ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಸಡಿಲಿಸಿ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ ಎರಡು ವಾರ ಕಳೆದರೂ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಪ್ರಯಾಣಿಕರು ಹಿಂದೇಟು ಕುವಂತಾಗಿದ್ದು, ಕಳೆದ ಎರಡು ವಾರದಲ್ಲಿ ಬರೋಬ್ಬರಿ 46,773 ಪ್ರಯಾಣಿಕರು ಮಾತ್ರ ಸಂಚರಿಸಿದ್ದಾರೆ.
ದೊರೆಯದ ಸ್ಪಂದನೆ: ಕೇಂದ್ರ, ರಾಜ್ಯ ಸರ್ಕಾರ 5ನೇ ಹಂತದ ಲಾಕ್‌ಡೌನ್ ಘೋಷಿಸಿ ಹಲವು ಸೇವೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಆದರೆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಆರ್ಭಟ, ಜಿಲ್ಲೆಯಲ್ಲಿ 150ರ ಅಂಚಿಗೆ ಸೋಂಕಿತರ ಸಂಖ್ಯೆ ಮುಟ್ಟಿರುವುದರಿಂದ ಬಸ್ ಪ್ರಯಾಣಕ್ಕೆ ನಾಗರಿಕರು ಹಿಂದೇಟು ಹಾಕಿದ್ದು, ಸಾರಿಗೆ ಸೇವೆಗೆ ಈಗ ಪ್ರಯಾಣಿಕರಿಂದ ನಿರೀಕ್ಷಿತ ಸ್ಪಂದನೆ ದೊರೆಯದಿರುವುದು ಎದ್ದು ಕಾಣುತ್ತಿದೆ.
ಪ್ರಯಾಣಿಕರ ಬರ: ಲಾಕ್‌ಡೌನ್ ಸಡಿಲಿಕೆ ಬಳಿಕ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಸೇವೆ ಆರಂಭಿಸಿದ ನಂತರ ಎರಡು ವಾರದಲ್ಲಿ ಇದುವರೆಗೂ 791 ಬಸ್‌ಗಳು ಕಾರ್ಯಾಚರಣೆ ಮಾಡಿವೆ. ಒಟ್ಟು 1,725 ಟ್ರಿಪ್‌ಗ್ಳಲ್ಲಿ ಬಸ್‌ಗಳು 1.19 ಲಕ್ಷ ಕಿ.ಮೀ. ಸಂಚರಿಸಿದ್ದು, ಎರಡು ವಾರದಲ್ಲಿ 46,773 ಮಂದಿ ಪ್ರಯಾಣಿಕರು ಜಿಲ್ಲೆಯಿಂದ ವಿವಿಧ ಭಾಗಗಳಿಗೆ ಸಂಚರಿಸಿದ್ದಾರೆ. ಆದರೆ ಬಹುಪಾಲು ಚಿಕ್ಕಬಳ್ಳಾಪುರದಿಂದ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸಿದವರೇ ಹೆಚ್ಚು.
ಆದರೆ ಇದುವ ರೆಗೂ ಚಿಕ್ಕಬಳ್ಳಾಪುರದಿಂದ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬಸ್ ಸೌಕರ್ಯ ಇದ್ದರೂ ಪ್ರಯಾಣಿಕರಿಗೆ ಬರ ಎದುರಾಗಿದೆ. ಒಂದು ಬಸ್‌ನಲ್ಲಿ 30 ಪ್ರಯಾಣಿಕರು: ಪ್ರತಿ ಟ್ರಿಪ್ ಮುಗಿದ ಬಳಿಕ ಬಸ್‌ನ್ನು ಕ್ರಿಮಿನಾಶಕ ಸಿಂಪಡಿಸಿ ಸ್ವತ್ಛಗೊಳಿಸಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆ ಹಿತದೃಷ್ಟಿಯಿಂದ ಎಲ್ಲ ರೀತಿಯ ಮನ್ನೆಚ್ಚರಿಕೆ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಪ್ರಯಾಣಿಕ ರಿಗೆ ಉಷ್ಣಾಂಶ ಪರೀಕ್ಷಿಸಿ 30 ಪ್ರಯಾಣಿಕರಿಗೆ ಬಸ್‌ನಲ್ಲಿ ಅವಕಾಶ ಕಲ್ಪಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ.
10 ವರ್ಷ ಕೆಳಗಿನ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಕೆಎಸ್ ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್ ಉದಯವಾಣಿಗೆ ತಿಳಿಸಿದರು. ಜೂನ್ 8 ರ ನಂತರ ದೇವಾ ಲಯ, ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಳ್ಳುವುದರಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಬರಬಹುದು ಎಂದರು.
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಮೇ 19ರಿಂದಲೇ ಮುಕ್ತವಾಗಿದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದೆ. ಎರಡು ವಾರದಲ್ಲಿ ಒಟ್ಟು 791 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗೆ ಪ್ರಯಾಣಿಸಲು ಯಾರು ಮುಂದೆ ಬರುತ್ತಿಲ್ಲ. ಎರಡು ವಾರದಲ್ಲಿ ನಿಗಮಕ್ಕೆ ಒಟ್ಟು 30.31 ಲಕ್ಷ ರೂ. ಹಣ ಸಂಗ್ರಹವಾಗಿದೆ.
-ಮಂಜುನಾಥ, ಡಿಟಿಒ, ಕೆಎಸ್‌ಆರ್‌ಟಿಸಿ, ಚಿಕ್ಕಬಳ್ಳಾಪುರ