ಹೊಸದಿಲ್ಲಿ : ಪರಸ್ಪರ ಬದ್ಧ ರಾಜಕೀಯ ವೈರಿಗಳಾಗಿರುವ ಪಿಡಿಪಿ, ಎನ್‌ಸಿ ಮತ್ತು ಕಾಂಗ್ರೆಸ್ ಜತೆಗೂಡಿ ಅಪವಿತ್ರ ಮೈತ್ರಿ ರಚಿಸಿಕೊಂಡು “ಅಸಾಧ್ಯ’ ಸರಕಾರ ರಚಿಸುವುದನ್ನು ನಿರಸನಗೊಳಿಸುವ ಸಲುವಾಗಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರ ವಿಧಾನ ಸಭೆಯನ್ನು ವಿಸರ್ಜಿಸಿರುವ ಬೆನ್ನಿಗೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಅವರು “ಪಿಡಿಪಿ, ಎನ್‌ಸಿ ಗೆ ಕಾಂಗ್ರೆಸ್ ಜತೆಗೂಡಿ ಸರಕಾರ ರಚಿಸುವಂತೆ ಗಡಿಯಾಚೆಯಿಂದ ಸೂಚನೆ ಬಂದಿತ್ತು’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜತೆ ಕೈಜೋಡಿಸಿ ಸರಕಾರ ರಚಿಸುವಂತೆ ಪಿಡಿಪಿ ಮತ್ತು ಎನ್‌ಸಿ ಗೆ ಗಡಿಯಾಚೆಯಿಂದ (ಪಾಕಿಸ್ಥಾನದಿಂದ) ಸೂಚನೆ ಬಂದಿದ್ದುದರಿಂದಲೇ ಆ ಪಕ್ಷಗಳು ಅಪವಿತ್ರ ಮೈತ್ರಿ ಮೂಲಕ ಜತೆಗೂಡಿ ಜಮ್ಮು ಕಾಶ್ಮೀರದಲ್ಲಿ ಸರಕಾರ ರಚಿಸುವುದಕ್ಕೆ ಮುಂದಾಗಿದ್ದವು ಎಂದು ರಾಮ ಮಾಧವ ಇಂದು ಗುರುವಾರ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ಇವೇ ಪಕ್ಷಗಳು ಗಡಿಯಾಚೆಗಿನ ಸೂಚನೆ ಪ್ರಕಾರವೇ ಸ್ಥಳೀಯಾಡಳಿತೆಯ ಚುನಾವಣೆಗಳನ್ನು ಬಹಿಷ್ಕರಿಸಿದ್ದವು. ಈಗ ಅವೇ ಪಕ್ಷಗಳು ಗಡಿಯಾಚೆಗಿನ ಸೂಚನೆಗಳ ಪ್ರಕಾರ ರಾಜ್ಯದಲ್ಲಿ ಸರಕಾರ ರಚನೆಗೆ ಮುಂದಾಗಿದ್ದವು ಎಂದು ಹೇಳಿದ ರಾಮ ಮಾಧವ, ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಕ್ರಮವನ್ನು ಸಮರ್ಥಿಸಿಕೊಂಡರು.
ಪಿಡಿಪಿ ಮುಖ್ಯಸ್ಥೆ ಮಹಬೂಬ ಮುಫ್ತಿ ಅವರು ನಿನ್ನೆ ಬುಧವಾರ ರಾಜ್ಯಪಾಲರಿಗೆ ಪತ್ರ ಬರೆದು ಎನ್‌ಸಿ ಮತ್ತು ಕಾಂಗ್ರೆಸ್ ಜತೆ ಸೇರಿಕೊಂಡು ತನ್ನ ಪಕ್ಷ ಸರಕಾರ ರಚಿಸುವುದಾಗಿ ತಿಳಿಸಿತ್ತು. ಒಡನೆಯೇ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ್ದರು. ರಾಜ್ಯಪಾಲರಿಗೆ ತನ್ನ ಪತ್ರವನ್ನು ಫ್ಯಾಕ್ಸ್ ಮಾಡುವಲ್ಲಿ ತಾನು ಯಂತ್ರ ಕೆಟ್ಟು ಹೋದ ಕಾರ ವಿಫಲಳಾದೆ; ಹಾಗಾಗಿ ಅದನ್ನು ಟ್ವಿಟರ್ ಮೂಲಕ ಹಂಚಿಕೊಂಡೆ ಎಂದು ಮೆಹಬೂಬ ಅನಂತರ ಹೇಳಿದ್ದರು.
ಫ್ಯಾಕ್ಸ್ ಯಂತ್ರ ಕೆಟ್ಟು ಹೋಗಿತ್ತೆಂಬ ಮೆಹಬೂಬ ಅವರ ಮಾತು ಕೇವಲ ಒಂದು ನೆಪ ಎಂದು ರಾಮ ಮಾಧವ ಹೇಳಿದರು.