Advertisement
ಪರ್ಯಾಯ ಪೀಠಾರೋಹಣಗೈಯ್ಯಲಿರುವ ಪುತ್ತಿಗೆ ಮಠದ ಹಿರಿಯ ಮತ್ತು ಕಿರಿಯ ಶ್ರೀಗಳಿಬ್ಬರೂ ಕಾಪು ಕ್ಷೇತ್ರದವರೇ ಆಗಿದ್ದಾರೆ. ಹಿರಿಯ ಯತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪೂರ್ವಾಶ್ರಮದಲ್ಲಿ ಮಾಣಿಯೂರಿನವರಾಗಿದ್ದರೆ, ಕಿರಿಯಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮೂಲತಃ ಅಡ್ವೆಯವರು.
ಪರ್ಯಾಯ ಮಠಾಧೀಶರು ಜ.17ರ ಮಧ್ಯರಾತ್ರಿ ಬಳಿಕ ದಂಡತೀರ್ಥ ಮಠಕ್ಕೆ ಆಗಮಿಸಿ ದಂಡತೀರ್ಥ ಮಠ ಮತ್ತು ಗ್ರಾಮಸ್ಥರ ವತಿಯಿಂದ ಪಾದಪೂಜೆ ಪಡೆದು, ಮಧ್ವಾಚಾರ್ಯರ ದಂಡದಿಂದ ಉದಿಸಿದ ದಂಡತೀರ್ಥ ಕೆರೆಯಲ್ಲಿ ತೀರ್ಥಸ್ನಾನಗೈಯ್ಯುತ್ತಾರೆ. ತೀರ್ಥಸ್ನಾನ ಪೂರೈಸಿದ ಬಳಿಕ ತಮ್ಮ ಕಮಂಡಲದಲ್ಲಿ ದಂಡತೀರ್ಥ ಕೆರೆಯ ತೀರ್ಥ ಕುಂಡದಿಂದ ತೀರ್ಥವನ್ನು ತುಂಬಿಸಿಕೊಂಡು ತಮ್ಮ ಪಟ್ಟದ ದೇವರ ಸಹಿತವಾಗಿ ಮಠದ ಶ್ರೀ ಕುಂಜಿ ಗೋಪಾಲಕೃಷ್ಣ ದೇವರು, ಶ್ರೀ ರಾಮ-ಲಕ್ಷ್ಮಣ-ಸೀತೆ, ರುಕ್ಮಿಣಿ, ಸತ್ಯಭಾಮೆ ಸಹಿತ ಶ್ರೀ ಕೃಷ್ಣ ದೇವರಿಗೆ ಅರ್ಚನೆ ಸಹಿತ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಪರ್ಯಾಯದ ಶೋಭಾಯಾತ್ರೆಗಾಗಿ ಉಡುಪಿ ಜೋಡುಕಟ್ಟೆಗೆ ನಿರ್ಗಮಿಸುತ್ತಾರೆ.
Related Articles
ಆಚಾರ್ಯ ಮಧ್ವರು ಉಳಿಯಾರಗೋಳಿ ತೋಟಂತಿಲ್ಲಾಯ ಮನೆತನದ ಗುರುಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಶಿಕ್ಷಣ ಪಡೆದ ಬಳಿಕ ಲೋಕಸಂಚಾರ ನಡೆಸಿದ ಮಧ್ವಾಚಾರ್ಯರು ಮತ್ತೆ ಗುರುಕುಲಕ್ಕೆ ಆಗಮಿಸಿದ್ದು ಈ ವೇಳೆ ಗುರು ಪತ್ನಿಯ ನಿವೇದನೆಯಂತೆ ಗುರುದಕ್ಷಿಣೆ ರೂಪದಲ್ಲಿ ಉಳಿಯಾರಗೋಳಿ ಗ್ರಾಮದ ಜನತೆಯನ್ನು ಕಾಡುತ್ತಿದ್ದ ನೀರಿನ ಸಂಕಷ್ಟದ ಪರಿಹಾರಕ್ಕಾಗಿ ತಮ್ಮ ದಂಡ (ಬಿದಿರಿನ ಕೋಲು)ದಿಂದ ಭೂಮಿಯನ್ನು ಗೀರಿ ದಂಡತೀರ್ಥ ಕೆರೆಯನ್ನು ಸೃಷ್ಟಿಸಿದರೆಂಬ
ಪ್ರತೀತಿಯಿದೆ. ತೋಟಂತಿಲ್ಲಾಯ ಮನೆತನದವರಿಗೆ ಗುರುದಕ್ಷಿಣೆ ರೂಪದಲ್ಲಿ ಕುಂಜಿ ಗೋಪಾಲಕೃಷ್ಣ ದೇವರ ಮೂರ್ತಿಯನ್ನು ನೀಡಿದ್ದರು. ಮಧ್ವಾಚಾರ್ಯರು ತನ್ನ ಕೈಯ್ಯಲ್ಲಿದ್ದ ದಂಡದಿಂದ ಸೃಷ್ಟಿಸಿದ ಕೆರೆ ದಂಡತೀರ್ಥ ಕೆರೆಯಾಗಿ, ಈ ಗ್ರಾಮವು ಬಳಿಕ ದಂಡತೀರ್ಥ ಎಂಬ ಹೆಸರು ಪಡೆಯಿತು. ಈ ಕೆರೆಯಲ್ಲಿ ವರ್ಷಪೂರ್ತಿ ಹೇರಳವಾಗಿ ನೀರು ತುಂಬಿಕೊಂಡಿರುತ್ತದೆ.
Advertisement