Advertisement

ಅನ್ಯ ರಾಜ್ಯದ ಮಾದರಿಯಲ್ಲಿ ನೌಕರರಿಗೆ ವೇತನ ನೀಡಿ

09:30 PM Jan 27, 2020 | Lakshmi GovindaRaj |

ಕೊಳ್ಳೇಗಾಲ: ಹೊರ ರಾಜ್ಯಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಉತ್ತಮವಾದ ಸಂಬಳವನ್ನು ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ನೌಕರರಿಗೆ ನೀಡುತ್ತಿರುವ ಸಂಬಳ ಕಡಿಮೆಯಾಗಿದೆ. ಇತರೆ ರಾಜ್ಯಗಳಲ್ಲಿ ನೀಡುವ ಮಾದರಿಯಲ್ಲಿ ರಾಜ್ಯದ ನೌಕರರಿಗೂ ವೇತನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಲಾಗುವುದು ಎಂದು ಜಿಲ್ಲಾ ಅರಣ್ಯ ಸಿಸಿಎಫ್ ಮನೋಜ್‌ ಕುಮಾರ್‌ ತಿಳಿಸಿದರು.

Advertisement

ಪಟ್ಟಣದ ಉಪ ಅರಣ್ಯ ಇಲಾಖೆಯ ಸಭಾಂಗಣದಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾ ಸಂಘದ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಾರ್ಷಿಕ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ವೇತನ ಹೆಚ್ಚಳಕ್ಕಾಗಿ ಸಂಘದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಂಘಟನೆಗಳು ಪ್ರತಿಭಟನೆಗೆ ಮುಂದಾಗುವ ವಿಷಯಗಳನ್ನು ತಿಳಿಯುತ್ತಿದ್ದಂತೆ ಪ್ರತಿಭಟನೆ ಮಾಡುವುದು ಬೇಡ, ಸಿಬ್ಬಂದಿಗಳ ಕೊರತೆ ಏನು ಎಂದು ಗೊತ್ತಿದ್ದು, ಕೂಡಲೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಮೇರೆಗೆ ಕೈಬಿಟ್ಟಿತ್ತು ಎಂದು ತಿಳಿಸಿದರು.

ನೌಕರರು ಸಂಘಟಿತರಾಗಿ: ಅರಣ್ಯ ಇಲಾಖೆಯ ನೌಕರರ ಸಂಘ ಹೆಚ್ಚು ಸಂಘಟನೆಯಾಗಬೇಕು. ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಕರ್ತವ್ಯವನ್ನು ಮತ್ತಷ್ಟೂ ಉತ್ತಮವಾಗಿ ನಡೆಸುವ ಮೂಲಕ ಕೀರ್ತಿ ತರಬೇಕು ಎಂದು ಹೇಳಿದರು.

ಚಿಕ್ಕದಾಗಿದೆ ವಸತಿನಿಲಯ: ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ನೀಡಿರುವ ವಸತಿಗೃಹ ತುಂಬಾ ಚಿಕ್ಕದಾಗಿದೆ. ಕೂಡಲೇ ಸರ್ಕಾರದ ವತಿಯಿಂದ ಅನುದಾನ ಪಡೆದುಕೊಂಡು ನವೀಕರಣಗೊಳಿಸಿ, ಸೌಕರ್ಯಗಳನ್ನು ಕಲ್ಪಿಸಿಕೊಡುವ ಭರವಸೆಯನ್ನು ಸಿಬ್ಬಂದಿಗಳಿಗೆ ನೀಡಿದರು.

Advertisement

ಎಲ್ಲಾ ಸೌಲಭ್ಯ ಬಳಕೆ ಮಾಡಿಕೊಳ್ಳಿ: ಮಲೆ ಮಹದೇಶ್ವರ ಅರಣ್ಯಸಂರಕ್ಷಣಾಧಿಕಾರಿ ಏಳುಕೊಂಡಲು ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದ ಕರ್ತವ್ಯ ನಿರ್ವಹಿಸಲು ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಮತ್ತಷ್ಟೂ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ, ಇಲಾಖೆಗೆ ಕೀರ್ತಿ ತರಬೇಕು ಎಂದು ಹೇಳಿದರು.

ಸನ್ಮಾನ: ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾ ಅರಣ್ಯ ಸಿಸಿಎಫ್ ಮೋಹನ್‌ ಕುಮಾರ್‌, ಮಲೆಮಹದೇಶ್ವರ ಅರಣ್ಯಾಧಿಕಾರಿ ಏಳುಕೊಂಡಲು, ಕಾವೇರಿ ವನ್ಯಜೀವಿ ಸಂರಕ್ಷಣಾಧಿಕಾರಿ ನವೀನ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಾಮು, ಉಪಾಧ್ಯಕ್ಷ ನಾಗರಾಜು, ಖಜಾಂಚಿ ಚಂದ್ರಕುಮಾರ್‌, ಮುಖಂಡರಾದ ಅನಂತರಾಮ್‌, ಪ್ರಭು, ರವಿ, ವೆಂಕಟೇಶ್‌ ಹಾಜರಿದ್ದರು.

ಈಗಾಗಲೇ ಕಾಡು ಪ್ರಾಣಿಗಳ ಕಾಟ ಇದೆ ಎಂದು ಗ್ರಾಮಸ್ಥರು ಮತ್ತು ರೈತರು ದೂರುಗಳನ್ನು ನೀಡಿದ್ದು, ಕಾಡು ಪ್ರಾಣಿಗಳು ಗ್ರಾಮೀಣ ಪ್ರದೇಶಗಳಿಗೆ ಬಾರದಂತೆ ಕ್ರಮ ಕೈಗೊಂಡು ಗ್ರಾಮಸ್ಥರ ಪ್ರಾಣ ಮತ್ತು ರೈತರ ಬೆಳೆಗಳ ರಕ್ಷಣೆ ಮಾಡಬೇಕು.
-ಏಳುಕೊಂಡಲು, ಮಲೆ ಮಹದೇಶ್ವರ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next