Advertisement

ಪ್ರಯಾಣಿಕರ ಸಂಖ್ಯೆ ಇಳಿಮುಖ: 60 ಬಸ್‌ಗಳ ಕಡಿತ

09:20 PM Mar 17, 2020 | Lakshmi GovindaRaj |

ಮೈಸೂರು: ಪ್ರಯಾಣಿಕರ ಸಂಖ್ಯೆ ಇಳಿಮುಖವಾದ ಹಿನ್ನೆಲೆ ಮೈಸೂರು-ಬೆಂಗಳೂರು ಮಾರ್ಗದ 60 ಬಸ್‌ಗಳ ಸೇವೆಯನ್ನು ನಿಲ್ಲಿಸಲಾಗಿದ್ದು, ಬಸ್‌ಪಾಸ್‌ ಪ‌ಡೆದವರ ಸ್ಥಿತಿ ಅತಂತ್ರವಾಗಿದೆ. ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಬರುವ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾದ ಹಿನ್ನೆಲೆ 60 ಬಸ್‌ಗಳು ಸ್ಥಗಿತವಾಗಿದ್ದು, ಇರುವ ಬಸ್‌ಗಳಲ್ಲಿಯೇ ಪ್ರಯಾಣಿಕರು ತೆರಳಬೇಕಾಗಿದೆ.

Advertisement

ಕಳೆದ ಒಂದೆರೆಡು ತಿಂಗಳ ಹಿಂದೆ ಮೈಸೂರು-ಬೆಂಗಳೂರು ಹಾಗೂ ಬೆಂಗಳೂರು-ಮೈಸೂರು ಮಾರ್ಗವಾಗಿ ಸಾರಿಗೆ ಇಲಾಖೆ ಬಸ್‌ಗಳು 500ಕ್ಕೂ ಹೆಚ್ಚು ಟ್ರಿಪ್‌ ಮಾಡುತ್ತಿದ್ದವು. ಇದ್ದಕ್ಕಿದ್ದಂತೆ ಪ್ರಯಾಣಿಕರ ಸಂಖ್ಯೆ ಕುಸಿದಿದ್ದಕ್ಕೆ ಈ ಮಾರ್ಗದ 60 ಬಸ್‌ಗಳನ್ನು ರದ್ದುಗೊಳಿಸಿ, 420 ಟ್ರಿಪ್‌ಗ್ಳಿಗೆ ಕಡಿತಗೊಳಿಸಲಾಗಿದೆ. ಇದರಿಂದ ಬೆಂಗಳೂರು ಮಾರ್ಗದಲ್ಲಿರುವ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ರಾಮನಗರಗಳಿಗೆ ಬಸ್‌ಪಾಸ್‌ ಪಡೆದು ಪ್ರಯಾಣಿಸುವವರಿಗೆ ಸಮಸ್ಯೆ ಎದುರಾಗಿದೆ.

ಹೆಚ್ಚುವರಿ ರೈಲು: ಕಡಿಮೆ ದರದಲ್ಲಿ ನಿಗದಿತ ಸಮಯದಲ್ಲಿ ಮಂಡ್ಯ, ಮದ್ದೂರು, ರಾಮನಗರ ಹಾಗೂ ಬೆಂಗಳೂರಿಗೆ ತೆರಳಲು ರೈಲುಗಳು ಪೂರಕವಾಗಿರುವ ಹಿನ್ನೆಲೆ ಹೆಚ್ಚು ಮಂದಿ ರೈಲಿನತ್ತ ಮುಖಮಾಡಿರುವುದು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬಾರಿ ಹೊಡೆತ ಬಿದ್ದಂತಾಗಿದೆ. ಇತ್ತೀಚೆಗೆ ಶೇ.12ರಷ್ಟು ಬಸ್‌ ಪ್ರಯಾಣ ದರ ಹೆಚ್ಚಳವಾದ ನಂತರ ಬಸ್‌ನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. ಈ ಹಿಂದೆ ನಿತ್ಯ ಮೈಸೂರಿನಿಂದು ಬೆಂಗಳೂರು ಹಾಗೂ ಬೆಂಗಳೂರಿನಿಂದ ಮೈಸೂರಿಗೆ 30 ರೈಲುಗಳು ಸಂಚರಿಸುತ್ತಿದ್ದವು. ಆದರೆ, ತಿಂಗಳುಗಳ ಹಿಂದೆ ಮತ್ತೆ 4 ಹೊಸ ರೈಲುಗಳು ಮೈಸೂರಿಗೆ ಹೆಚ್ಚುವರಿಯಾಗಿ ಆಗಮನವಾಗಿದ್ದು, ಹೆಚ್ಚು ಪ್ರಯಾಣಿಕರು ರೈಲುಗಳಿಗೆ ಅವಲಂಬಿತರಾಗಿದ್ದಾರೆ.

ಮೈಸೂರಿಗೆ 4 ಹೊಸ ರೈಲುಗಳು: ಕೆಲ ತಿಂಗಳ ಹಿಂದೆ ವಿವಿಧ ಪ್ರದೇಶ ಮತ್ತು ರಾಜ್ಯಗಳಿಂದ ಬೆಂಗಳೂರಿಗೆ ಬರುತ್ತಿದ್ದ ನಾಲ್ಕು ರೈಲುಗಳನ್ನು ಮೈಸೂರಿಗೆ ವಿಸ್ತರಿಸಲಾಗಿದೆ. ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ನಿಗದಿತ ಸಮಯ ಮತ್ತು ಹಣ ಉಳಿತಾಯ ದೃಷ್ಟಿಯಲ್ಲಿಟ್ಟುಕೊಂಡು ರೈಲುಗಳನ್ನು ಏರುತ್ತಿದ್ದಾರೆ.

ವಿದ್ಯಾರ್ಥಿಗಳ ಪರದಾಟ: ಬೆಂಗಳೂರು-ಮೈಸೂರು ಮಾರ್ಗದ 60 ಬಸ್‌ಗಳ ಕಡಿತದಿಂದ ನಿತ್ಯ ಮೈಸೂರಿನಿಂದ ಮಂಡ್ಯ, ಮದ್ದೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಮಾಸಿಕ ಪಾಸ್‌ ಪಡೆದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಇರುವ ಕೆಲವೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಇಕ್ಕಾಟ್ಟಾದರೂ ಏರಬೇಕಾದ ಪರಿಸ್ಥಿತಿಯಿದೆ.

Advertisement

ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಯಾಣಿಕರಿಲ್ಲ ಎಂಬ ನೆಪವೊಡ್ಡಿ ಬಸ್‌ ಕಡಿತ ಮಾಡಿದ್ದಾರೆ. ನಾವು ಮಾಸಿಕ ಪಾಸ್‌ ಪಡೆದಿದ್ದು, ನಿಗದಿತ ಸಮಯದಲ್ಲಿ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಬಸ್‌ ಕಡಿತವಾದ್ದರಿಂದ ಮೈಸೂರಿನಲ್ಲಿಯೇ ಬಸ್‌ಗಳ ಭರ್ತಿಯಾಗುವ ಹಿನ್ನೆಲೆ ಶ್ರೀರಂಗಪಟ್ಟಣ, ಮಂಡ್ಯದವರು ಬಸ್‌ ಏರುವುದಾದರು ಹೇಗೆ ಎಂದು ಮಾಸಿಕ ಬಸ್‌ ಪಾಸ್‌ ಪಡೆದವರ ಅಳಲಾಗಿದೆ.

ಪ್ರಯಾಣಿಕರು ಕ್ಷೀಣಿಸಲು ಏನು ಕಾರಣ?: ಪ್ರತಿದಿನ ಕೆಲಸದ ನಿಮಿತ್ತ ಸಾವಿರಾರು ಮಂದಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಾರೆ. ಮೊದಲಿನಿಂದಲೂ ಸಾರಿಗೆ ಇಲಾಖೆ ಬಸ್‌ಗಳಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಟ್ರಾಫಿಕ್‌ ಸಿಗ್ನಲ್‌, ಬಸ್‌ ಸ್ಟಾಂಡ್‌ಗಳಲ್ಲಿ ಊಟ-ತಿಂಡಿಗೆ ಬಸ್‌ ನಿಲ್ಲಿಸುವುದರಿಂದ ಬೇಸತ್ತಿದ್ದರು. ಇದರ ಬೆನ್ನಲೆ ಕಾರ್ಮಿಕರು ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ಹೊಸ ರೈಲುಗಳನ್ನು ಮೈಸೂರಿಗೆ ಬಿಡಲಾಯಿತು. ಇದರಿಂದ ಅರ್ಧದಷ್ಟು ಪ್ರಯಾಣಿಕರು ರೈಲಿಬತ್ತ ಮುಖಮಾಡಿದ್ದಾರೆ.

ಈ ಹಿಂದೆ ಮೈಸೂರು ಬೆಂಗಳೂರು ಮಾರ್ಗವಾಗಿ 500ಕ್ಕೂ ಹೆಚ್ಚು ಟ್ರಿಪ್‌ಗ್ಳು ಇದ್ದವು. ಈ ವೇಳೆ ಕೆಲ ಬಸ್‌ಗಳು ಪ್ರಯಾಣಿಕರಿಲ್ಲದೇ ಖಾಲಿ ಹೋಗುತ್ತಿದ್ದವು. ಇದರಿಂದ ಸಂಸ್ಥೆಗೆ ನಷ್ಟವಾಗಿತ್ತು. ನಷ್ಟವನ್ನು ಸರಿದೂಗಿಲಸಲು 60 ಬಸ್‌ಗಳ ಸಂಚಾರ ಕಡಿತಗೊಳಿಸಲಾಗಿದೆ. ಈಗ ಎಲ್ಲಾ ಬಸ್ಸುಗಳಿಗೆ ಅಗತ್ಯವಿರುವಷ್ಟು ಪ್ರಯಾಣಿಕರು ಬರುತ್ತಿದ್ದಾರೆ.
-ಆರ್‌.ಅಶೋಕ್‌ಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ಗ್ರಾಮಾಂತರ

ಬೆಂಗಳೂರಿನಲ್ಲಿ ನಾವು ಕೆಲಸ ಮಾಡುತ್ತಿದ್ದು, ನಿಗದಿತ ವೇಳೆಗೆ ಕಚೇರಿ ತಲುಪಲು ರೈಲನ್ನೇ ಅವಲಂಬಿಸಿದ್ದೇವೆ. ಬಸ್‌ಗಳಲ್ಲಿ ತೆರಳಿದರೆ ನಮಗೆ ಟ್ರಾಫಿಕಿನದ್ದೇ ಸಮಸ್ಯೆ. ಜೊತೆಗೆ ಟಿಕೆಟ್‌ ದರ ಹೆಚ್ಚು. ಆದರೆ ರೈಲಿನಲ್ಲಿ ಇದಾವುದರ ಸಮಸ್ಯೆ ಇಲ್ಲ,
-ರಾಜೇಂದ್ರ, ಪ್ರಯಾಣಿಕ

* ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next