ಬ್ರಿಸ್ಬೇನ್: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತದ ವನಿತಾ ಕ್ರಿಕೆಟ್ ತಂಡಕ್ಕೀಗ ಪ್ರಬಲ ಆಸ್ಟ್ರೇಲಿಯ ವಿರುದ್ಧ ಅವರದೇ ನಾಡಿನಲ್ಲಿ 3 ಪಂದ್ಯಗಳ ಏಕದಿನ ಸವಾಲು ಎದು ರಾಗಿದೆ. ಮೊದಲ ಪಂದ್ಯ ಗುರುವಾರ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಇದು ಹಗಲು-ರಾತ್ರಿ ಪಂದ್ಯವಾಗಿದ್ದು, ಭಾರತೀಯ ಕಾಲಮಾನದಂತೆ ಬೆಳಗ್ಗೆ 9.50ಕ್ಕೆ ಆರಂಭವಾಗಲಿದೆ.
ಕೆಲವೊಂದು ದಿಟ್ಟ ಬದಲಾವಣೆ ಯೊಂದಿಗೆ ತಂಡವನ್ನು ಅಂತಿಮಗೊಳಿಸಿರುವ ಭಾರತಕ್ಕೆ ಬ್ಯಾಟಿಂಗ್ ಸ್ಥಿರತೆ ಹಾಗೂ ಆಡುವ ಬಳಗದ ಕಾಂಬಿನೇಶನ್ ದೊಡ್ಡ ಸಮಸ್ಯೆಯಾಗಿ ಕಾಡುವ ಸಾಧ್ಯತೆ ಇದೆ. ಫಾರ್ಮ್ನಲ್ಲಿಲ್ಲದ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಅವರನ್ನು ಕೈಬಿಡಲಾಗಿದೆ. ವಿಕೆಟ್ ಕೀಪರ್ ಯಾಸ್ತಿಕಾ ಭಾಟಿಯಾ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದಾರೆ.
ಈ ಸ್ಥಾನಕ್ಕೆ ಯುವ ಆಟಗಾರ್ತಿ ಉಮಾ ಛೆತ್ರಿ ಬಂದಿದ್ದಾರೆ. ಆದರೆ ಬಿಗ್ ಹಿಟ್ಟಿಂಗ್ ಕೀಪರ್-ಬ್ಯಾಟರ್ ರಿಚಾ ಘೋಷ್ ಮರಳಿರುವುದರಿಂದ ತಂಡಕ್ಕೆ ಬಲ ಬಂದಿದೆ. ಹರ್ಲೀನ್ ದೇವಲ್, ತಿತಾಸ್ ಸಾಧು, ಮಿನ್ನು ಮಣಿ ಕೂಡ ವಾಪಸಾಗಿದ್ದಾರೆ. ಸ್ಮತಿ ಮಂಧನಾ, ನಾಯಕಿ ಕೌರ್, ದೀಪ್ತಿ ಶರ್ಮ, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಸೈಮಾ ಠಾಕೂರ್, ಅರುಂಧತಿ ರೆಡ್ಡಿ ಅವರ ಫಾರ್ಮ್ ಭಾರತದ ಪಾಲಿಗೆ ನಿರ್ಣಾಯಕ.
16 ಪಂದ್ಯ, ಕೇವಲ 4 ಜಯ
ನ್ಯೂಜಿಲ್ಯಾಂಡ್ ಎದುರಿನ ತವರಿನ ಸರಣಿಯನ್ನು ಭಾರತ 2-1 ಅಂತರ ದಿಂದ ಗೆದ್ದಿದೆಯಾದರೂ ಆಸ್ಟ್ರೇಲಿಯದ ಸವಾಲೇ ಬೇರೆ ಇರುತ್ತದೆ. ಅದು ಏಕದಿನದಲ್ಲಿ ಪ್ರಭುತ್ವ ಸಾಧಿಸಿರುವ ತಂಡ. ಅಲ್ಲದೇ ಆಸ್ಟ್ರೇಲಿಯ ನೆಲದಲ್ಲಿ ಭಾರತದ ಏಕದಿನ ದಾಖಲೆ ಅಷ್ಟೇನೂ ಉತ್ತಮ ಮಟ್ಟದಲ್ಲಿಲ್ಲ. ಇಲ್ಲಿ ಆಡಲಾದ 16 ಏಕದಿನ ಪಂದ್ಯಗಳಲ್ಲಿ ನಾಲ್ಕರಲ್ಲಷ್ಟೇ ಜಯ ಸಾಧಿಸಿದೆ.
2021ರ ಸರಣಿ ವೇಳೆ 1-2 ಅಂತರದಿಂದ ಸರಣಿ ಕಳೆದುಕೊಂಡಿತ್ತು. ನಾಯಕಿ ಅಲಿಸ್ಸಾ ಹೀಲಿ ಗಾಯಾ ಳಾಗಿ ಸರಣಿಯಿಂದ ಬೇರ್ಪಟ್ಟಿರುವುದು ಆಸ್ಟ್ರೇಲಿಯಕ್ಕೆ ಹಿನ್ನಡೆಯಾಗಿ ಪರಿಣಮಿಸ ಬಹುದು. ಇವರ ಗೈರಲ್ಲಿ ಟಹ್ಲಿಯಾ ಮೆಕ್‌ಗ್ರಾತ್ ತಂಡವನ್ನು ಮುನ್ನಡೆಸಲಿದ್ದಾರೆ.