Advertisement

ಸೆ.1: ಕರಾವಳಿಯಾದ್ಯಂತ ಪತ್ತನಾಜೆ ತುಳುಚಿತ್ರ ಬಿಡುಗಡೆ

09:55 AM Aug 30, 2017 | Harsha Rao |

ಉಡುಪಿ: ಕಲಾಜಗತ್ತು ಕ್ರಿಯೇಶನ್ಸ್‌ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸಿರುವ “ಪತ್ತನಾಜೆ’ – ತುಳುವರ ಪರ್ಬ ಎನ್ನುವ ವಿಭಿನ್ನ ತುಳು ಚಲನಚಿತ್ರ ಸೆ. 1ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ ಎಂದು ಮುಂಬಯಿ ಕಲಾಜಗತ್ತು ಸಂಸ್ಥಾಪಕ, ಚಿತ್ರದ ನಿರ್ದೇಶಕ ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

Advertisement

ಪತ್ತನಾಜೆಯ ಶುಭದಿನ ಜನಿಸುವ ನಾಯಕಿಯ ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಆಯಾಮಗಳು, ಯುವ ಮನಸ್ಸುಗಳ ಪ್ರೀತಿ- ಪ್ರೇಮ, ದೌರ್ಜನ್ಯ ಸಹಿತ ಸಮಾಜದ ಅಂಕು- ಡೊಂಕುಗಳ ವರ್ತುಲದಲ್ಲಿ ಸಿಲುಕಿದರೂ ತುಳು ಮಣ್ಣಿನ ಪ್ರಭಾವದಿಂದ ದಡ ಸೇರುವ ಕಥೆ ಇರುವ ಚಿತ್ರ ಇದಾಗಿದೆ ಎಂದರು. 

ನಟ ಶಿವಧ್ವಜ್‌, ಸೂರ್ಯ ರಾವ್‌, ಬಹುಮುಖ ಪ್ರತಿಭೆ ರೇಶ್ಮಾ ಶೆಟ್ಟಿ, ಪ್ರತೀಕ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಚೇತನ್‌ ರೈ ಮಾಣಿ, ಸುಂದರ್‌ ರೈ ಮಂದಾರ, ಪ್ರವೀಣ್‌ ಮರ್ಕಮೆ, ಸೀತಾ ಕೋಟೆ, ರವಿ ಸುರತ್ಕಲ್‌ ಮೊದಲಾದ ತಾರಾ ಬಳಗ ಇದೆ ಎಂದು ವಿಜಯಕುಮಾರ್‌ ಶೆಟ್ಟಿ ಹೇಳಿದರು.

ಯಕ್ಷಗಾನ ಧಾಟಿಯಲ್ಲಿ ಪಟ್ಲ ಸತೀಶ್‌ ಶೆಟ್ಟಿ ಅವರ ಕಂಠದಲ್ಲಿ ಮೂಡಿಬಂದ 4 ಹಾಡುಗಳ ಸಹಿತ ಒಟ್ಟು 6 ಹಾಡು ಚಿತ್ರದಲ್ಲಿದ್ದು, ಡಾ| ಸುನೀತಿ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ ಶೆಟ್ಟಿ, ಡಾ| ದಿನಕರ ಪಚ್ಚನಾಡಿ ಸಾಹಿತ್ಯ, ವಿ.ಮನೋಹರ್‌ ಸಂಗೀತ ನೀಡಿದ್ದಾರೆ. ವಿಜಯ ಕುಮಾರ್‌ ಕೊಡಿಯಾಲ್‌ ಬೈಲ್‌ ಸಂಭಾಷಣೆ, ಸುರೇಶ್‌ ಬಾಬು ಅವರು ಕರಾವಳಿಯ ಸುಂದರ ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ನಟ ಪ್ರತೀಕ್‌ ಶೆಟ್ಟಿ, ಎರ್ಮಾಳು ಶಶಿಧರ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಕೊಡವೂರು ದಿವಾಕರ ಶೆಟ್ಟಿ ತೊಟದಮನೆ, ಸುಧಾಕರ ಆಚಾರ್ಯ, ಪ್ರಕಾಶ್‌ ಸುವರ್ಣ, ಟಿ. ಸತೀಶ್‌ ಶೆಟ್ಟಿ, ಪೃಥ್ವಿರಾಜ್‌ ಉಪಸ್ಥಿತರಿದ್ದರು.

Advertisement

ಪತ್ತನಾಜೆಗೆ ಹತ್ತರ ನಂಟು
ತುಳನಾಡಿನಲ್ಲಿ ಬೇಷ ತಿಂಗಳ 10ನೇ ದಿನ ಪತ್ತನಾಜೆಯಾಗಿದ್ದು, ತುಳುನಾಡಿನಲ್ಲಿ ಈ ದಿನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಚಿತ್ರದ ಎಲ್ಲ ವಿಭಾಗ ದಲ್ಲೂ 10ರ ನಂಟು ಬೆಸೆದಿದೆ. 10 ಪ್ರಮುಖ ಕಲಾವಿದರು, 10 ಯುವ ತಾರೆಯರು, 10 ಮಂದಿ ಯಕ್ಷ ಸಾಧಕರು, 10 ಮಹನೀಯರು ಹಾಗೂ 10  ತಂತ್ರಜ್ಞರು ಚಿತ್ರಕ್ಕಾಗಿ ಶ್ರಮಿಸಿರುವುದು ಪತ್ತನಾಜೆಯ ವಿಶೇಷ. 
ಉಡುಪಿಯ ಆಶೀರ್ವಾದ್‌ ಚಿತ್ರಮಂದಿರ ದಲ್ಲಿ ಸೆ.1ರಂದು ಬೆಳಗ್ಗೆ 9.30ಕ್ಕೆ ಬಿಡುಗಡೆ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ
ಸಚಿವ ಪ್ರಮೋದ್‌ ಮಧ್ವರಾಜ್‌, ಮಣಿಪಾಲ
ಮೀಡಿಯಾ ನೆಟ್‌ವರ್ಕ್‌ ಲಿ. ನ ಕಾರ್ಯ ನಿರ್ವಾಹಕ ನಿರ್ದೇಶಕ ಟಿ. ಗೌತಮ್‌ ಪೈ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಾಡೋಜ ಡಾ| ಜಿ. ಶಂಕರ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಭಾಗವಹಿಸಲಿದ್ದಾರೆ. ಮಂಗಳೂರಿನ ಜ್ಯೋತಿ, ಮಣಿಪಾಲದ ಐನಾಕ್ಸ್‌ ಸಹಿತ ಕರಾವಳಿಯ 8 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next