Advertisement
ಬಾದಾಮಿ ಚಾಲುಕ್ಯರ ಉಪನಗರ ಪಟ್ಟದಕಲ್ಲು. ಚರಿತ್ರೆಯಲ್ಲಿ ದಾಖಲಾದದ್ದು ಕಿಸುವೊಳಲ್, ಪಟ್ಟದಕಿಸುವೊಳಲ್, ಪಟ್ಟದಶಿಲಾಪುರ, ಹಮ್ಮಿರಪುರ ಎಂಬೆಲ್ಲಾ ಹೆಸರಿನಿಂದಾದರೆ, ಟಾಲೆಮಿಯು ಪರ್ತಗಲ್ ಎಂದು ಬರೆದನು.
Related Articles
Advertisement
ಬಾದಾಮಿಯಿಂದ ಅನತಿದೂರದಲ್ಲಿರುವ ಪಟ್ಟದಕಲ್ಲು ಪ್ರವೇಶಿಸಿದಂತೆ ಶಿಲ್ಪ ಶಾಲೆಗೇ ನಿಮ್ಮನ್ನು ತೆರೆದುಕೊಳ್ಳುತ್ತೀರಿ. ದ್ರಾವಿಡ ವಿಮಾನ ಶೈಲಿಯಲ್ಲಿ ಸಂಗಮೇಶ್ವರ (ವಿಜಯೇಶ್ವರ), ವಿರೂಪಾಕ್ಷ (ಲೋಕೇಶ್ವರ), ಮಲ್ಲಿಕಾರ್ಜುನ (ತೈಲೋಕೇಶ್ವರ), ಜೈನ ದೇವಾಲಯಗಳಿವೆ.
ನಾಗರ ಶೈಲಿಯಲ್ಲಿ ಗಳಗನಾಥ, ಪಾಪನಾಥ, ಕಾಶಿ ವಿಶ್ವೇಶ್ವರ, ಕಾಡಸಿದ್ದೇಶ್ವರ, ಜಂಬುಲಿಂಗ ದೇವಾಲಯಗಳಿವೆ. ಇಲ್ಲಿರುವ ಇಟ್ಟಿಗೆಯ ಅವಶೇಷಗಳು ಒಂದೊಮ್ಮೆ ಕಲ್ಲಿನ ದೇವಾಲಯಗಳು ನಿರ್ಮಾಣವಾಗುವ ಮೊದಲು ಇಟ್ಟಿಗೆಯ ಕಟ್ಟಡವಿದ್ದ ಗುಮಾನಿಯಿದೆ.
ಚಿತ್ತಾಕರ್ಷಕ ಗವಾಕ್ಷಗಳು, ಕಥೆ ಹೇಳುವ ಸ್ಥಂಭ ಫಲಕದ ಶಿಲ್ಪಗಳು, ಮಹಾನಂದಿ ಗುಡಿಯ ನುಣುಪಿನ ನಂದಿ, ಏಕಶಿಲಾ ಸ್ಥಂಭ ಶಾಸನ ಇಲ್ಲಿನ ಜನಾಕರ್ಷಣೆಯ ವಿಷಯಗಳು. ಚಾಲುಕ್ಯರ ದೊರೆಗಳು ಪಟ್ಟವೇರುತ್ತಿದ್ದ ಕಲ್ಲು, ಸ್ಥಾನ ಪಟ್ಟದಕಲ್ಲು. ರಾಷ್ಟ್ರದ ನವಸಂಸತ್ತಿನಲ್ಲಿ ಸ್ಥಾಪನೆಗೊಂಡ ಸೆಂಗೋಲ್ – ನಂದಿ ಧ್ವಜ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ದಕ್ಷಿಣ ಗೋಡೆಯ ಮೇಲೆ ಕೆತ್ತಲಾದ ಶಿವ-ನಟರಾಜ ಶಿಲ್ಪದ ಎಡಗೈಯಲ್ಲಿ ಕಂಡುಬರುತ್ತದೆ. ಈ ವಿಷಯದಲ್ಲೂ ಮಲಪ್ರಭೆಯ ಕೆಂಪು ಮರಳಿನ ಕಲ್ಲು ವಿಶೇಷವೇ.
ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಿಳಿಸುವ ಕೇಂದ್ರಗಳು. ಇವು ಕೌಶಲ ಕಲಾತ್ಮಕ ಸಾಧನೆಗಳ ನೆಲೆ. ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳು ಕೇವಲ ಕಲ್ಲು – ಕಟ್ಟಡಗಳಲ್ಲ, ನಮ್ಮ ಹಿಂದಿನ ಕಥೆಯನ್ನು ಹೇಳುವ ಪುಸ್ತಕಗಳಂತೆ.
ಐತಿಹಾಸಿಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ, ಇದು ಸ್ಥಳೀಯ ಆರ್ಥಿಕತೆಗೂ ಉತ್ತೇಜನ ನೀಡುತ್ತದೆ. ಅದಕ್ಕಾಗಿಯೇ ಈ ಪಾರಂಪರಿಕ ತಾಣಗಳು ಭೂತ-ವರ್ತಮಾನ-ಭವಿಷ್ಯಗಳನ್ನು ಸಂಧಿಸುವ ನಾಗರಿಕತೆಯ ಬೆಸುಗೆ-ಕೊಂಡಿಗಳು. ನಾಗರಿಕತೆಯ ಕೊಂಡಿಗಳನ್ನು ಜತನದಿಂದ ಸಂರಕ್ಷಿಸೋಣ.
ವಿಶ್ವನಾಥ ಭಟ್
ಧಾರವಾಡ