Advertisement

ವೇತನ ಪರಿಷ್ಕರಣೆ: ಮಧ್ಯಂತರ ಪರಿಹಾರ ಶಿಫಾರಸು ಡೌಟು

09:27 AM Oct 07, 2017 | |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾಗಿರುವ ಆರನೇ ವೇತನ ಆಯೋಗ ಮಧ್ಯಂತರ ಶಿಫಾರಸು ಮಾಡುವುದು ಅನುಮಾನ. ಆಯೋಗಕ್ಕೆ ಮತ್ತೆ ನಾಲ್ಕು ತಿಂಗಳು ಕಾಲಾವಕಾಶ ನೀಡಿರುವುದರಿಂದ ಬಹುತೇಕ ಪೂರ್ಣ ಪ್ರಮಾಣದ ವರದಿ ಮುಂದಿನ ವರ್ಷ ಜನವರಿ ವೇಳೆಗೆ ಸಲ್ಲಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಇನ್ನೂ ಹಲವು ಇಲಾಖೆಗಳಿಂದ ಮಾಹಿತಿ ಸಂಗ್ರಹ ಮತ್ತು ಇತರ ಕೆಲಸ ಬಾಕಿ ಇರುವುದರಿಂದ ಮತ್ತೆ ಕಾಲಾವಕಾಶ ಪಡೆಯಲಾಗಿದೆ. ಈಗ ನೀಡಿರುವ ಕಾಲಾವಕಾಶದ ಒಳಗೆಯೇ ವರದಿ ಸಲ್ಲಿಕೆಗೆ ಪ್ರಯತ್ನ ನಡೆದಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. 

Advertisement

ಬೊಕ್ಕಸಕ್ಕೆ 3 ಸಾವಿರ ಕೋಟಿ ರೂ. ಹೊರೆ: ಈ ಮಧ್ಯೆ, ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಶೇ.30ರಷ್ಟು ಮಧ್ಯಂತರ ಪರಿಹಾರ ಕೊಡಬೇಕಾದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 3 ಸಾವಿರ ಕೋಟಿ ರೂ.ಹೊರೆ ಬೀಳಲಿದೆ. ಇದು ಸರ್ಕಾರವನ್ನು ಆತಂಕಕ್ಕೆ ದೂಡಿದೆ. ಸದ್ಯಕ್ಕೆ ಯಾವುದೇ ಕಾರಣಕ್ಕೂ ಮೂರು ಸಾವಿರ ಕೋಟಿ ರೂ.ನಷ್ಟು ಹೊರೆ ಭರಿಸಲು ಸಾಧ್ಯವೇ ಇಲ್ಲ. 8,623 ಕೋಟಿ ರೂ. ಸಾಲಮನ್ನಾ ಸೇರಿ “ಭಾಗ್ಯ’ಗಳ ಯೋಜನೆಗಳಿಗೆ ಸುಮಾರು 20 ಸಾವಿರ ಕೋಟಿ ರೂ.ಗಳಷ್ಟು ಹೊರೆಯಾಗಲಿದ್ದು, ತಕ್ಷಣಕ್ಕೆ ಹಣಕಾಸು ವಿಚಾರದಲ್ಲಿ ಯಾವುದೇ ಹೊಸ ಪ್ರಸ್ತಾವನೆ ಕಷ್ಟ ಎಂದು ಹಣಕಾಸು ಇಲಾಖೆ ಸಹ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ, ಸರ್ಕಾರವು ಸರ್ಕಾರಿ ನೌಕರರಿಗೆ ಶೇ.30 ರಷ್ಟು ಮಧ್ಯಂತರ ಪರಿಹಾರ ನೀಡುವ ವಿಚಾರದಲ್ಲಿ ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

2018ರ ಜನವರಿ ಅಂತ್ಯಕ್ಕೆ ಆಯೋಗದ ವರದಿ ಸಲ್ಲಿಕೆಯಾಗಿ, ವಿಧಾನಸಭೆ ಚುನಾವಣೆಗೆ ಎರಡು- ಮೂರು ತಿಂಗಳು ಇದ್ದಾಗ ವೇತನ ಪರಿಷ್ಕರಣೆ ಶಿಫಾರಸು ಜಾರಿಯಾಗಬಹುದು. ಯಾವಾಗ ಜಾರಿಯಾದರೂ 2017ರ ಜನವರಿ 1 ರಿಂದಲೇ ಪೂರ್ವಾನ್ವಯವಾಗುವುದರಿಂದ ಆಗಲೂ ಹೊರೆ ಯಾಗುತ್ತದೆ. ಆದರೆ, ತಕ್ಷಣಕ್ಕೆ ಆರ್ಥಿಕ ಸ್ಥಿತಿ
ಉತ್ತಮವಾಗಿರದ ಕಾರಣ ಮಧ್ಯಂತರ ಪರಿಹಾರ ಜಾರಿ ಕಷ್ಟ ಎಂದೂ ಹೇಳಲಾಗುತ್ತಿದೆ. 

ಬೇಡಿಕೆ ಏನು?: ಕೇಂದ್ರ ಸರ್ಕಾರ ಏಳನೇ ವೇತನ
ಆಯೋಗದ ಶಿಫಾರಸ್ಸಿನ ಪ್ರಕಾರ ಶೇ.24.50 ರಷ್ಟು ವೇತನ ಪರಿಷ್ಕರಣೆ ಮಾಡಿದ್ದು, 2016 ಜನವರಿ 1 ರಿಂದಲೇ ಜಾರಿ ಮಾಡಿದೆ. ರಾಜ್ಯ ಸರ್ಕಾರಿ ನೌಕರರ ವೇತನಕ್ಕೂ, ಕೇಂದ್ರ ಸರ್ಕಾರಿ ನೌಕರರ ವೇತನಕ್ಕೂ ಶೇ.67ರಷ್ಟು ವ್ಯತ್ಯಾಸವಿದೆ. ಹೀಗಾಗಿ, ಶೇ.60ರಷ್ಟು ವೇತನ ಪರಿಷ್ಕರ ಣೆಗೆ ಬೇಡಿಕೆ ಇಟ್ಟಿದ್ದಾರೆ.

ಕೇಂದ್ರ ಸರ್ಕಾರ 7ನೇ ವೇತನ  ಆಯೋಗದ ಶಿಫಾರಸನ್ನು ಜಾರಿ ಮಾಡಿದ್ದರೆ ರಾಜ್ಯ ಸರ್ಕಾರ ಈಗ ಆರನೇ ವೇತನ ಆಯೊಗ ರಚಿಸಿದೆ. ಸೆಪ್ಟೆಂಬರ್‌ಗೆ ಆಯೋಗದ ಅವಧಿ ಮುಗಿದು ವರದಿ ಕೊಡಬೇಕಿತ್ತಾದರೂ ಇನ್ನೂ ನಾಲ್ಕು ತಿಂಗಳು ಕಾಲಾವಕಾಶ ಕೊಡಲಾಗಿದೆ. ಬೇಕಂತಲೇ ಸರ್ಕಾರ ವಿಳಂಬ ಧೋರಣೆ ತಾಳುತ್ತಿದೆ.
●ವೆಂಕಟೇಶ್‌, ಉಪಾಧ್ಯಕ್ಷರು, ಅಖೀಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟ

Advertisement

7.93 ಲಕ್ಷ ಮಂಜೂರಾತಿ ಹುದ್ದೆಗಳಿದ್ದು, 2.70 ಲಕ್ಷದಷ್ಟು ಹುದ್ದೆ ಖಾಲಿಯಿದೆ. ಆ ಖಾಲಿ ಇರುವ ಹುದ್ದೆಗಳಿಗೆ
ಮೀಸಲಿಟ್ಟಿರುವ ವೇತನ ಬಾಬಿ¤ನ ಹಣ ಕೊಟ್ಟರೂ ಶೇ.30 ರಷ್ಟು ಮಧ್ಯಂತರ ಪರಿಹಾರವನ್ನು ಸರ್ಕಾರಿ ನೌಕರರಿಗೆ ಕೊಡಬಹುದು.

●ಬಿ.ಪಿ.ಮಂಜೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

„ ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next