ಮಲಾಹೈಡ್: ಭಾರತದ ವಿರುದ್ಧದ ಮುಂಬರುವ ಟಿ20 ಸರಣಿಗೆ ಐರ್ಲಂಡ್ ತನ್ನ ತಂಡವನ್ನು ಪ್ರಕಟಿಸಿದೆ. ಪೌಲ್ ಸ್ಟರ್ಲಿಂಗ್ ಅವರು ತಂಡವನ್ನು ಮುನ್ನಡೆಸಲಿದ್ದು, ಆಲ್ ರೌಂಡರ್ ಫಿಯಾನ್ ಹ್ಯಾಂಡ್ ಮತ್ತು ಲೆಗ್ ಸ್ಪಿನ್ನರ್ ಗೆರಾತ್ ಡೆಲಾನಿ ತಂಡಕ್ಕೆ ಮರಳಿದ್ದಾರೆ.
ಫಿಯಾನ್ ಹ್ಯಾಂಡ್ ಅವರು ಇತ್ತೀಚಿಗಿನ ಟಿ20 ವಿಶ್ವಕಪ್ ಕ್ವಾಲಿಫಿಕೇಶನ್ ಕೂಟದ ಅಯ್ಕೆಗೆ ಲಭ್ಯವಾಗಿರಲಿಲ್ಲ. ಮತ್ತೊಂದೆಡೆ ಡೆಲಾನಿ ಅವರು ಜಿಂಬಾಬ್ವೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಕೂಟದಲ್ಲಿ ಗಾಯಗೊಂಡಿದ್ದರು.
“ಆಟಗಾರರಿಗೆ ಅವಕಾಶಗಳನ್ನು ನೀಡುವುದು ಸರಣಿಯನ್ನು ಸ್ವತಃ ಫಿಲ್ಟರ್ ಮಾಡುತ್ತದೆ, ಆದ್ದರಿಂದ ಭಾರತ ಸರಣಿ ತಂಡದಲ್ಲಿ ಹೆಸರಿಸಲಾದ ಎಲ್ಲಾ 15 ಆಟಗಾರರು ಒಂದು ಹಂತದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಐರ್ಲೆಂಡ್ ಗೆ ಆಗಮಿಸುವ ಭಾರತೀಯ ತಂಡವು ಪ್ರೇಕ್ಷಕರಿಗೆ ರೋಮಾಂಚನ ತರಲಿದೆ. ಆಟದ ಮೈದಾನದಲ್ಲಿ ಅವರನ್ನು ಎದುರಿಸಲು ನಾವು ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದೇವೆ. ಮತ್ತೊಂದು ತೀವ್ರ ಪೈಪೋಟಿಯ ಸರಣಿಯನ್ನು ನಾವು ಎದುರು ನೋಡುತ್ತಿದೆ” ಎಂದು ಮುಖ್ಯ ಆಯ್ಕೆಗಾರ ಆ್ಯಂಡ್ರ್ಯೂ ವೈಟ್ ಹೇಳಿದರು.
ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಟಿ20 ಪಂದ್ಯಗಳು ಮಲಾಹೈಡ್ ನಲ್ಲಿ ಆಗಸ್ಟ್ 18, 20 ಮತ್ತು 23 ರಂದು ನಡೆಯಲಿವೆ. 2024 ರ ಪುರುಷರ ಟಿ20 ವಿಶ್ವಕಪ್ ಅರ್ಹತೆಯನ್ನು ಪಡೆದುಕೊಂಡ ನಂತರ ಈ ಸರಣಿಯು ಐರ್ಲೆಂಡ್ ನ ಮೊದಲ ದ್ವಿಪಕ್ಷೀಯ ಟಿ20 ಸರಣಿಯಾಗಿದೆ.
ಐರ್ಲೆಂಡ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಯುವ ಆಟಗಾರರ ತಂಡವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್.