Advertisement

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

12:23 AM Nov 22, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಮರಳಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಈ ಮಾಸಾಂತ್ಯಕ್ಕೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ತಮ್ಮ ಸಚಿವ ಸಂಪುಟಕ್ಕೆ ಪುಟ್ಟ ಸರ್ಜರಿ ಮಾಡುವ ಚರ್ಚೆ ಈಗ ಕಾಂಗ್ರೆಸ್‌ ವಲಯದಲ್ಲಿ ದಟ್ಟವಾಗಿದೆ.

Advertisement

ಸಿಎಂ ಸಿದ್ದರಾಮಯ್ಯ ಅವರ ದಿಲ್ಲಿ ಪ್ರವಾಸದ ಬೆನ್ನಲ್ಲೇ ಈ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೆ ನಾಗೇಂದ್ರ ಅವರ ಸಂಪುಟ ಸೇರ್ಪಡೆ ವಿಷಯ ಸಂಡೂರು ಕ್ಷೇತ್ರದ ಫ‌ಲಿತಾಂಶವನ್ನು ಅವಲಂಬಿಸಿದೆ. ಅಲ್ಲಿ ಕಾಂಗ್ರೆಸ್‌ ಗೆದ್ದರೆ ಬೆಳಗಾವಿ ಅಧಿವೇಶನಕ್ಕೆ ಮುನ್ನ ಅಂದರೆ ನ. 27 ಅಥವಾ 29ರಂದು ನಾಗೇಂದ್ರ ಅವರನ್ನು ಸಂಪುಟಕ್ಕೆ ಮರಳಿ ಸೇರ್ಪಡೆ ಮಾಡಿಕೊಳ್ಳಬಹುದೆಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಸಿಎಂ ಇತ್ತೀಚೆಗೆ ಚಾಮರಾಜನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲೇ ಈ ವಿಷಯ ಮುನ್ನೆಲೆಗೆ ಬಂದಿತ್ತು. ಅನಿಲ್‌ ಚಿಕ್ಕಮಾದು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಬೆಂಬಲಿಗರು ಆಗ್ರಹಿಸಿದಾಗ, “ನಾಗೇಂದ್ರ ಅವರಿಗೆ ಮಾತು ಕೊಟ್ಟಿದ್ದೇನೆ’ ಎಂದು ಸಿಎಂ ಹೇಳಿದ್ದರು. ಅನಂತರ ಸಂಪುಟ ಪುನಾರಚನೆ ಚರ್ಚೆ ತೀವ್ರವಾಗಿತ್ತು.
ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಹಿರಿಯ ಶಾಸಕರೊಬ್ಬರಿಗೆ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆಯ ಮುನ್ಸೂಚನೆ ನೀಡಿದ್ದಾರೆ. 7ರಿಂದ 8 ಅಸಮರ್ಥ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಆದರೆ ತಮ್ಮ ದಿಲ್ಲಿ ಪ್ರವಾಸ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ನಾಗೇಂದ್ರ ಸೇರ್ಪಡೆ ಸಾಧ್ಯತೆಯ ಬಗ್ಗೆ ಕಾಂಗ್ರೆಸ್‌ ಮೂಲಗಳು ಸ್ಪಷ್ಟವಾಗಿ ತಿಳಿಸಿವೆ. ಸಚಿವ ಸಂಪುಟ ಪುನಾರಚನೆ ಬಜೆಟ್‌ ಮಂಡನೆಯ ಬಳಿಕ ನಡೆಯಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿವೆ. ಆದರೆ ಹೈಕಮಾಂಡ್‌ ಒಪ್ಪಿಗೆ ಕೊಟ್ಟರೆ ಅಧಿವೇಶನಕ್ಕೆ ಮುನ್ನವೇ ಸಿಎಂ ಈ ತೀರ್ಮಾನ ಕೈಗೊಳ್ಳಬಹುದು ಎನ್ನಲಾಗುತ್ತಿದೆ.

ಸಿಂಘ್ವಿ ಜತೆ ಸಿಎಂ ಸಿದ್ದರಾಮಯ್ಯ ಚರ್ಚೆ
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣ ಕುರಿತು ಇ.ಡಿ. ತನಿಖೆ ಚುರುಕುಗೊಳಿಸುತ್ತಿರುವ ಬೆನ್ನಲ್ಲೇ ಉದ್ದೇಶಿತ ಈ ಪ್ರಕರಣದಲ್ಲಿ ತಮ್ಮ ಪರ ವಕಾಲತ್ತು ಮಾಡುತ್ತಿರುವ ಹಿರಿಯ ವಕೀಲಅಭಿಷೇಕ್ ಮನು ಸಿಂಘ್ವಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದರು. ಇದೇ ವೇಳೆ ಹೈಕಮಾಂಡ್‌ ಭೇಟಿಗೂ ಯತ್ನಿಸಿದರು. ಆದರೆ ಮಹಾರಾಷ್ಟ್ರ, ಝಾರ್ಖಂಡ್‌ ವಿಧಾನಸಭಾ ಚುನಾವಣೆ ಫ‌ಲಿತಾಂಶದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ್ಯಾರೂ ಲಭ್ಯವಿಲ್ಲದ ಕಾರಣ ಭೇಟಿ ಸಾಧ್ಯವಾಗಿಲ್ಲ ಎನ್ನಲಾಗಿದೆ.

Advertisement

ಸಾಧ್ಯತೆಗಳೇನು?
ಈ ಮಾಸಾಂತ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಸಚಿವ ಸಂಪುಟಕ್ಕೆ ಕಿರು ಸರ್ಜರಿ
ಸಿದ್ದರಾಮಯ್ಯ ದಿಲ್ಲಿ ಪ್ರವಾಸದ ಬೆನ್ನಲ್ಲೇ ಈ ಚರ್ಚೆ
ಸಂಡೂರಿನಲ್ಲಿ ಕಾಂಗ್ರೆಸ್‌ ಗೆದ್ದರೆ ಬೆಳಗಾವಿ ಅಧಿವೇಶನಕ್ಕೆ ಮುನ್ನ ನಾಗೇಂದ್ರ ಮರಳಿ ಸಂಪುಟಕ್ಕೆ
7ರಿಂದ 8 ಮಂದಿ ಅಸಮರ್ಥ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next