Advertisement

ಎಸ್‌ಸಿ-ಎಸ್ಟಿ ಮೀಸಲು ಮಸೂದೆಗೆ ಅಂಗೀಕಾರ

11:55 PM Dec 26, 2022 | Team Udayavani |

ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ 2022ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಮಸೂದೆಯನ್ನು ವಿಧಾನಸಭೆಯಲ್ಲಿ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು.

Advertisement

ಪರಿಶಿಷ್ಟ ಜಾತಿ ಮತ್ತು ಪರಿ ಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಇತರರು ನಿಯಮ 69ರಡಿ ಮಂಡಿಸಿದ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಉತ್ತರಿಸಿದ ಬಳಿಕ ಕಾನೂನು ಸಚಿವ ಮಾಧುಸ್ವಾಮಿ ಮಸೂದೆಯನ್ನು ಮಂಡಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾವನೆಯನ್ನು ಸದನದ ಅನುಮೋದನೆಗೆ ಮಂಡಿಸಿದಾಗ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಒಕ್ಕೊರಲಿನಿಂದ ಪ್ರಸ್ತಾವನೆಯನ್ನು ಅನುಮೋದಿಸಿದರು.

ಮಸೂದೆ ಕುರಿತು ವಿವರಣೆ ನೀಡಿದ ಸಚಿವ ಮಾಧುಸ್ವಾಮಿ, ಚುನಾವಣೆ ದೃಷ್ಟಿಯಿಂದ ರಾಜಕೀಯ ಉದ್ದೇಶಕ್ಕೆ ಎಸ್ಸಿ-ಎಸ್ಟಿ ವರ್ಗಗಳಿಗೆ ಮೀಸಲಾತಿ ಹೆಚ್ಚುಸುತ್ತಿಲ್ಲ. ಸಾಧಕ-ಬಾಧಕಗಳ ಸಮಗ್ರವಾಗಿ ಪರಿಶೀಲಿಸಲಾಗಿದೆ. ಎರಡು ಬಾರಿ ಸರ್ವಪಕ್ಷ ಸಭೆ ಕರೆದು ಚರ್ಚಿಸಲಾಗಿದೆ.

ಸಂವಿಧಾನದ 9ನೇ ಶೆಡ್ನೂಲ್‌ನಲ್ಲಿ ಸೇರಿಸುವ ಬಗ್ಗೆಯೂ ಸರಕಾರಕ್ಕೆ ಅರಿವಿದೆ. 101 ಎಸ್ಸಿ, 53 ಎಸ್ಟಿ ಜಾತಿಗಳಿವೆ. ನ್ಯಾ| ಎ.ಜೆ.ಸದಾಶಿವ ಆಯೋಗ, ನ್ಯಾ| ನಾಗಮೋಹನದಾಸ್‌ ಆಯೋಗ, ನ್ಯಾ| ಸುಭಾಷ್‌ ಅಡಿ ಆಯೋಗದ ವರದಿಗಳಿವೆ. ನ್ಯಾ| ನಾಗಮೋಹನ್‌ದಾಸ್‌ ಆಯೋಗದ ಶಿಫಾರಸು ಸರಕಾರ ಒಪ್ಪಿಕೊಂಡಿದೆ. ನಾಯಕ ವಿದ್ಯಾರ್ಥಿ ಸಂಘದ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪು ನ್ಯಾಯಾಲಯವೂ ನಮ್ಮ ಜತೆಗಿದೆ ಎಂದು ಸರಕಾರ ಭಾವಿಸುತ್ತದೆ ಎಂದರು.

Advertisement

ಮೀಸಲಾತಿ ಕೊಡಬೇಕು ಎಂದು ನಮಗೆ ಆಸೆ ಇತ್ತು. ಚುನಾವಣೆ ಕಾಲದಲ್ಲಿ ಮಾತು ಕೊಟ್ಟಿದ್ದೆವು. ಹಾಗಾಗಿ ನಮ್ಮ ಮೇಲೆ ಒತ್ತಡವೂ ಇತ್ತು. ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ರಾಜ್ಯಪಾಲರು ಸಹ ಅಧ್ಯಾದೇಶಕ್ಕೆ ಸಹಿ ಹಾಕಿದರು. ಈಗಾಗಲೇ ನಿಯಮಗಳನ್ನು ರೂಪಿಸಿ ಮುಂದಿನ ನೇಮಕಾತಿಗಳಲ್ಲಿ ಶೇ.24ರಷ್ಟು ಮೀಸಲಾತಿ ಕೊಡುವ ಕೆಲಸ ಆಗುತ್ತದೆ ಎಂದರು.

ಅನುಮಾನ ಬೇಡ
ಸಂವಿಧಾನಕ್ಕೆ ತಿದ್ದುಪಡಿ ತಂದು ಕಾಯ್ದೆಯನ್ನು ಸಂವಿಧಾನದ 9ನೇ ಶೆಡ್ನೂಲ್‌ಗೆ ಸೇರಿಸದೆ ಹೋದರೆ ಮೀಸಲಾತಿ ಕೊಡಲು ಸಾಧ್ಯವಾಗುವುದಿಲ್ಲ ಎಂಬ ಅನುಮಾನವನ್ನು ವಿಪಕ್ಷ ನಾಯಕರು ವ್ಯಕ್ತಪಡಿಸಿದ್ದಾರೆ. ಅಂತಹ ಅನುಮಾನ ಬೇಡ. ವಿಧಾನಸಭೆಯಲ್ಲಿ ಮಸೂದೆಗೆ ಅನುಮೋದನೆ ಸಿಕ್ಕರೆ ಅದನ್ನು ಕಾರ್ಯಗತಗೊಳಿಸುವ ಕೆಲಸವನ್ನು ಸರಕಾರ ಮಾಡಲಿದೆ. ಈ ವಿಚಾರದಲ್ಲಿ ಸರಕಾರ ಅಥವಾ ಪಕ್ಷ ರಾಜಕಾರಣ ಮಾಡುತ್ತಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ಹೃತ್ಪೂರ್ವಕ ಸ್ವಾಗತ
ಮಸೂದೆಯನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಸರ್ವಾನುಮತದ ಬೆಂಬಲ ಸೂಚಿಸುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ ಹೇಳಿದರು. ಬಳಿಕ ಮಾಧುಸ್ವಾಮಿ ಮಸೂದೆಯನ್ನು ಸದನದಲ್ಲಿ ಮಂಡಿಸಿದರು. ಸಭಾಧ್ಯಕ್ಷರು ಮಂಡಿಸಿದ ಪ್ರಸ್ತಾವನೆಗೆ ಮೂರು ಪಕ್ಷದ ಸದಸ್ಯರು ಕೈ ಎತ್ತುವ ಮೂಲಕ ಒಪ್ಪಿಗೆ ನೀಡಿದರು. ಮಸೂದೆಗೆ ಸರ್ವಾನುಮತದ ಅನುಮೋದನೆ ದೊರಕಿದೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.

ಖಾಸಗಿ ವಲಯದ ನೇಮಕಾತಿಗೂ ಕಾನೂನು ಅನ್ವಯವಾಗಲಿ
ಮಸೂದೆ ಬಗ್ಗೆ ಮೇಲೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್‌ನ ಎಚ್‌.ಕೆ. ಪಾಟೀಲ್‌ ಹಾಗೂ ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಅವರು, ಹೊರಗುತ್ತಿಗೆ ನೇಮಕಾತಿಗಳಿಗೆ ಮತ್ತು ಖಾಸಗಿ ವಲಯದ ನೇಮಕಾತಿಗಳಿಗೂ ಈ ಕಾನೂನು ಅನ್ವಯವಾಗಬೇಕು ಎಂದು ಸಲಹೆ ನೀಡಿದರು. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ನಿಯಮಗಳನ್ನು ರೂಪಿಸುವಾಗ ಪರಿಶೀಲಿಸಲಾಗುವುದು ಎಂದು ಮಾಧುಸ್ವಾಮಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next