ಉಡುಪಿ: ಹರಿಯುವ ನೀರಿನ ಮೇಲೆ ಒಣ ಎಲೆಯೂ ತೇಲಿ ಬರುತ್ತದೆ, ದೋಣಿಯೂ ತೇಲಿ ಸಾಗುತ್ತದೆ. ಆದರೆ ತರಗೆಲೆಯ ಮೇಲೆ ಹಕ್ಕಿ ಕುಳಿತರೂ ಮುಳುಗುತ್ತದೆ. ದೋಣಿ ತನ್ನ ಮೇಲೆ ಹತ್ತಾರು ಜನರನ್ನು ಹೊತ್ತು ದಡ ಸೇರಿಸುತ್ತದೆ. ಹೀಗೆ ತನ್ನ ಅಸ್ತಿತ್ವಕ್ಕೆ ಸಾರ್ಥಕ್ಯ ತರುತ್ತದೆ. ನಮ್ಮೆಲ್ಲರ ಜೀವನವೂ ದೋಣಿಯಂತಾದಾಗ ಜನ್ಮಕ್ಕೊಂದು ಸಾರ್ಥಕ್ಯ ಬರುತ್ತದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂದೇಶ ನೀಡಿದರು.
ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ 60ನೇ ಜನ್ಮವರ್ಧಂತಿ ಪ್ರಯುಕ್ತ ಭಕ್ತರು ಹಮ್ಮಿಕೊಂಡ ಗುರುವಂದನ ಕಾರ್ಯಕ್ರಮದಲ್ಲಿ ಸುವರ್ಣಾಭಿಷೇಕ, ಪುಷ್ಪಾಭಿಷೇಕ ಸಹಿತ ಅಭಿವಂದನೆ ಶ್ರೀಪಾದರು ಸ್ವೀಕರಿಸಿ ಆಶೀರ್ವಚನ ನೀಡಿದರು.
ವೇ|ಮೂ| ರಾಮಕೃಷ್ಣ ತಂತ್ರಿ, ವಿ| ಲಕ್ಷಿ ನಾರಾಯಣ ತಂತ್ರಿಗಳ ನೇತೃತ್ವದಲ್ಲಿ ಧನ್ವಂತರಿ ಯಾಗ, ವಿರಜಾ ಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನಡೆದವು. ವಿ| ರಘೂತ್ತಮಾಚಾರ್ಯ ನಾಗಸಂಪಿಗೆ, ವಿ| ವೇಂಕಟೇಶಾಚಾರ್ಯ ಕುಲಕರ್ಣಿ ಅಭಿನಂದನ ಮಾತುಗಳನ್ನಾಡಿದರು. ಮುಚ್ಲುಕೋಡು ಸೀಮೆಯ ವಿಪ್ರ ಬಂಧುಗಳು ಶ್ರೀಗಳಿಗೆ ಸುವರ್ಣಾಭಿ ಷೇಕ, ಪುಷ್ಪಾಭಿಷೇಕ, ಫಲ ಕಾಣಿಕೆ ಅರ್ಪಿಸಿದರು. ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರೀಗಳಿಗೆ ಫಲಪುಷ್ಪ ಸಹಿತ ಅಭಿವಂದನೆ ಸಲ್ಲಿಸಿದರು.
ಶಾಸಕ ರಘುಪತಿ ಭಟ್, ಡಾ| ವ್ಯಾಸರಾಜ ತಂತ್ರಿ, ಡಾ| ಚಂದ್ರಶೇಖರ್, ಯಶ್‌ಪಾಲ್ ಸುವರ್ಣ, ಭುವನೇಂದ್ರ ಕಿದಿಯೂರು, ಮುರಲಿ ಕಡೆಕಾರ್, ಪ್ರದೀಪ್ ಕಲ್ಕೂರ, ಪ್ರೊ| ಎಂ.ಬಿ. ಪುರಾಣಿಕ್, ಉಮೇಶ ಶೆಟ್ಟಿ, ಜಗದೀಶ್ ಪೈ, ಹರಿದಾಸ ಭಟ್ ಮುಂಬಯಿ, ನಾಗರಾಜ ಪುರಾಣಿಕ್, ಶ್ಯಾಮಲಾ ಕುಂದರ್, ಶ್ರೀಶ ನಾಯಕ್ ಮತ್ತು ಅರ್ಚಕ ವೃಂದ, ಪೇಜಾವರ ಮಠದ ಸುಬ್ರಹ್ಮಣ್ಯ ಭಟ್, ಇಂದು ಶೇಖರ ಹೆಗಡೆ, ರಾಜಶೇಖರ್, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್, ಸುಬ್ರಹ್ಮಣ್ಯ ಆಚಾರ್ಯ ಉಪಸ್ಥಿತರಿದ್ದರು.
ಚಿತ್ರನಟಿ ಬಿಜೆಪಿ ನಾಯಕಿ ಮಾಳವಿಕಾ ಶ್ರೀಗಳಿಗೆ ಗೌರವ ಸಲ್ಲಿಸಿದರು. ವಿ| ಷಣ್ಮುಖ ಹೆಬ್ಟಾರ್ ಸ್ವಾಗತಿಸಿ ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆಗೈದು ನಿರೂಪಿಸಿದರು.