Advertisement
ಇನ್ನೇನು ನಾಯಕ ತನ್ನ ನಾಯಕಿ ಮುಂದೆ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿ ಜೋರು ಮಳೆ ಶುರುವಾಗುತ್ತೆ. ಆ ಮಳೆಯ ಹನಿಗಳ ಜೊತೆ ಜೊತೆಗೆ ನಾಯಕನ ಕಣ್ಣಲ್ಲಿ ಮಾತ್ರ ನೀರು ತುಂಬಿರುತ್ತೆ. ಅಲ್ಲೊಂದು ನಿರೀಕ್ಷಿಸದ ಘಟನೆ ನಡೆದು ಹೋಗಿರುತ್ತೆ. ಅದೇನು ಎಂಬುದೇ ಚಿತ್ರದ ಸಸ್ಪೆನ್ಸ್.
Related Articles
Advertisement
ಮೊದಲರ್ಧ ಸ್ವಲ್ಪ ನಿಧಾನ ಎನಿಸುವ ಚಿತ್ರದಲ್ಲಿ ಚಿತ್ರಕಥೆಗೆ ವೇಗ ಕೊಡಬೇಕಿತ್ತು. ಆದರೂ, ಆಗಾಗ ಕಾಣಿಸಿಕೊಳ್ಳುವ ಹಾಡುಗಳು ಆ ವೇಗಕ್ಕೆ ಸಾಥ್ ಕೊಟ್ಟಿವೆ. ಇಡೀ ಚಿತ್ರದುದ್ದಕ್ಕೂ ನಾಯಕ ಸಿಗರೇಟ್‌ಗೆ ಅಂಟಿಕೊಂಡಿರುವುದನ್ನು ಸ್ವಲ್ಪ ಅರಗಿಸಿಕೊಳ್ಳುವುದು ಕಷ್ಟ.
ಆದರೂ, ಸ್ಟಂಟ್ ಮಾಸ್ಟರ್ ಇಲ್ಲೊಂದು ಹೊಸ ಪ್ರಯೋಗ ಮಾಡಿದ್ದಾರೆ. ಹೀರೋ ಇಂಟ್ರಡಕ್ಷನ್ ಫೈಟ್ಸ್‌ನಲ್ಲಿ ಸಿಗರೇಟ್ ಸೇದುತ್ತಲೇ ಎದುರಾಳಿಗಳನ್ನು ಹೊಡೆದುರುಳಿಸುವ ದೃಶ್ಯಗಳು ತಕ್ಕಮಟ್ಟಿಗೆ ಮಾಸ್ ಪ್ರಿಯರಿಗೆ ಇಷ್ಟವಾಗಬಹುದು.
ಕಥೆಗೆ ತಿರುವು ಸಿಗುವುದೇ ದ್ವಿತಿಯಾರ್ಧದಲ್ಲಿ ಅಲ್ಲೊಂದು ಟ್ವಿಸ್ಟ್ ಕೊಟ್ಟಿರುವ ನಿರ್ದೇಶಕರು, “ಬದ್ರಿ’ಯ ಇನ್ನೊಂದು ಮುಖವನ್ನು ಅನಾವರಣಗೊಳಿಸಿದ್ದಾರೆ. ಅದೇ ಚಿತ್ರದ ಹೈಲೈಟ್. ಅದೇನು ಎಂಬ ಕುತೂಹಲವಿದ್ದರೆ, “ಬದ್ರಿ ಮತ್ತು ಮಧುಮತಿ’ಯ ಲವ್‌ಸ್ಟೋರಿ ಕೇಳಬಹುದು.
ನಾಯಕ ಇಲ್ಲಿ ಆರ್ಮಿ ಅಧಿಕಾರಿ. ರಜೆ ಮೇಲೆ ತನ್ನೂರಿಗೆ ಬರುವ ನಾಯಕ ಮೊದಲ ನೋಟದಲ್ಲೇ ನಾಯಕಿಯನ್ನು ಪ್ರೀತಿಸಲು ಶುರುಮಾಡುತ್ತಾನೆ. ಅವಳ ಹಿಂದೆ ಅಲೆದಾಡಿ, ಅವಳಿಗಾಗಿ ರಾತ್ರಿ-ಹಗಲು ಕಾದು ಹೇಗೋ, ಆಕೆಯಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಳ್ಳುತ್ತಾನೆ.
ಇನ್ನೇನು ತನ್ನವಳನ್ನಾಗಿ ಮಾಡಿಕೊಳ್ಳಬೇಕು ಅಂತ ಯೋಚಿಸಿರುವಾಗಲೇ, ಆಕೆಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾದ ವಿಷಯ ತಿಳಿಯುತ್ತದೆ. ದೇಶ ಪ್ರೇಮಿಯಾಗಿರುವ ನಾಯಕ, ತನ್ನ ಪ್ರೀತಿಯನ್ನು ಬಿಟ್ಟುಕೊಡುತ್ತಾನಾ, ಆ ಹುಡುಗಿಯ ಕುಟುಂಬದ ಹಿತದೃಷ್ಟಿಯಿಂದ ತನ್ನ ಪ್ರೀತಿಯನ್ನೇ ಬದಿಗಿಡುತ್ತಾನಾ ಎಂಬ ಗೊಂದಲ ಎಲ್ಲರಲ್ಲೂ ಕಾಡುತ್ತದೆ.
ಕೊನೆಗೆ ಏನಾಗುತ್ತೆ ಅನ್ನುವುದೇ “ಬದ್ರಿ’ಯ ಕಥೆ. ಪ್ರತಾಪವನ್ ನಟನೆಯಲ್ಲಿನ್ನೂ ಸಾಗಬೇಕಿದೆ. ಫೈಟ್ಸ್ ಮತ್ತು ಡ್ಯಾನ್ಸ್‌ನಲ್ಲಿ ಈ ಮಾತನ್ನು ಹೇಳುವಂತಿಲ್ಲ. ಬಾಡಿಲಾಂಗ್ವೇಜ್‌ನತ್ತ ಗಮನಹರಿಸಿದರೆ, ಮುಂದೆ ಭವಿಷ್ಯವಿದೆ. ನಾಯಕಿ ಆಕಾಂಕ್ಷ ಗ್ಲಾಮರ್‌ಗಷ್ಟೇ ಸೀಮಿತ.
ಉಳಿದಂತೆ ಇಲ್ಲಿ ಕೆಂಪೇಗೌಡ, ಜಹಾಂಗೀರ್, ಗಿರೀಶ್ ಜತ್ತಿ ಪಾತ್ರಕ್ಕೆ ಮೋಸ ಮಾಡಿಲ್ಲ. ಅರವಿಂದ್ ಬೋಳಾರ್ ನಿರ್ದೇಶಕರ ಕಲ್ಪನೆಯಂತೆ ಕೆಲಸ ಮಾಡಿದ್ದಾರೆ. ಎಲ್ವಿನ್ ಜೋಶ್ವ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಹಿನ್ನೆಲೆ ಸಂಗೀತಕ್ಕಿನ್ನೂ ಫೋರ್ಸ್ ಬೇಕಿತ್ತು. ಶಂಕರ್ ಛಾಯಾಗ್ರಹಣ ಪರವಾಗಿಲ್ಲ.
ಚಿತ್ರ: ಬದ್ರಿ ವರ್ಸಸ್ ಮಧುಮತಿನಿರ್ಮಾಣ: ಪ್ರತಾಪವನ್, ಪ್ರದೀಪ್ ಜಿ.ಪಿ.ಜೈನ್, ಧ್ರುವಜಿತ್ ರೆಡ್ಡಿ
ನಿರ್ದೇಶನ: ಶಂಕರ ನಾರಾಯಣ ರೆಡ್ಡಿ
ತಾರಾಗಣ: ಪ್ರತಾಪವನ್, ಆಕಾಂಕ್ಷ ಗಾಂಧಿ, ಕೆಂಪೇಗೌಡ, ಜಹಾಂಗೀರ್, ಗಿರೀಶ್ ಜತ್ತಿ. ಅರವಿಂದ್ ಬೋಳಾರ್ ಇತರರು * ವಿಭ