Advertisement

ಸೌಕರ್ಯವಿಲ್ಲದೆ ಪ್ರಯಾಣಿಕರ ಪರದಾಟ

09:40 AM Jan 07, 2019 | |

ಜಮಖಂಡಿ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಸ್‌ ನಿಲ್ದಾಣ ಕಾಮಗಾರಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಮೂಲಸೌಕರ್ಯಗಳಿಗಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

Advertisement

ದಿ| ಸಿದ್ದು ನ್ಯಾಮಗೌಡರ ಪ್ರಯತ್ನದ ಫಲವಾಗಿ 4 ಕೋಟಿ ವೆಚ್ಚದಲ್ಲಿ 4.04 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್‌ ನಿಲ್ದಾಣ ಕಾಮಗಾರಿ ಶೇ. 70 ಮುಕ್ತಾಯಗೊಂಡಿದೆ. ಇನ್ನುಳಿದ ಶೆ. 30 ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಅನುಮಾನ ಮೂಡಿದೆ.

ಬಸ್‌ ನಿಲ್ದಾಣದಲ್ಲಿ ಈಗಾಗಲೇ 16 ಪ್ಲಾಟ್ ಫಾರಂ ನಿರ್ಮಾಣವಾಗಿದ್ದರೂ ಬಸ್‌ಗಳು ಮಾತ್ರ ಯದ್ವಾತದ್ವಾ ನಿಲ್ಲುತ್ತವೆ. ಕಾರಣ ಫ್ಲಾಟ್ಫಾರಂಗಳ ಸಂಖ್ಯೆ ನಮೂದಿಸಿಲ್ಲ. ನಗರದ ಬಸ್‌ ನಿಲ್ದಾಣಕ್ಕೆ ಸ್ಥಳೀಯ ಡಿಪೋ ಸಹಿತ ಹೊರಗಡೆಯಿಂದ ಪ್ರತಿನಿತ್ಯ ಒಟ್ಟು 754 ಬಸ್‌ ಸಂಚರಿಸುತ್ತಿವೆ. ಆದರೆ, ಎಲ್ಲ ಬಸ್‌ಗಳು ಬೇಕಾಬಿಟ್ಟಿಯಾಗಿ ನಿಲ್ಲುವುದರಿಂದ ಪ್ರಯಾಣಿಕರಿಗೆ ಯಾವ ಬಸ್‌ ಎಲ್ಲಿಗೆ ನಿಲುತ್ತದೆ ಎಲ್ಲಿಗೆ ಹೋಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಬಸ್‌ ನಿಲುಗಡೆ ಮಾಡುವ ಫ್ಲಾಟ್ಫಾರಂ ನಿಗದಿಪಡಿಸಿಲ್ಲ. ಇದರಿಂದ ಪ್ರಯಾಣಿಕರು ಎಲ್ಲ ಫ್ಲಾಟ್ಫಾರಂಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಬಸ್‌ ನಿಲ್ದಾಣದಲ್ಲಿ ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕೈಗೊಳ್ಳದ್ದರಿಂದ ಧೂಳು ಹಾರುತ್ತಿದ್ದು, ಪ್ರಯಾಣಿಕರು ಮೂಗು ಮುಚ್ಚಿ ಕೊಳ್ಳುವಂತಾಗಿದೆ. ಶುದ್ಧ ಕುಡಿಯುವ ನೀರಿನ ಸೌಕರ್ಯ, ವಿದ್ಯುತ್‌ ಸಂಪರ್ಕವಿಲ್ಲ, ಇಂದಿರಾ ಕ್ಯಾಂಟಿನ್‌ ಕೆಲಸ ನಡೆದಿದೆ. ಪ್ರಯಾಣಿಕರಿಗೆ ಸಮರ್ಪಕ ರೀತಿಯಲ್ಲಿ ಆಸನ ವ್ಯವಸ್ಥೆಗಳಿಲ್ಲ.

ಖಾಸಗಿನವರಿಗೆ ನೀಡಿದ ಕ್ಯಾಂಟಿನ್‌ ಹಾಗೂ ಇತರೆ ವಾಣಿಜ್ಯ ಮಳಿಗೆಗಳು ಟೆಂಡರ್‌ ಆದರೂ ಈವರೆಗೂ ಅಂಗಡಿಗಳನ್ನು ನೀಡಿಲ್ಲ. ವರ್ಷದೊಳಗೆ ಕಟ್ಟಡ ಪೂರ್ಣಗೊಳಿಸಬೇಕಾಗಿದ್ದ ಗುತ್ತಿಗೆದಾರರು ಆಮೆಗತಿಯಲ್ಲಿ ಕಾಮಗಾರಿ ಕೈಗೊಂಡಿದ್ದಾರೆ.

Advertisement

1964ರಲ್ಲಿ ಅಂದಿನ ಮುಖ್ಯಮಂತ್ರಿ ತಾಲೂಕಿನ ಸಾವಳಗಿ ಗ್ರಾಮದವರೇ ಆಗಿದ್ದ ದಿ| ಬಿ. ಡಿ.ಜತ್ತಿ ಸ್ಥಾಪಿಸಿದ ಓಬೇರಾಯನ ಕಾಲದ ಬಸ್‌ ನಿಲ್ದಾಣವನ್ನು ಸಿದ್ದು ನ್ಯಾಮಗೌಡ ಅವರು ಸಿಂಗಾಪುರ ಮಾದರಿಯಲ್ಲಿ ನಿರ್ಮಿಸಲು ಉದ್ದೇಶದಿಂದ ನೂತನ ಬಸ್‌ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿದ್ದರು. ಹಿಂದಿನ ಸಚಿವ ಈಶ್ವರ ಖಂಡ್ರೆ ಅವರಿಂದ ಉದ್ಘಾಟನೆಗೊಂಡಿದ್ದರೂ ಬಸ್‌ ನಿಲ್ದಾಣ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ.

ನೂತನ ಬಸ್‌ ನಿಲ್ದಾಣವನ್ನು 15-20 ದಿನಗಳಲ್ಲಿ ಜನರ ಸೇವೆಗೆ ಸಿದ್ಧಗೊಳಿಸಲಾಗುವುದು. ಅಪೂರ್ಣಗೊಂಡ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರನಿಗೆ ನೋಟಿಸ್‌ ನೀಡಲಾಗಿದೆ. ಬಸ್‌ ನಿಲ್ದಾಣವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿದ ನಂತರ ಅಚ್ಚುಕಟ್ಟಾಗಿ ನಿರ್ವಹಣೆ ನಡೆಯಲಿದೆ. ಈಗಾಗಲೇ ಸುಮಾರು 50 ಲಕ್ಷ ವೆಚ್ಚದಲ್ಲಿ ಬಸ್‌ ನಿಲ್ದಾಣದ ಸುಮಾರು 2800 ಸ್ವೇರ್‌ ಮೀಟರ್‌ ರಸ್ತೆ ಡಾಂಬರೀಕರಣ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. 
•ಪಿ.ವಿ. ಮೇತ್ರಿ 
ವಿಭಾಗೀಯ ಸಾರಿಗೆ ಅಧಿಕಾರಿ ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next