Advertisement

ಕಡಲೆಕಾಯಿ ಪರಿಷೆ: 9 ಲಕ್ಷ ಜನ ಭೇಟಿ

11:36 AM Nov 15, 2017 | Team Udayavani |

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮಂಗಳವಾರ ಅದ್ಧೂರಿ ತೆರೆ ಬಿದ್ದಿತು. ಆದರೆ, ಕಡಲೆಕಾಯಿ ಮಾರಾಟ ಭರಾಟೆ ಮಾತ್ರ ಇನ್ನೂ ಎರಡು ದಿನಗಳು ಮುಂದುವರಿಯಲಿದೆ. 

Advertisement

ಐದು ಶತಮಾನಗಳ ಇತಿಹಾಸವಿರುವ ಪಾರಂಪರಿಕ ಕಡಲೇಕಾಯಿ ಪರಿಷೆಗೆ ಈ ಬಾರಿ ಸುಮಾರು ಒಂಬತ್ತು ಲಕ್ಷ ಜನ ಸಾಕ್ಷಿಯಾದರು. ಧಾರ್ಮಿಕ ಹಾಗೂ ಪಾರಂಪರಿಕ ಹಿನ್ನೆಲೆಯೊಂದಿಗೆ ನಡೆದುಬಂದ ಪರಿಷೆ ಈಗ ಆಧುನಿಕ ಸ್ಪರ್ಶ ಪಡೆದಿದೆ. ಇದರಿಂದ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. 

ಅಂದಾಜು ಎರಡು ಸಾವಿರ ಕಡಲೇಕಾಯಿ ಮಳಿಗೆಗಳು, 100 ರಿಂದ 150 ತಿಂಡಿ-ತಿನಿಸು ಮತ್ತಿತರ ವಸ್ತುಗಳ ಮಾರಾಟ ಮಳಿಗೆಗಳು ಪರಿಷೆಯಲ್ಲಿ ತಲೆಯೆತ್ತಿದ್ದವು. ಕೊನೆಯ ದಿನವಾಗಿದ್ದರಿಂದ ಕಡಲೆಕಾಯಿ ಖರೀದಿಗೆ ಜನ ಅಕ್ಷರಶಃ ಮುಗಿಬಿದ್ದಿದ್ದರು.

ಆರಂಭದಲ್ಲಿ ವ್ಯಾಪಾರ-ವಹಿವಾಟಿನ ಕೊರತೆ ಎದುರಿಸುತ್ತಿದ್ದ ವ್ಯಾಪಾರಿಗಳು ಕೊನೆಯ ದಿನ ಖುಷಿ ಖುಷಿಯಿಂದಲೇ ಕಡಲೇ ಕಾಯಿ ವ್ಯಾಪಾರ ಮಾಡಿದರು. ಮೊದಲ ದಿನ ಲೀಟರ್‌ ಕಡಲೆಕಾಯಿಗೆ 50ರಿಂದ 60 ರೂ. ಇತ್ತು. ಕೊನೆಯ ದಿನ ಇದು 15 ರಿಂದ 20 ರೂ. ಆಗಿತ್ತು. 

ಇನ್ನು ಆಧುನಿಕತೆ ಭರಾಟೆ ಮಧ್ಯೆಯೂ ಪಾರಂಪರಿಕ ಕಡಲೆಕಾಯಿ ಪರಿಷೆ ಮಾತ್ರ ಹಿಂದಿನ ವೈಭವ ಉಳಿಸಿಕೊಂಡು ಬರುತ್ತಿದೆ. ಜತೆಗೆ ಜನರಿಗೆ ಹೆಚ್ಚು ಹತ್ತಿರ ಆಗುತ್ತಿದೆ. ಆಧುನಿಕತೆಯ ಜತೆಗೆ ಗ್ರಾಮೀಣ ಸೊಗಡು ಇದರಲ್ಲಿ ಸಮ್ಮಿಳಿತಗೊಂಡಿದೆ.

Advertisement

ಅದರಲ್ಲೂ ಮಕ್ಕಳಿಗೆ ಗ್ರಾಮೀಣ ಸೊಗಡಿನ ಜಾತ್ರೆಯ ಚಿತ್ರಣ ನೀಡುವುದರಿಂದ ಹೆಚ್ಚು ಉಪಯುಕ್ತ ಎನಿಸಿದೆ. ಎಲ್ಲ ವರ್ಗ, ಸಂಸ್ಕೃತಿಯ ಜನರು ಪಾಲ್ಗೊಳ್ಳುತ್ತಿರುವುದು ಪರಿಷೆಯ ಯಶಸ್ಸಿಗೆ ಕಾರಣ ಎನ್ನುತ್ತಾರೆ ಪರಿಷೆಯಲ್ಲಿ ಭಾಗವಹಿಸಿದ್ದ ವಿಜಯನಗರದ ನಿವಾಸಿ ಕುಮಾರ್‌. 

ಕೊನೆಯ ದಿನ ನಗರದ ನಾನಾ ಭಾಗಗಳಿಂದ ಜನ ಪರಿಷೆಗೆ ಲಗ್ಗೆ ಇಟ್ಟಿದ್ದರಿಂದ ಬಸವನಗುಡಿ ಕೂಡುವ ರಸ್ತೆಗಳಲ್ಲಿ ಸಂಚಾರದಟ್ಟಣೆ ಹೆಚ್ಚಿತ್ತು. ಇದನ್ನು ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next