ಉಡುಪಿ: ಶ್ರೀ ಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಪೂಜೆಯ ಇತಿಹಾಸದಲ್ಲಿ 251ನೇ ಪರ್ಯಾಯ ಪೂಜೆ, ಶ್ರೀ ಕೃಷ್ಣಾಪುರ ಮಠದ ಸರದಿಯಲ್ಲಿ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಪೂಜೆ ಸನ್ನಿಹಿತವಾದ ಸಂದರ್ಭವನ್ನು ಕೃಷ್ಣ ನಗರಿ ಸಂತಸದಿಂದ ಸಂಭ್ರಮಿಸಿತು.
ಸರ್ವಜ್ಞ ಪೀಠಾರೋಹಣಗೈಯುವ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ, ಜೋಡುಕಟ್ಟೆಗೆ ಆಗಮಿಸಿದರು. ಅಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕತೆಯೇ ಮೈವೆತ್ತಿದ್ದ ಮೆರವಣಿಗೆಯ ಮೂಲಕ ರಥಬೀದಿ ಪ್ರವೇಶಿಸಿದರು. ಬಳಿಕ ಕನಕನ ಕಿಂಡಿಯಲ್ಲಿ ದೇವರ ದರ್ಶನಗೈದರು. ಪರ್ಯಾಯ ಪೀಠಾರೋಹಣದ ಬಳಿಕದ ವಿಧಿವಿಧಾನಗಳು ನೂತನ ಪರ್ಯಾಯ ಶ್ರೀಗಳ ಆಶಯದಂತೆ ಸರಳ, ಸಾಂಪ್ರದಾಯಿಕ ವೈಭವದಲ್ಲಿ ಜರಗಿದವು.
ಪೂರ್ಣಪ್ರಜ್ಞ ಎಂಬ ಅಭಿಧಾನವುಳ್ಳ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನಡೆಸುವ ಅಧಿಕಾರವನ್ನು ತಮ್ಮ ಎಂಟು ಮಂದಿ ಯತಿಶಿಷ್ಯರಿಗೆ ನೀಡಿದ್ದರು. ಎಂಟು ಮಠಗಳ ಈ ಪೀಠಾಧಿಪತಿಗಳ ನಡುವೆ ಶ್ರೀಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರ ಪ್ರಕ್ರಿಯೆಯೇ ಪರ್ಯಾಯ.
1522ರಲ್ಲಿ ಆರಂಭವಾದ ಪರ್ಯಾಯ ವ್ಯವಸ್ಥೆ ಪ್ರತೀ 16 ವರ್ಷಗಳಿಗೆ ಒಮ್ಮೆಯ ಚಕ್ರವನ್ನು ಹಾದು ಈಗ 32ನೇ ಚಕ್ರದಲ್ಲಿದೆ. 32ನೆಯ ಚಕ್ರದಲ್ಲಿ ಎರಡನೆಯದಾದ 250ನೇ ಅದಮಾರು ಪರ್ಯಾಯ ಮುಗಿದು ಮೂರನೆಯದಾದ 251ನೇ ಪರ್ಯಾಯ ಆರಂಭಗೊಳ್ಳುತ್ತಿದೆ. 501ನೇ ವರ್ಷಕ್ಕೆ ಪಾದಾರ್ಪಣೆಯಾಗುತ್ತಿದೆ. ಶ್ರೀ ಅದಮಾರು ಮಠದ 31ನೇ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪರ್ಯಾಯ ಪೀಠದಿಂದ ನಿರ್ಗಮಿಸಿ ಶ್ರೀ ಕೃಷ್ಣಾಪುರ ಮಠದ 34ನೇ ಯತಿ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪೀಠವನ್ನೇರುವ ಕ್ಷಣವನ್ನು ಉಡುಪಿ ಮತ್ತು ಹತ್ತೂರುಗಳ ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಸರಳ, ಸಾಂಪ್ರದಾಯಿಕತೆಗೆ ಆದ್ಯತೆ
ನೂತನ ಪರ್ಯಾಯ ಪೀಠಾಧಿಪತಿ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ವಿಶ್ವೋತ್ತಮ ತೀರ್ಥರಂತೆಯೇ ಸಾಂಪ್ರದಾಯಿಕತೆ, ಏಕಾಂತೋಪಾಸನೆಯಲ್ಲಿ ಹೆಚ್ಚು ಆಸಕ್ತರು. ಅವರ ಆಶಯದಂತೆ ಪರ್ಯಾಯ ಮೆರವಣಿಗೆ, ಪೂಜಾಧಿಕಾರ ಹಸ್ತಾಂತರ, ಪರ್ಯಾಯ ದರ್ಬಾರ್ ಇತ್ಯಾದಿ ವಿಧಿವಿಧಾನಗಳು ಸರಳ ಆದರೆ ಸಾಂಪ್ರದಾಯಿಕವಾಗಿ ನೆರವೇರಿದವು. ಸರಕಾರದ ಕೋವಿಡ್ ನಿಯಮಗಳ ಪಾಲನೆಗೆ ಆದ್ಯತೆ ನೀಡಲಾಗಿತ್ತು.