್ಷ ಸಮೀಪಿಸುತ್ತಿದೆ!

12:34 AM Nov 08, 2020 | sudhir |

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಿರ್ಯಾಣ ಹೊಂದಿ ಒಂದು ವರ್ಷ ಸಮೀಪಿಸುತ್ತಿದೆ. ಶಿಲಾಮಯವಾದ ಸರ್ವಾಂಗ ಸುಂದರ ವೃಂದಾವನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಡಿ. 17ರಂದು ಪ್ರತಿಷ್ಠೆ ನಡೆಯಲಿದೆ.

Advertisement

ಸಂಪ್ರದಾಯ ಪ್ರಕಾರ ಶ್ರೀಗಳು ನಿರ್ಯಾಣ ಹೊಂದಿ ವರ್ಷವಾಗುವಾಗ ವೃಂದಾವನ ಪ್ರತಿಷ್ಠೆ ಆಗಬೇಕು. ಕೊರೊನಾ ಕಾರಣದಿಂದ ಡಿ. 17ರಂದು ವಾರ್ಷಿಕ ಪುಣ್ಯತಿಥಿ ಸಮಯದಲ್ಲಿ ಕೇವಲ ಧಾರ್ಮಿಕ ಅಗತ್ಯಕ್ಕೆ ಅನುಸಾರವಾಗಿ ನಡೆಯಲಿದೆ.

ಗುರು-ಶಿಷ್ಯರ ದ್ಯೋತಕ
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಭವ್ಯ ಶಿಲಾಮಯ ವೃಂದಾವನ ನಿರ್ಮಿಸಲಾಗುತ್ತಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಪೇಜಾವರ ಶ್ರೀಗಳ ವೃಂದಾವನ ಸಮೀಪವೇ ಅವರ ಅಪೇಕ್ಷೆಯಂತೆ ಅವರ ವಿದ್ಯಾಗುರುಗಳಾದ ಭಂಡಾರಕೇರಿ ಮತ್ತು ಪಲಿಮಾರು ಮಠಾಧೀಶರಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥರ ಮೃತ್ತಿಕಾ ವೃಂದಾವನವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಶೇ. 80ರಷ್ಟು ಕೆಲಸ ಪೂರ್ಣವಾಗಿದ್ದು, ಜೋಡಿಸುವ ಕೆಲಸ ನಡೆಯುತ್ತಿದೆ.

ಮೂರು ಶಿಲೆಗಳ ಸಮುಚ್ಚಯ
ಇಳಕಲ್ಲಿನ ಕೆಂಪು ಕಲ್ಲಿನ ಕೆಲಸ ಮುರುಡೇಶ್ವರದಲ್ಲಿಯೂ, ನೆಲ್ಲಿಕಾರಿನ ಕಪ್ಪು ಕಲ್ಲು- ಕಾರ್ಕಳದ ಬೂದು ಬಣ್ಣದ ಕಲ್ಲುಗಳ ಕೆಲಸ ಉಡುಪಿಯ ಎಲ್ಲೂರಿನಲ್ಲಿಯೂ ನಡೆಯುತ್ತಿದೆ. ಗುಂಡಿಬೈಲು ಸುಬ್ರಹ್ಮಣ್ಯ ಭಟ್‌ ಅವರ ವಾಸ್ತು ಮಾರ್ಗದರ್ಶನದಲ್ಲಿ ಎಲ್ಲೂರು ವಿಷ್ಣುಮೂರ್ತಿ ಭಟ್‌ ನೇತೃತ್ವದ ತಂಡ ಕೆಲಸ ಮಾಡುತ್ತಿದೆ. ವೃಂದಾವನದಲ್ಲಿ ಮೂಡಿರುವ ಭಗವದ್ರೂಪಗಳನ್ನು ಬೆಂಗಳೂರಿನ ವಾಸ್ತುತಜ್ಞ ಶೇಷಗಿರಿ ರಾವ್‌ ವಿನ್ಯಾಸ ಮಾಡಿದ್ದಾರೆ. ಸುಮಾರು ಮೂರು ತಿಂಗಳುಗಳಿಂದ ನಾಲ್ಕೈದು ತಂಡಗಳ 20 ಕುಶಲಕರ್ಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಭಗವದ್ರೂಪಗಳ ಕೆತ್ತನೆ
ಎರಡೂ ವೃಂದಾವನಗಳ ಒಟ್ಟು ಎತ್ತರ ಸುಮಾರು ನಾಲ್ಕು ಅಡಿ. ಶ್ರೀ ವಿದ್ಯಾಮಾನ್ಯತೀರ್ಥರ ವೃಂದಾವನ ಒಂದು ಇಂಚು ಎತ್ತರವಿದೆ. ಗುಡಿಯ ಒಟ್ಟು ಎತ್ತರ 13 ಅಡಿ ಮತ್ತು ಒಟ್ಟು ವಿಸ್ತೀರ್ಣ 234 ಅಡಿ. ಎರಡೂ ವೃಂದಾವನಗಳಲ್ಲಿ ಕಣ್ಣಿಗೆ ಕಾಣುವಂತಹ ಮತ್ತು ಸಣ್ಣ ಸಣ್ಣ ದೇವತಾ ವಿಗ್ರಹಗಳನ್ನು ನಿರ್ಮಿಸಲಾಗಿದೆ. ಪೇಜಾವರ ಶ್ರೀಗಳ ವೃಂದಾವನದಲ್ಲಿ ಒಂಬತ್ತು ಭಗವದ್ರೂಪಗಳು, ಹನುಮ- ಭೀಮ-ಮಧ್ವ-ವಾಯು ಹೀಗೆ ಒಟ್ಟು 14 ರೂಪಗಳು, ಪೀಠಪೂಜಾ ಕ್ರಮದಂತೆ ಕೂರ್ಮಾದಿ ಮೂರು ರೂಪಗಳು ಕಣ್ಣಿಗೆ ಕಾಣುವಷ್ಟು ದೊಡ್ಡದಿವೆ. ಪುಷ್ಪಾಕೃತಿಗಳಲ್ಲಿ ಸುಮಾರು 75 ರೂಪಗಳಿವೆ. ಶ್ರೀವಿದ್ಯಾಮಾನ್ಯರ ವೃಂದಾವನದಲ್ಲಿ ಸುಮಾರು ಇದೇ ಪ್ರಮಾಣದಲ್ಲಿ ದೇವತಾ ವಿಗ್ರಹಗಳಿವೆ.

Advertisement

ನಂಬಲಾಗದ ವರ್ಷಪೂರ್ತಿ
ಕೊನೆಗಾಲದವರೆಗೂ ಸಾಮಾಜಿಕವಾಗಿ, ಧಾರ್ಮಿಕವಾಗಿ ಕ್ರಿಯಾ ಶೀಲರಾಗಿದ್ದ ವಿಶ್ವೇಶತೀರ್ಥ ಶ್ರೀಪಾದರು ಇಲ್ಲವಾಗಿ ವರ್ಷವಾಗುತ್ತಿದೆ ಎಂದರೆ ನಂಬಲಾಗುತ್ತಿಲ್ಲ. ಇದಕ್ಕೆ ಹಲವು ಕಾರಣಗಳು, ಅವುಗಳಲ್ಲಿ ಒಂದು ಬಲವಾದದ್ದು.
2019 ಡಿ.19 ರಾತ್ರಿಯ ವರೆಗೂ ನಿರಂತರವಾಗಿ ಸಂಚರಿಸಿ ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದ ಶ್ರೀಗಳ ಭೌತಿಕ ಶರೀರಕ್ಕೆ ಅನಂತರ ಸುಸ್ತಾಯಿತು. ಡಿ. 20ರ ಬೆಳಗ್ಗೆ ಆಸ್ಪತ್ರೆಗೆ ದಾಖಲಾದ ಶ್ರೀಗಳು ಐಸಿಯುನಲ್ಲಿದ್ದರು. ಡಿ. 26ರ ಬಳಿಕ ಅವರ ಆರೋಗ್ಯ ಕುಸಿಯುತ್ತ ಹೋಗಿ ಡಿ. 29ರಂದು ಅವರು ಕೃಷ್ಣೆ„ಕ್ಯರಾದರು. ಡಿ. 31ರಂದು ಚೀನದಲ್ಲಿ ಪತ್ತೆಯಾದ ಕೊರೊನಾ ಸೋಂಕು ಬಳಿಕ ಜಗತ್ತಿನ ಎಲ್ಲ ಆಗುಹೋಗುಗಳನ್ನೂ ಮರೆಸುವಂತೆ ಮಾಡಿತು, ಪೇಜಾವರ ಶ್ರೀಗಳನ್ನೂ.

ನ. 10: ಅಂದು ಇಂದು…
2017ರ ನ. 24-26ರಂದು ಉಡುಪಿಯಲ್ಲಿ ನಡೆದ ಧರ್ಮಸಂಸದ್‌ ಅಧಿವೇಶನದಲ್ಲಿ “ಇನ್ನೆರಡು ವರ್ಷಗಳಲ್ಲಿ ಅಯೋಧ್ಯೆ ವಿವಾದ ಬಗೆಹರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಪೇಜಾವರ ಶ್ರೀ ವಿಶ್ವೇಶತೀರ್ಥರು 2019ರ ನ. 9ರಂದು ಅಯೋಧ್ಯೆ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಡುಪಿಯಲ್ಲಿದ್ದು ವೀಕ್ಷಿಸಿದ್ದರು. ನ. 10ರಂದು ದಿಲ್ಲಿಗೆ ತೆರಳಿ ಸಭೆಯಲ್ಲಿ ಪಾಲ್ಗೊಂಡರು. ಈಗ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸಭೆ ದಿಲ್ಲಿಯಲ್ಲಿ ನ. 10-11ರಂದು ನಡೆಯಲಿದ್ದು ಟ್ರಸ್ಟಿಯಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಪಾಲ್ಗೊಳ್ಳಲಿದ್ದಾರೆ.

ಗುರುಗಳ ಪ್ರಥಮ ಆರಾಧನೋತ್ಸವವನ್ನು ಅದ್ದೂರಿ ಯಾಗಿ ನಡೆಸ ಬೇಕೆಂ ದಿದ್ದೆವು. ಆದರೆ ಕೊರೊನಾ ಅಡ್ಡಿಯಾಗಿದೆ. ಆದ್ದರಿಂದ ಸರಳವಾಗಿ, ಧಾರ್ಮಿಕ ರೀತಿ ನೀತಿಗಳಿಗೆ ಚ್ಯುತಿ ಬಾರದಂತೆ ವೃಂದಾ ವನ ಪ್ರತಿಷ್ಠೆಯನ್ನು
ಡಿ. 17ರಂದು ನಡೆಸಲಾಗುವುದು.
– ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ, ಉಡುಪಿ.

ವೃಂದಾವನ ಗುಡಿಯ ನಿರ್ಮಾಣಕ್ಕೆ ಸುಮಾರು 40 ಲ.ರೂ. ತಗಲುತ್ತಿದೆ. ಇದಲ್ಲದೆ ಪಕ್ಕದಲ್ಲಿಯೇ ವಸ್ತು ಸಂಗ್ರಹಾಲಯ, ಧ್ಯಾನಕೇಂದ್ರ ಇತ್ಯಾದಿ ಒಳಗೊಂಡ 1 ಕೋ.ರೂ. ವೆಚ್ಚದ ಸಮುಚ್ಚಯ ನಿರ್ಮಾಣದ ಯೋಜನೆ ಇದೆ.
– ಕೇಶವಾಚಾರ್ಯ, ಕಾರ್ಯದರ್ಶಿ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಬೆಂಗಳೂರು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next