Advertisement

ವಾಹನಗಳಲ್ಲಿ ಪಕ್ಷದ ಚಿಹ್ನೆ , ನಾಯಕರ ಭಾವಚಿತ್ರಕ್ಕೆ ಕಡಿವಾಣ; ಪರವಾನಿಗೆ ರದ್ದು ಎಚ್ಚರಿಕೆ

12:19 AM Apr 05, 2023 | Team Udayavani |

ಉಡುಪಿ: ಟ್ಯಾಕ್ಷಿ, ಬಸ್‌, ಕಾರು, ಆಟೋರಿಕ್ಷಾ, ದ್ವಿಚಕ್ರ ವಾಹನ ಸಹಿತ ವಿವಿಧ ವಾಹನಗಳಲ್ಲಿ ರಾಜಕೀಯ ಪಕ್ಷದ ಚಿಹ್ನೆ ಹಾಗೂ ಅಭ್ಯರ್ಥಿಗಳ ಫೋಟೋಗಳನ್ನು ಲಗತ್ತಿಸಿದರೆ ದಂಡ ಬೀಳುವುದು ಖಚಿತ.

Advertisement

ವಿಧಾನಸಭಾ ಚುನಾವಣೆ ನಿಮಿತ್ತ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ಆಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್‌ಗಳನ್ನು ತೆರವುಗೊಳಿಸಬೇಕು ಮತ್ತು ಯಾವುದೇ ರೀತಿಯ ರಾಜಕೀಯ ಸಂಬಂಧಿತ ಪೋಸ್ಟರ್‌ಗಳನ್ನು ಅಳವಡಿಸದಂತೆ ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಅಂತಹ ವಾಹನ ಗಳ ಪರವಾನಿಗೆಯನ್ನು ರದ್ದುಗೊಳಿಸಿ, ಎಫ್‌ಐಆರ್‌ ದಾಖಲಿಸಲು ಶಿಫಾರಸು ಮಾಡಲಾಗುವುದು ಎಂದು ಆರ್‌ಟಿಒ ತಿಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಕೆಲವು ವಾಹನಗಳಲ್ಲಿ ಇನ್ನೂ ಕೂಡ ರಾಜಕೀಯ ಪಕ್ಷಗಳ ನಾಯಕರ ಭಾವಚಿತ್ರಗಳು ರಾರಾಜಿಸುತ್ತಿದದ್ದು, ಈ ಬಗ್ಗೆಯೂ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

6 ತಿಂಗಳು ಪರವಾನಿಗೆ ರದ್ದು
ಆಯೋಗದ ಎಚ್ಚರಿಕೆಯ ಹೊರತು ಕೂಡ ಈ ನಿಯಮಾ ವಳಿಗಳನ್ನು ಉಲ್ಲಂ ಸಿದ್ದೇ ಆದಲ್ಲಿ ಅಂತಹ ವಾಹನದ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಬಗ್ಗೆ ಆರ್‌ಟಿಒ ತಿಳಿಸಿದ್ದಾರೆ. ಆಸೆ, ಆಮಿಷಗಳಿಗೆ ಒಳಗಾಗಿ ಅಭ್ಯರ್ಥಿಗಳಿಗೆ ಪುಕ್ಸಟೆ ಪ್ರಚಾರ ನೀಡುವ ಮುನ್ನ ತುಸು ಯೋಚಿಸುವುದು ಉತ್ತಮ. ಈಗಾಗಲೇ ಅಳವಡಿಸಿದವರು ಅದನ್ನು ತೆಗೆಯುವುದು ಕೂಡ ಉತ್ತಮ ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಗಳು.

ತಪಾಸಣೆ ಚುರುಕು
ಬಸ್ಸು, ಆಟೋರಿಕ್ಷಾ ಸಹಿತ ವಾಹನಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಾಗುತ್ತಿದೆಯೇ ಎಂಬ ಬಗ್ಗೆಯೂ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದಾರೆ. ಚುನಾವಣೆ ನಿಮಿತ್ತ ಅಧಿಕೃತವಾಗಿ ಪ್ರಚಾರ ಮಾಡಬಯಸುವವರು ಮುಂಗಡವಾಗಿ ಅನುಮತಿ ತೆಗೆದುಕೊಳ್ಳುವುದು ಅತೀ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next