ಅವನ್ನು ಹತ್ತಿಕ್ಕಿ ಶಾಂತಿ-ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಜಿಲ್ಲೆಯ ಸುಸಂಸ್ಕೃತ ನಾಗರಿಕರಾಗಿ ನಾವೆಲ್ಲರೂ ಕೈಜೋಡಿಸಬೇಕಿದೆ.
Advertisement
ಜಿಲ್ಲೆಯ ಶಾಂತಿ ಕದಡುವ ಯಾವುದೇ ಕೃತ್ಯ ಆಗಬಾರದು ಎಂಬುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಒತ್ತಾಸೆ ಹಾಗೂ ಕಳಕಳಿಯ ಮನವಿಯಾಗಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ಯು ಎಲ್ಲ ಧರ್ಮಗಳ ಮುಖಂಡರು ಹಾಗೂ ಗಣ್ಯರ ಶಾಂತಿ ಸಂದೇಶದ ಮೂಲಕ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಕಾಪಾಡುವ ಪ್ರಯತ್ನ ವೊಂದನ್ನು ಮಾಡುತ್ತಿದೆ. ಆ ಮೂಲಕ ಜಿಲ್ಲೆಯಲ್ಲಿ ಕೋಮು ಸೌಹಾರ್ದ ನೆಲೆಗೊಳ್ಳಬೇಕು. ಜತೆಗೆ ಜನರು ಕೂಡ ಯಾವುದೇ ಕೋಮು ಗಲಭೆಯ ಅಪಪ್ರಚಾರ ಅಥವಾ ಪ್ರಚೋದನೆಗಳಿಗೆ ಕಿವಿ ಗೊಡದೆ ಶಾಂತಿ ಕಾಪಾಡುವುದಕ್ಕೆ ಕೈಜೋಡಿಸಬೇಕು ಎಂಬುದು ಪತ್ರಿಕೆಯ ಕಳಕಳಿಯಾಗಿದೆ.
ಬೇರೆ ಬೇರೆ ಧರ್ಮದವರು ಇರುವ ಭಾರತ ದೇಶದಲ್ಲಿ ಪ್ರೇಮ ಸೌಹಾರ್ದದಿಂದ ನಾವೆಲ್ಲ ಬದುಕಬೇಕು. ಯಾವುದೇ ಭಿನ್ನ ಅಭಿಪ್ರಾಯಗಳಿದ್ದರೂ ಅದನ್ನು ಹಿಂಸೆ ಅಥವಾ ಘರ್ಷಣೆಯಿಂದ ಎದುರು ನೋಡುವುದು ಸರ್ವತ್ರ ಸಲ್ಲದು. ಸಾಮರಸ್ಯದಿಂದ ಎಲ್ಲ ಧರ್ಮದವರು ಜತೆಯಾಗಿ ಸಾಗುವ ಬದುಕು ನಮ್ಮದಾಗಬೇಕು. ಯಾವತ್ತೂ ಕೂಡ ಸಮಾಜದ ಶಾಂತಿ ಸೌಹಾರ್ದಕ್ಕೆ ಭಂಗವಾಗಬಾರದು. ಕೋಮುವಾದಿಗಳಾಗುವುದಕ್ಕಿಂತ ಪ್ರೇಮವಾದಿಗಳಾಗೋಣ ಹಾಗೂ ಶಾಂತಿ ಸೌರ್ಹಾದದ ಬದುಕು ನಮ್ಮದಾಗಿಸೋಣ. ಎಲ್ಲರೊಡನೆ ಜತೆಯಾಗಿ ಬಾಳುವತ್ತ ಹೆಜ್ಜೆ ಇಡೋಣ .
– ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ,
ಪರ್ಯಾಯ ಶ್ರೀ ಪೇಜಾವರ ಮಠಾಧೀಶರು, ಉಡುಪಿ ಸಹೋದರ ಭಾವದಿಂದ ಸಾಮರಸ್ಯ ಕಾಪಾಡಿ
“ಶಾಂತಿ, ಸಮಾಧಾನವನ್ನು ಎಲ್ಲೆಡೆ ಪಸರಿಸಿ’ ಎಂಬುದು ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ನೀಡಿರುವ ಸಂದೇಶ. ಹೀಗಿರುವಾಗ ಪ್ರಸ್ತುತ ಜಿಲ್ಲೆಯಲ್ಲಿ ಕಂಡುಬರುತ್ತಿರುವ ಒಂದು ರೀತಿಯ ದ್ವೇಷಮಯ ಸನ್ನಿವೇಶದಲ್ಲಿ ತಾವೆಲ್ಲ ಸಮಾಧಾನದಿಂದ ಇರಬೇಕೆನ್ನುವ ಬಗ್ಗೆ ಮುಸಲ್ಮಾನರು ಚಿಂತಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಖಾಝಿ ಎಂಬ ನೆಲೆಯಲ್ಲಿ ನಾನು ಕರೆ ನೀಡುವುದೇನೆಂದರೆ, ಮುಸಲ್ಮಾನರ ಸಹಿತ ಸಮಾಜದ ಎಲ್ಲ ಮತ ಧರ್ಮದವರು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಸಹೋದರ ಭಾವನೆಯಿಂದ ಇರಬೇಕು ಹಾಗೂ ಸಾಮರಸ್ಯವನ್ನು ಕಾಯ್ದುಕೊಂಡು ಬರಬೇಕು.
– ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಖಾಝಿ, ದ.ಕ. ಜಿಲ್ಲೆ, ಮಂಗಳೂರು
Related Articles
ಎಲ್ಲ ಜಾತಿ, ಧರ್ಮಗಳ ಜನರಿರುವ ಹಾಗೂ ವಿವಿಧ ಸಂಸ್ಕೃತಿಗಳ ನೆಲೆವೀಡಾಗಿರುವ ದಕ್ಷಿಣ ಕನ್ನಡವು ಪ್ರಾರಂಭದಿಂದಲೂ ಧಾರ್ಮಿಕ ಸಾಮರಸ್ಯಕ್ಕೆ ಹೆಸರಾದ ಜಿಲ್ಲೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಇಲ್ಲಿ ಸಂಘರ್ಷ ನಡೆದು ಅಸಹನೆ ಮತ್ತು ಆತಂಕ ಸೃಷ್ಟಿಯಾಗುತ್ತಿರುವುದು ಖೇದಕರ. ಎಲ್ಲ ಧಾರ್ಮಿಕ ಮತ್ತು ರಾಜಕೀಯ ನಾಯಕರು ಒಟ್ಟು ಸೇರಿ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದ ವಾತಾವರಣ ನೆಲೆಸುವಂತೆ ಮಾಡಲು ಮುತುವರ್ಜಿ ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು.
– ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ, ಧರ್ಮಾಧ್ಯಕ್ಷರು, ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತ
Advertisement
ಸೌಹಾರ್ದತೆಯ ಬದುಕು ಕಟ್ಟೋಣಎಲ್ಲ ಧರ್ಮದ ಜತೆಗೆ ಅನ್ಯೋನ್ಯವಾಗಿ ಬೆರೆತು ಸಂಭ್ರಮಿಸುವ ಹಿಂದಿನ ಕಾಲ ಇಂದು ಮರೆಯಾಗುತ್ತಿದೆ. ಜತೆಯಾಗಿ ಬಾಳುತ್ತಿದ್ದವರ ಮಧ್ಯೆ ಮನುಷ್ಯತ್ವ ಮರೆಯಾಗಿದ್ದು ಹೇಗೆ ? ಎಂಬ ಆತಂಕ ಈಗ ನಮ್ಮಲ್ಲಿ ಕಾಡುತ್ತಿದೆ. ಎಲ್ಲರನ್ನು ಪ್ರೀತಿಸು, ಸೌಹಾರ್ದತೆಯಿಂದ ಬಾಳು ಎಂಬ ಎಲ್ಲ ಧರ್ಮಗಳ ಸಾರವು ಇಂದು ಯಾಕೆ ನಮಗೆ ಅರ್ಥವಾಗುತ್ತಿಲ್ಲ. ಒಂದು ಧರ್ಮದವನ ಕೊಲೆಯಾದರೆ, ಇನ್ನೊಂದು ಕೊಲೆಯೇ ಉತ್ತರ ಎಂಬ ಮಾನಸಿಕ ಸ್ಥಿತಿ ಮೊದಲು ತೊಲಗಬೇಕು. ನಾವೆಲ್ಲರೂ ಮಾನವೀಯತೆಯ ಆಧಾರದಲ್ಲಿ ಬದುಕು ಕಟ್ಟಿಕೊಳ್ಳಬೇಕು
– ಸಾರಾ ಅಬೂಬಕ್ಕರ್, ಹಿರಿಯ ಸಾಹಿತಿ ಶಾಂತಿ ಸಾಮರಸ್ಯ ಮೂಡಲಿ ಕೆಲವು ದುಷ್ಕರ್ಮಿಗಳಿಂದಾಗಿ ಇಂದು ದ.ಕ. ಜಿಲ್ಲೆಯಲ್ಲಿ ಶಾಂತಿ ಹಾಗೂ ಕೋಮು ಸೌಹಾರ್ದತೆಯನ್ನು ಕದಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಅವರ ವಿರುದ್ಧ ನಾವು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಇದ್ಯಾವುದಕ್ಕೂ ಕಿವಿಗೊಡದೆ ಶಾಂತಿ ಕಾಪಾಡಬೇಕು. ಎಲ್ಲರೂ ಜತೆಯಾಗಿ ಬಾಳುವಂತಾಗಬೇಕು. ಸೌಹಾರ್ದ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಮಾತ್ರ ಶಾಂತಿ, ಸಾಮರಸ್ಯ ಕಾಪಾಡುವುದಕ್ಕೆ ಸಾಧ್ಯ. ಹೀಗಾಗಿ ಎಲ್ಲ ಕೋಮಿನವರು ಶಾಂತಿ – ಸೌಹಾರ್ದ ಕಾಪಾಡಲು ಕೋರುತ್ತೇನೆ.
– ಡಾ| ಕೆ.ಜಿ. ಜಗದೀಶ್, ದ.ಕ. ಜಿಲ್ಲಾಧಿಕಾರಿ ಕಾನೂನು ನಿಯಮಗಳನ್ನು ಪಾಲಿಸಿ
ಪ್ರತಿಯೊಬ್ಬರು ಶಾಂತವಾಗಿರಬೇಕೆಂದು ಕಾನೂನು ಹೇಳುತ್ತದೆ. ಕಾನೂನು ಉಲ್ಲಂಘನೆ ಮಾಡಿದಲ್ಲಿ ಪೊಲೀಸ್ ಇಲಾಖೆ ಕಠಿನ ಕ್ರಮ ಕೈಗೊಳ್ಳಲಿದೆ. ಹಿಂಸಾಚಾರಕ್ಕಿಳಿದು ಶಾಂತಿಗೆ ತೊಂದರೆಯಾದಲ್ಲಿ ಕಾನೂನು ಪ್ರಕಾರ ಕಠಿನ ಕ್ರಮ ಜರಗಿಸಲಾಗುವುದು. ನಾನು ಯಾರಲ್ಲೂ ಶಾಂತಿ ಕಾಪಾಡಿ ಎಂದು ವಿನಂತಿಸುತ್ತಿಲ್ಲ. ಅದರ ಬದಲು ಎಲ್ಲರು ಕೂಡ ಕಾನೂನು ನಿಯಮಗಳನ್ನು ಪಾಲಿಸುವಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಕಾನೂನಿಗೆ ತಲೆ ಬಾಗಿದರೆ ಸಹಜವಾಗಿಯೇ ಶಾಂತಿ ನೆಲೆಗೊಳ್ಳುತ್ತದೆ.
– ಸುಧೀರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ