ಬೆಂಗಳೂರು: ಬಸವನಗುಡಿಯ ದೊಡ್ಡಗಣಪತಿ ದೇವಾಲಯದ ಐತಿಹಾಸಿಕ ಕಡಲೆಕಾಯಿ ಪರಿಷೆ ಸೋಮವಾರದಿಂದ 2 ದಿನಗಳ ಕಾಲ ನಡೆಯಲಿದ್ದು, ಇದಕ್ಕಾಗಿ ತಮಿಳುನಾಡು ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ಬಂದಿರುವ ವ್ಯಾಪಾರಿಗಳು ರಸ್ತೆ ಬದಿ ತಳ್ಳುವ ಗಾಡಿ, ಮಳಿಗೆಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಭರ್ಜರಿ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಕಡಲೆಕಾಯಿ ಪರಿಷೆಗೆ ಪ್ರತಿ ವರ್ಷ ಕಡೆಯ ಕಾರ್ತೀಕ ಸೋಮವಾರ (ಇಂದು) ಚಾಲನೆ ನೀಡಲಾಗುತ್ತದೆ.
ರಜಾ ದಿನವಾದ ಹಿನ್ನೆಲೆಯಲ್ಲಿ ಭಾನುವಾರವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪರಿಷೆಯಲ್ಲಿ ಸಾಲುಗಟ್ಟಿದ್ದರು. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸೋಮವಾರ ಕಾಲೇಜಿಗೆ ರಜೆಯಿಲ್ಲ. ಹೀಗಾಗಿ ಭಾನುವಾರ ಗೆಳತಿಯರ ಜತೆಗೆ ಬಂದಿರುವುದಾಗಿ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿ ಮೈತ್ರಿಯಿ ಹೇಳಿದರು.
ದೇವಸ್ಥಾನಕ್ಕೆ 5 ದಿನ ದೀಪಾಲಂಕಾರ: ಬಸವನಗುಡಿ ದೊಡ್ಡಗಣಪತಿ ದೇವಾಲಯದ ಒಳ ಮತ್ತು ಹೊರ ಭಾಗದ ದೀಪಾಲಂಕಾರ ಹೆಚ್ಚುವ ಆಕರ್ಷಣೀಯ ಮಾಡುವ ನಿಟ್ಟಿನಲ್ಲಿ ಕೆಲಸ ನಡೆದಿದೆ. ಹಿಂದಿನ ವರ್ಷ ದೀಪಾಲಂಕಾರ 2 ದಿನಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ದೇವಾಲದ ಹೊರ ಮತ್ತು ಒಳ ಭಾಗದ ದೀಪಾಲಂಕಾರವನ್ನು 5 ದಿನಕ್ಕೆ ವಿಸ್ತರಣೆ ಮಾಡಿದೆ. ಇದಕ್ಕೆ ತಗಲುವ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಕಡಲೆಕಾಯಿ ಪರಿಷೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಹೆಚ್ಚುವರಿ 2 ಟ್ಯಾಂಕರ್‌ಗಳನ್ನು ಬಸವನಗುಡಿ ಶ್ರೀ ಮಂಜುನಾಥ ಧರ್ಮಸ್ಥಳ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದೆ.
ಬೀದಿ ಜಾಗಕ್ಕಾಗಿ ವ್ಯಾಪಾರಿಗಳ ಕಿತ್ತಾಟ: ಮುಜರಾಯಿ ಇಲಾಖೆ ಮಳಿಗೆದಾರರಿಗೆ ಶುಲ್ಕ ವಿನಾಯ್ತಿ ನೀಡಿರುವ ಹಿನ್ನೆಲೆಯಲ್ಲಿ ಒಬ್ಬರೇ ಎರಡ್ಮೂರು ಕಡೆಗಳಲ್ಲಿ ಜಾಗ ಆಕ್ರಮಿಸಿದ್ದು ಕಂಡು ಬಂತು. ಒಬ್ಬ ವ್ಯಾಪಾರಿ ಒಂದು ಕಡೆಯಲ್ಲಿ ತಾನು ವ್ಯಾಪಾರ ಮಾಡಿದರೆ, ಸಮೀಪದ ದೂರದಲ್ಲೇ ಮತ್ತೂಂದು ಕಡೆ ತನ್ನ ಹಂಡತಿಯನ್ನು ಕಡಲೆ ವ್ಯಾಪಾರಕ್ಕೆ ಕೂರಿಸಿದ್ದು ಕಂಡು ಬಂತು. ಹೀಗಾಗಿ ಒಂದೇ ಕುಟುಂಬದ ಹಲವರು ಎಲ್ಲಾ ಕಡೆ ಜಾಗ ಆವರಿಸಿಕೊಂಡ ಹಿನ್ನೆಲೆಯಲ್ಲಿ ಬೀದಿ ಕಿತ್ತಾಟಕ್ಕೂ ಕೆಲಕಾಲ ಕಾರಣವಾಯಿತು. ಆದರೆ ಪೋಲಿಸರಿದ್ದಾರೆ ಭಯದ ಹಿನ್ನೆಲೆಯಲ್ಲಿ ಜಗಳ ಶಮನವಾಯಿತು. ಸರ್ಕಾರ ಸುಂಕ ವಿನಾಯ್ತಿ ನೀಡಿರುವ ಹಿನ್ನೆಲೆಯಲ್ಲಿ ಒಂದೇ ಕುಟುಂಬದಿಂದ ಮೂರ್ನಾಲ್ಕು ಮಂದಿ ಕಡಲೆ ಕಾಯಿ ಪರಿಷೆಯಲ್ಲಿ ಕಡೆಲೆಕಾಯಿ ಮಾರಾಟಕ್ಕೆ ಇಳಿದಿ ದ್ದಾರೆ. ಒಂದು ವೇಳೆ ಸುಂಕ ವಿಧಿಸಿದ್ದರೆ ಒಂದು ಕುಟುಂಬದವರು ಎರಡ್ಮೂರು ಜನರು ಮಳಿಗೆಯಿಟ್ಟು ವ್ಯಾಪಾರ ಮಾಡುತ್ತಿರಲಿಲ್ಲ ಎಂದು ವ್ಯಾಪಾರಿಯೊಬ್ಬರು ದೂರಿದರು.
ಸುಂಕ ವಿನಾಯ್ತಿಯಿಂದ ವ್ಯಾಪಾರಿಗಳು ನಿರಾಳ: ಧಾರ್ಮಿಕ ದತ್ತಿ ಇಲಾಖೆ ವ್ಯಾಪಾರಿಗಳಿಗೆ ಸುಂಕ ವಸೂಲಿ ವಿನಾಯಿತಿ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ಭಾನುವಾರ ಪರಿಷೆಯಲ್ಲಿ ಬೀಡು ಬಿಟ್ಟಿದ್ದ ತಳ್ಳು ಗಾಡಿ ವ್ಯಾಪಾರಿಗಳು ಸೇರಿದಂತೆ ಸಣ್ಣ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ದೂರವಾಗಿ ಖುಷಿ ಆವರಿಸಿಕೊಂಡಿತ್ತು. ಈ ಹಿಂದೆ ಪರಿಷೆಯಲ್ಲಿ ಮಳಿಗೆಗೆ ತೆರೆಯುವ ವರಿಗೆ ಶುಲ್ಕ ವಿಧಿಸುವ ನಿಟ್ಟಿನಲ್ಲಿ ಟೆಂಡರ್ ನೀಡಲಾಗುತ್ತಿತ್ತು. ಕಳೆದ ವರ್ಷ ದಿನಕ್ಕೆ ಒಂದು ಸಾವಿರ ರೂ.ನಂತೆ 3 ದಿನಕ್ಕೆ 3 ಸಾವಿರ ರೂ. ಶುಲ್ಕ ವಸೂಲಿ ಮಾಡಿದ್ದರು. ಹಣ ನೀಡಲಾ ಗದ ಬೀದಿ ಬದಿ ವ್ಯಾಪಾರಿಗಳಿಗೆ ಬೀದಿಯಲ್ಲಿ ವ್ಯಾಪಾರ ಮಾಡದಂತೆ ಕಿರುಕುಳ ನೀಡಲಾಗುತ್ತಿತ್ತು. ಹಣ ನೀಡಿದರೆ ಮಾತ್ರ ಮಾರಾಟಕ್ಕೆ ಅವಕಾಶ ಇಲ್ಲವಾದರೆ ಅಂಗಡಿ ಬಂದ್ ಮಾಡ ಲಾಗುತ್ತಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಈ ಬಾರಿ ವ್ಯಾಪಾರಿಗಳ ಟೆಂಡರ್ ಕಿರುಕುಳಕ್ಕೆ ಮುಕ್ತಿ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬೀದಿ ಮತ್ತು ಮಳಿಗೆಗಳಲ್ಲಿ ಕುಳಿತು ವ್ಯಾಪಾರ ಮಾಡುವರಿಗೆ ಶುಲ್ಕ ವಿಧಿಸ ಬಾರದು ಎಂದು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿ ಪರಿಷೆಯಲ್ಲಿ ವ್ಯಾಪಾ ರಿಗಳು ನಿರಾಳರಾಗಿದ್ದು ಕಂಡು ಬಂತು.
ಕಳೆದ ವರ್ಷ ಶುಲ್ಕದ ವಿಚಾರವಾಗಿ ಕಿರುಕುಳ ಅನುಭವಿಸಿದ್ದೇವು. 1 ದಿನಕ್ಕೆ ಸಾವಿರ ರೂ. ಶುಲ್ಕ ಕಟ್ಟಬೇಕಾಗಿತ್ತು. ನಾವು ತಳ್ಳುವ ಗಾಡಿಯಲ್ಲಿ ಮಾರಾಟ ಮಾಡುವವರು 1 ಸಾವಿರ ರೂ. ಕೊಡಲು ಕಷ್ಟವಾಗುತ್ತಿತ್ತು. ಈ ವರ್ಷ ಸರ್ಕಾರ ಶುಲ್ಕ ವಿನಾಯ್ತಿ ನೀಡಿರುವುದಕ್ಕೆ ಧನ್ಯವಾದ ಹೇಳುತ್ತೇನೆ.
-ಸೆಲ್ವಿ, ಕಡಲೆಕಾಯಿ ವ್ಯಾಪಾರಿ