Advertisement
ಇಡೀ ಉತ್ಸವಕ್ಕೆ ಉಡುಪಿ ಸಾಂಪ್ರದಾಯಿಕ ಹಾಗೂ ಧಾರ್ಮಿಕವಾಗಿ ಸಜ್ಜಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣ ಮಡುಗಟ್ಟಿತ್ತು. ಭಕ್ತರು, ಸಾರ್ವಜನಿಕರು ಸಂಭ್ರಮದಿಂದ ಓಡಾಟ ಮಾಡಲಾರಂಭಿಸಿದ್ದಾರೆ. ಊರ, ಪರ ಊರಿನ ಭಕ್ತರು ಆಗಮಿಸಿ ಪರ್ಯಾಯೋತ್ಸವದ ಸಡಗರದಲ್ಲಿ ಮಿಂದೆದ್ದರು. ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ, ಪರ್ಯಾಯೋತ್ಸವ ಸಮಿತಿ ಸಾಂಪ್ರದಾಯಿಕ ಪರ್ಯಾಯೋತ್ಸವ ಆಚರಣೆ ಮಾಡಲು ತೀರ್ಮಾನಿಸಿದೆ. ಕೊರೊನಾ ನಿಯಮ ಪಾಲನೆಗೆ ಭಕ್ತರಿಗೆ ಸೂಚನೆ ನೀಡುವ ಜತೆಗೆ ಅರಿವು ಮೂಡಿಸುವ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ರಥಬೀದಿ, ತೆಂಕಪೇಟೆ, ಬಡಗುಪೇಟೆ, ನಗರದ ಹೃದಯ ಭಾಗದಲ್ಲಿ ಸಾರ್ವಜನಿಕರ ಓಡಾಟ, ಬಗೆಬಗೆಯ ವಸ್ತುಗಳ ಖರೀದಿ ಪ್ರಕ್ರಿಯೆಯಿಂದ ಪರ್ಯಾಯ ಸಂಭ್ರಮ ಕಳೆಗಟ್ಟಿದೆ.
Related Articles
ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವ ಸಂಭ್ರಮದಲ್ಲಿ ಉಡುಪಿ ನಗರ ಅಲಂಕಾರಗಳಿಂದ ಕಂಗೊಳಿಸುತ್ತಿದೆ. ಎಲ್ಲಿ ನೋಡಿದರಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್, ವಿವಿಧ ಬಣ್ಣದ ವಿದ್ಯುತ್ ಲೈಟ್ ಅಲಂಕಾರಗಳು ಕಣ್ಮನ ಸೆಳೆಯಿತು. ಉಡುಪಿ ನಗರಸಭೆ ಕಟ್ಟಡವನ್ನು ವಿದ್ಯುತ್ ಲೈಟ್‌ಗಳಿಂದ ಅಲಂಕರಿಸಲಾಗಿದೆ. 10 ಸಾವಿರ ಮೀಟರ್ ಉದ್ದದ ಬಂಟಿಂಗ್ಸ್ ಮತ್ತು 300 ಕೇಸರಿ ಧ್ವಜದಿಂದ ನಗರವನ್ನು ಶೃಂಗರಿಸಲಾಗಿದೆ. ಬಂಟಿಂಗ್ಸ್ ಮತ್ತು ವಿದ್ಯುತ್ ಅಲಂಕಾರದಿಂದ ನಗರದ ಅಂದ ಹೆಚ್ಚಿದೆ. ಕಿನ್ನಿಮೂಲ್ಕಿಯಿಂದ ಜೋಡುಕಟ್ಟೆ ಪರ್ಯಾಯ ಮೆರವಣಿಗೆ ರಸ್ತೆ ಕೋರ್ಟ್ ರೋಡ್, ಡಯಾನ ವೃತ್ತ, ತೆಂಕಪೇಟೆ ಐಡಿಯಲ್ ಸರ್ಕಲ್ ಮೂಲಕ ರಥಬೀದಿವರೆಗೆ. ರಥಬೀದಿ ಸುತ್ತಲೂ, ತ್ರಿವೇಣಿ ಸರ್ಕಲ್, ಕೆಎಂ ಮಾರ್ಗ ಹೆಚ್ಚು ಆಕರ್ಷಣೆಯಿಂದ ಕೂಡಿತ್ತು.
Advertisement
ಕೊರೊನಾ 3ನೇ ಅಲೆಯಿಂದಾಗಿ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸಲು ಪರ್ಯಾಯೋತ್ಸವ ಸಮಿತಿಯಿಂದ ಈಗಾಗಲೇ ತೀರ್ಮಾನ ಮಾಡಲಾಗಿದೆ. ಇದರಿಂದ ಸಾಮಾನ್ಯ ವರ್ಷಕ್ಕಿಂತ ಈ ಬಾರಿ ಉತ್ಸವಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಇದು ಪರ್ಯಾಯೋತ್ಸವದ ನಿಮಿತ್ತ ವ್ಯಾಪಾರಿ ಗಳಿಗೆ ಆಗುತ್ತಿದ್ದ ವ್ಯಾಪಾರ ವಹಿವಾಟಿನ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಕೊರೊನಾ ದಿಂದ ವ್ಯಾಪಾರ ಚಟುವಟಿಕೆ ಉತ್ತಮವಾಗಿಲ್ಲ ಎಂದು ವ್ಯಾಪಾರಿಗಳು ತಿಳಿಸಿದರು.
ಪರ ಊರಿನ ಭಕ್ತರ ಸಂಖ್ಯೆ ಹೆಚ್ಚಿದ್ದಲ್ಲಿ ವ್ಯಾಪಾರ ಉತ್ತಮ ಇರುತ್ತದೆ, ಈ ಭಾರೀ ಕೋವಿಡ್‌ನಿಂದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಪ್ರತೀ ಪರ್ಯಾಯದಲ್ಲಿ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ನಗರದ ಲಾಡ್ಜ್, ವಸತಿ ಗೃಹಗಳು ಭರ್ತಿಯಾಗುತ್ತಿದ್ದವು. ಕೋವಿಡ್ ನಿರ್ಬಂಧ, ಸರಳ ಪರ್ಯಾಯದಿಂದ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಸಂಖ್ಯೆ ಕಡಿಮೆಯಾದ್ದರಿಂದ ನಗರದ ಲಾಡ್ಜ್, ವಸತಿಗೃಹ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಪರ್ಯಾಯೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರಸಭೆ ವತಿಯಿಂದ ಮೂಲ ಸೌಕರ್ಯ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಸೋಮವಾರ ಇಡೀ ದಿನ ಪೌರ ಕಾರ್ಮಿಕರ ತಂಡ ರಥಬೀದಿ ಸ್ವಚ್ಛತೆ, ನಗರದ ಪ್ರಮುಖ ರಸ್ತೆಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದರು. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಭಕ್ತರು, ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು ಮತ್ತು ಕೈ ತೊಳೆಯಲು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ರಥ ಬೀದಿಯಲ್ಲಿ ನಗರಸಭೆ ಮಾಹಿತಿ ಕೇಂದ್ರ ತೆರೆಯಲಾಗಿದ್ದು. ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಸಲಹೆ ನೀಡಲಾಯಿತು. ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಯಿತು.