ಮುಂಬೈ: ಜಾಬ್ ಮಾರುಕಟ್ಟೆಯಲ್ಲಿ ಪ್ರತಿಭೆಗಳು ಕೆಲಸವನ್ನು ಹುಡುಕುವ ಬದಲು, ಕೆಲಸವೇ ಈಗ ಪ್ರತಿಭೆಗಳನ್ನು ಹುಡುಕುತ್ತಾ ಹೋಗುವ ಟ್ರೆಂಡ್ ಆರಂಭವಾಗಿದೆ.
2022ರಲ್ಲಿ ಈ ಟ್ರೆಂಡ್ ಇನ್ನಷ್ಟು ಬಲವಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸಿವೆ.
ವರ್ಕ್ ಫ್ರಂ ಹೋಂನಿಂದ ವರ್ಕ್ ಫ್ರಂ ಎನಿವೇರ್(ಎಲ್ಲಿಂದಲಾದರೂ ಕೆಲಸ)ಗೆ ಬದಲಾದ ಬೆನ್ನಲ್ಲೇ ಅಹಮದಾಬಾದ್, ಚಂಡೀಗಡ, ತಿರುವನಂತಪುರ, ಭುವನೇಶ್ವರ, ನಾಗ್ಪುರ, ಇಂದೋರ್, ಜೈಪುರ ಮತ್ತು ವಡೋದರಾ ವೇತನ ಟ್ರೆಂಡ್ ವರದಿಯಲ್ಲಿ ಟಾಪ್ 10 ಸ್ಥಾನಗಳನ್ನು ಗಳಿಸಿವೆ.
ರ್‍ಯಾಂಡ್‌ಸ್ಟಡ್ ಸಂಸ್ಥೆಯು ಈ ವರದಿಯನ್ನು ಸಿದ್ಧಪಡಿಸಿದ್ದು, ಟಯರ್ 1 ನಗರಗಳ ಪೈಕಿ ಬೆಂಗಳೂರು, ಉದ್ಯೋಗಿಗಳಿಗೆ ಅತಿ ಹೆಚ್ಚು ವೇತನ ನೀಡುವ (ಕಿರಿಯ ಮತ್ತು ಮಧ್ಯಮ ಮಟ್ಟದ ಉದ್ಯೋಗಿಗಳು) ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸೀನಿಯರ್ ಮಟ್ಟದಲ್ಲಿ ಅತಿ ಹೆಚ್ಚು ವೇತನ ನೀಡುವ ನಗರವೆಂದರೆ ಮುಂಬೈ ಎಂದು ಈ ವರದಿ ಹೇಳಿದೆ.
ಇದನ್ನೂ ಓದಿ:ಮೇಕೆದಾಟು ಹೆಸರಲ್ಲಿ ಮಂಕುಬೂದಿ ಎರಚಲು ಸಾಧ್ಯವಿಲ್ಲ : ಕಾಂಗ್ರೆಸ್ ವಿರುದ್ಧ ಯತ್ನಾಳ ಕಿಡಿ
ಇದೇ ವೇಳೆ, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಯನ್ನು ಅಹಮದಾಬಾದ್ ಗಳಿಸಿದೆ. ಟಯರ್-2 ನಗರಗಳ ಪೈಕಿ, ಚಂಡೀಗಡ ಮೊದಲ ಸ್ಥಾನ ಪಡೆದಿದೆ. ಇಲ್ಲಿ ಕಿರಿಯ ಉದ್ಯೋಗಿಗಳಿಗೆ ಸರಾಸರಿ ವಾರ್ಷಿಕ 5.7 ಲಕ್ಷ ರೂ., ಮಧ್ಯಮ ಮಟ್ಟದವರಿಗೆ 13.7 ಲಕ್ಷ ರೂ. ವೇತನ ನೀಡಲಾಗುತ್ತಿದೆ. ಅಂದರೆ, ಇದು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು. ತಿರುವನಂತಪುರಂ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ.