ಬೆಂಗಳೂರು: ಅಕ್ಕ ಪಾರ್ವತಮ್ಮ ಹಾಗೂ ವರನಟ ಡಾ.ರಾಜ್‌ಕುಮಾರ್ ಅವರೇ ನನ್ನ ಸಾಧನೆಗೆ ಕಾರಣವಾಗಿದ್ದು, ಅವರಿಲ್ಲದಿದ್ದರೇ ನಾನು ಸೊನ್ನೆಯಾಗಿರುತ್ತಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ತಿಳಿಸಿದರು.
ಕನ್ನಡ ಜನಶಕ್ತಿ ಕೇಂದ್ರ ವತಿಯಿಂದ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮವೊಂದರಲ್ಲಿ ಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ನನ್ನನ್ನು ಈ ಮಹಾನಗರಕ್ಕೆ ಕರೆತಂದು ಚಿತ್ರರಂಗದ ಒಡನಾಟಕ್ಕೆ ತಂದು ಒಬ್ಬ ನಿರ್ಮಾಪಕನನ್ನಾಗಿ ಮಾಡಿದ್ದು ನನ್ನ ಅಕ್ಕ- ಭಾವ. ಇಂದಿನ ಎಲ್ಲಾ ಅಭಿನಂದನೆ ಹಾಗೂ ಸನ್ಮಾನಗಳು ಅವರಿಗೆ ಸಲ್ಲಬೇಕು ಎಂದರು.
ನಾನು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದೆ. ಎಷ್ಟೇ ಚಿಕಿತ್ಸೆ ಪಡೆದರೂ ಗುಣಮುಖನಾಗಿರಲಿಲ್ಲ. ಕೊನೆಗೆ ಡಾ.ರಾಜ್‌ಕುಮಾರ್ ಅವರು ಯೋಗ ಮಾಡಿದರೆ ಎಲ್ಲಾ ಕಾಯಿಲೆ ದೂರವಾಗುತ್ತದೆ ಎಂದು ನನಗೆ ಯೋಗ ಕಲಿಸಿಕೊಟ್ಟರು.
ಐದಾರು ತಿಂಗಳಲ್ಲಿ ಗುಣಮುಖನಾದೆ. ಇಂದಿಗೂ ಅವರು ಕಲಿಸಿಕೊಟ್ಟ ಯೋಗವನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಆ ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ಚಿನ್ನೇಗೌಡರಂತಹವರು ವ್ಯಕ್ತಿಗಳು ಕನ್ನಡ ಚಿತ್ರರಂಗಕ್ಕೆ ಹೆಚ್ಚು ಅವಶ್ಯಕತೆ ಇದೆ. ಅವರು ಹೆಚ್ಚೆಚ್ಚು ಉತ್ತಮ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ ಉಪಸ್ಥಿತರಿದ್ದರು.