Advertisement

ಕಂತು ಪಾವತಿಸಿ ಬೆಳೆ ವಿಮೆ ಮಾಡಿಸಿ: ಬೊಮ್ಮನಹಳ್ಳಿ

05:07 PM Jun 10, 2018 | |

ಧಾರವಾಡ: ರಾಜ್ಯ ಸರ್ಕಾರವು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯ ಐದು ತಾಲೂಕಿನ ಎಲ್ಲ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದೆ. ಹೀಗಾಗಿ ರೈತರು ಈಗಿನಿಂದಲೇ ಆಯಾ ಬ್ಯಾಂಕುಗಳಿಗೆ ತಮ್ಮ ಬೆಳೆ ವಿಮಾ ಕಂತನ್ನು ತುಂಬಿ ವಿಮೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರೈತ ಸುರಕ್ಷಾ  ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯ ಅನುಷ್ಠಾನ ಸಮಿತಿಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ವಿಮಾ ಕುರಿತ ಮಾಹಿತಿಯುಳ್ಳ ಪೋಸ್ಟರ್‌ ಹಾಗೂ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ  ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸಾಧನೆಯಾಗಿದ್ದು, ಬೆಳೆ ವಿಮೆ ಮಾಡಿಸಿದ್ದ ಬಹುತೇಕ ರೈತರಿಗೆ ಈಗಾಗಲೇ ವಿಮಾ ಮೊತ್ತ ಜಮಾ ಮಾಡಲಾಗಿದೆ. ಉಳಿದ ರೈತರ ವಿಮಾ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

2018ರ ಮುಂಗಾರಿಗೆ ರೈತ ಸುರಕ್ಷಾ  ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಹೋಬಳಿ ಮಟ್ಟದ ಬೆಳೆಗಳನ್ನಾಗಿ ಭತ್ತ (ನೀ), ಭತ್ತ (ಮ.ಆ), ಮುಸುಕಿನ ಜೋಳ (ನೀ), ಮುಸುಕಿನ ಜೋಳ (ಮ.ಆ), ಜೋಳ (ಮ.ಆ), ಸಾವೆ(ಮ.ಆ), ಉದ್ದು (ಮ.ಆ), ತೊಗರಿ(ಮ.ಆ), ಹೆಸರು (ಮ.ಆ), ಹುರಳಿ (ಮ.ಆ), ಸೂಯಾವರೆ (ಮ.ಆ), ಎಳ್ಳು (ಮ.ಆ), ನೆಲಗಡಲೆ (ಮ.ಆ), ನೆಲಗಡಲೆ (ನೀ), ಹತ್ತಿ (ಮ.ಆ), ಹತ್ತಿ (ನೀ), ಈರುಳ್ಳಿ (ಮ.ಆ), ಈರುಳ್ಳಿ (ನೀ), ಆಲುಗಡ್ಡೆ (ಮ.ಆ), ಆಲುಗಡ್ಡೆ (ನೀ), ಟೊಮ್ಯಾಟೊ, ಕೆಂಪು ಮೆಣಸಿನಕಾಯಿ (ಮ.ಆ), ಮತ್ತು ಕೆಂಪು ಮೆಣಸಿನಕಾಯಿ (ನೀ) ಮುಂತಾದ 16 ಬೆಳೆಗಳನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಮಟ್ಟದ ಬೆಳೆಗಳನ್ನಾಗಿ ಧಾರವಾಡ ತಾಲೂಕು ಭತ್ತ (ಮಳೆ ಆಶ್ರಿತ), ಕಲಘಟಗಿ ತಾಲೂಕು ಭತ್ತ (ಮಳೆ ಆಶ್ರಿತ) ಮತ್ತು ಮುಸುಕಿನಜೋಳ (ಮಳೆ ಆಶ್ರಿತ), ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿಗೆ ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ನವಲಗುಂದ ತಾಲೂಕಿಗೆ ಮುಸುಕಿನಜೋಳ (ನೀರಾವರಿ), ಹೆಸರು (ಮಳೆ ಆಶ್ರಿತ) ಬೆಳೆಗಳನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಕರ್ನಾಟಕ ರೈತ ಸುರಕ್ಷಾ  ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯು ಅಧಿಸೂಚಿಯ ಬೆಳೆ ಹಾಗೂ ಹೋಬಳಿಗಳಲ್ಲಿ ಬೆಳೆ ಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ, ಪಾಸ್‌ಬುಕ್‌, ಕಂದಾಯ ರಸೀದಿ ನೀಡಬೇಕು.

ಬೆಳೆ ಸಾಲ ಪಡೆಯುವ ಹಾಗೂ ಪಡೆಯದ ರೈತರಿಗೆ ಅರ್ಜಿ ಸಲ್ಲಿಸಲು ಜು. 31 ಹಾಗೂ ತೋಟಗಾರಿಕಾ ಬೆಳೆಯಾದ ಕೆಂಪು ಮೆಣಸಿನಕಾಯಿ (ನೀರಾವರಿ ಹಾಗೂ ಮಳೆ ಆಶ್ರಿತ) ಬೆಳೆಗಳಿಗೆ ಅರ್ಜಿ ಸಲ್ಲಿಸಲು ಆ. 14 ಕೊನೆ ದಿನವಾಗಿದೆ ಎಂದರು.

ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ, ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ ಕೆ. ಈಶ್ವರ, ನಬಾರ್ಡ್‌ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕಿ ಶೀಲಾ ಭಂಡಾರಕರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ| ರಾಮಚಂದ್ರ ಕೆ., ಜಿಲ್ಲಾ ಸಂಖ್ಯಾಧಿಕಾರಿ ಡಿ.ವಿ. ಮಡಿವಾಳ, ಜಂಟಿ ನಿರ್ದೇಶಕರ ಕಚೇರಿ ಸಹಾಯಕ ನಿರ್ದೇಶಕರಾದ ಎಂ.ಎಂ.ನಾಡಿಗೇರ, ಸದಾಶಿವ ಖಾನೂರೆ, ಧಾರವಾಡ ಸಹಾಯಕ ಕೃಷಿ ನಿರ್ದೇಶಕ ಸೋಮಲಿಂಗಪ್ಪ ಮೊದಲಾದವರಿದ್ದರು.

ರೈತರು ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕೊನೆ ದಿನಾಂಕದ ವರೆಗೆ ಕಾಯದೆ ಈಗಿನಿಂದಲೇ ಬ್ಯಾಂಕುಗಳಿಗೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ವಿಮಾ ಮೊತ್ತ ಪಾವತಿಸಬೇಕು. ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಶಾಖಾ ವ್ಯವಸ್ಥಾಪಕರಿಗೆ ಈ ಕುರಿತು ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ ಕೆ. ಈಶ್ವರ ಅವರು ಸ್ಪಷ್ಟ ನಿರ್ದೇಶನ ನೀಡಿ ಸುತ್ತೋಲೆ ಕಳಿಸಬೇಕು.
ಡಾ| ಎಸ್‌.ಬಿ. ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next