ಬೆಂಗಳೂರು: ದೇಶದ ಒಕ್ಕೂಟ ವ್ಯವಸ್ಥೆಯನ್ನು ಕಟ್ಟಿದ “ಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಾಯಿ ಪಟೇಲ್ ಜೀವನಾಧರಿತ ಡಿಜಿಟಲ್ ವಸ್ತು ಪ್ರದರ್ಶನಕ್ಕೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಶುಕ್ರವಾರ ಚಾಲನೆ ದೊರೆತಿದೆ.
ರಾಷ್ಟ್ರೀಯ ಪ್ರಾಚ್ಯ ವಸ್ತು ಸಂಗ್ರಹಾಲಯ ರೂಪಿಸಿರುವ “ಒಂದಾದ ಭಾರತ- ಸರ್ದಾರ್ ಪಟೇಲ್’ ಶೀರ್ಷಿಕೆಯ ವಸ್ತುಪ್ರದರ್ಶನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಶುಕ್ರವಾರ ಚಾಲನೆ ನೀಡಿದರು. ನಂತರ ಅವರು ಪಟೇಲ್ ಪ್ರತಿಮೆ, ಅವರ ಯಶೋಗಾಥೆ ಸಾರುವ ಮಾಹಿತಿ ಫಲಕಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಪಟೇಲ್‌ರ ಜೀವನ ಗಾಥೆಯ ವಸ್ತುಪ್ರದರ್ಶನ ನೋಡಲು ನಗರದ ವಿವಿಧ ಶಾಲೆಯ ನೂರಾರು ಮಕ್ಕಳು ಮ್ಯೂಸಿಯಮ್‌ಗೆ ಆಗಮಿಸಿದ್ದರು. ಕುತೂಹಲದಿಂದ ಅಪರೂಪದ ಮಾಹಿತಿಯನ್ನು ಕಣ್‌ತುಂಬಿಕೊಳ್ಳುತ್ತಿದ್ದ ಮಕ್ಕಳು ಹಾಗೂ ಸಾರ್ವಜನಿಕರು, ಒಕ್ಕೂಟ ವ್ಯವಸ್ಥೆಯ ಬಗೆಗಿನ ವಿವರಣೆಯನ್ನು, ಮಾಹಿತಿ ಫಲಕಗಳಲ್ಲಿ ಅಳವಡಿಸಿದ್ದ ಹೆಡ್‌ಪೋನ್‌ಗಳನ್ನು ಕಿವಿಗಾನಿಸಿಕೊಂಡು ಕೇಳುತ್ತಿದ್ದರು.
ಸರ್ದಾರ್ ವಲ್ಲಭಾಯ್ ಪಟೇಲ್‌ರ ಸಾಧನೆಯನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಜೂನ್ 30 ರವರೆಗೆ ನಡೆಯಲಿರುವ ಈ ವಸ್ತು ಪ್ರದರ್ಶನ ನೋಡಲು ಟಿಕೆಟ್ ಇಲ್ಲ. ಪ್ರತಿನಿತ್ಯ ಸಾವಿರಾರು ಜನ ಆಗಮಿಸುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಮುಂಬೈ, ದೆಹಲಿ ಮೊದಲಾದ ನಗರಗಳಲ್ಲಿ ಈ ವಸ್ತು ಪ್ರದರ್ಶನ ನಡೆಯಲಿದೆ ಎಂದು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿದೇರ್ಶಕ ಕೆ.ಜಿ.ಕುಮಾರ್ ತಿಳಿಸಿದರು.
ಒಕ್ಕೂಟ ವ್ಯವಸ್ಥೆಗೆ ಒಳಪಡಲು ರಾಜರು ಸಹಿ ಹಾಕಿದ ಪತ್ರಗಳಿವೆ: ಸ್ವಾತಂತ್ರಾéನಂತರ ರಾಜರ ಆಳ್ವಿಕೆಯಲ್ಲಿದ್ದ ಪ್ರಾಂತ್ಯಗಳನ್ನು ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಸೇರಿಸಲು ಪಟೇಲ್ ನಡೆಸಿದ ಕಾರ್ಯಾಚರಣೆ, ಅವರು ತೆಗೆದುಕೊಂಡ ದಿಟ್ಟ ಕ್ರಮಗಳ ಬಗ್ಗೆ ಬೆಳಕು ಚೆಲ್ಲುವಂತಹ ಡಿಜಿಟಲ್ ಮಾಹಿತಿ ಫಲಕಗಳು ಪ್ರದರ್ಶನದಲ್ಲಿವೆ. ಒಕ್ಕೂಟ ವ್ಯವಸ್ಥೆಗೆ ಸಹಿ ಹಾಕಿದ ರಾಜರ ಪತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಜೊತೆಗೆ ಸರ್ದಾರ್ ಪಟೇಲ್‌ರ ಕುರಿತ ಸಾಕ್ಷ್ಯಚಿತ್ರ, ಸ್ವಾತಂತ್ರ ಭಾರತದ ತ್ರಿಡಿ ಚಿತ್ರಗಳು ಗಮನ ಸೆಳೆಯುತ್ತಿವೆ.