Advertisement

ಜಿಎಸ್‌ಟಿಯಲ್ಲೂ ಪಾಲಿಕೆಗೆ ಪಾಲು

12:00 PM Mar 13, 2018 | Team Udayavani |

ಬೆಂಗಳೂರು: ಮೋಟಾರು ವಾಹನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹಾಗೂ ಜಿಎಸ್‌ಟಿಯಲ್ಲಿ ಪಾಲು ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ಅವಕಾಶವಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

Advertisement

ಪಾಲಿಕೆಯ 2018-19ನೇ ಸಾಲಿನ ಬಜೆಟ್‌ ಮೇಲಿನ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರದಿಂದ ಸಂಗ್ರಹಿಸುವ ಮೋಟಾರು ವಾಹನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹಾಗೂ ಜಿಎಸ್‌ಟಿಯಲ್ಲಿ ಪಾಲು ಪಡೆಯಲು ಅವಕಾಶವಿದ್ದು, ಈ ಕುರಿತು ಸರ್ಕಾರಕ್ಕೆ ಮನವಿ ಮಾಡಬಹುದು ಎಂದರು. 

ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಗಳಿಗೆ ಮನರಂಜನಾ ತೆರಿಗೆ ಸಂಗ್ರಹಿಸುವ ಅವಕಾಶವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಮನರಂಜನಾ ತೆರಿಗೆ ಸಂಗ್ರಹಿಸಲು ಅವಕಾಶವಿದ್ದು, ಸರ್ಕಾರದೊಂದಿಗೆ ಮಾತುಕತೆ ನಡೆಸಿ ಯಾರಿಗೂ ಹೊರೆಯಾಗದ ರೀತಿಯಲ್ಲಿ ತೆರಿಗೆ ಸಂಗ್ರಹಿಸಬಹುದು.

ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮನರಂಜನಾ ತೆರಿಗೆ ಸಂಗ್ರಹಿಸಲು ರಾಜ್ಯ ಸರ್ಕಾರಗಳು ಅನುಮತಿ ನೀಡಿವೆ. ರಾಜ್ಯದಲ್ಲೂ ಶೇ.18ರಿಂದ 28ರವರೆಗೆ ಮನರಂಜನಾ ತೆರಿಗೆ ಸಂಗ್ರಹಿಸಬಹುದಿದ್ದು, ಜಿಎಸ್‌ಟಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಪಾಲು ನೀಡಬೇಕೆಂದು 2011ರಲ್ಲಿಯೇ ಜಿಎಸ್‌ಟಿ ಸಮಿತಿ ಸೂಚಿಸಿದೆ ಎಂದು ಮಾಹಿತಿ ನೀಡಿದರು. 

ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅಳವಡಿಕೆ: ಆಯವ್ಯಯದಲ್ಲಿ ಆರ್ಥಿಕ ಶಿಸ್ತು ತರಲು ರಾಜ್ಯ ಸರ್ಕಾರದ ಮಾದರಿಯಲ್ಲೇ ಪಾಲಿಕೆಯಲ್ಲೂ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅಳವಡಿಸಿಕೊಳ್ಳಬಹುದು. ಪಾಲಿಕೆಯ ಅನುದಾನಕ್ಕೆ ಅನುಗುಣವಾಗಿ ಬಜೆಟ್‌ ಮಂಡನೆಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಆಯುಕ್ತರು ಒಪ್ಪಿಕೊಂಡರು.

Advertisement

ಪ್ರತಿ ವರ್ಷ ಹೆಚ್ಚಿನ ಆದಾಯ ನಿರೀಕ್ಷಿಸಿ ಬಜೆಟ್‌ ಮಂಡಿಸಲಾಗುತ್ತದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ. ಆದರೂ, ಪ್ರತಿ ವರ್ಷ ಆಯವ್ಯಯದಲ್ಲಿನ ಶೇ.80ರಷ್ಟು ಯೋಜನೆಗಳಿಗೆ ಜಾಬ್‌ಕೋಡ್‌ ನೀಡುವುದರಿಂದ ಬಾಕಿ ಬಿಲ್‌ಗ‌ಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಹೀಗಾಗಿ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅಳವಡಿಸಿಕೊಳ್ಳುವ ಕುರಿತು ಚರ್ಚಿಸಬೇಕಾಗಿದೆ ಎಂದು ಸಲಹೆ ನೀಡಿದರು. 

865 ಜಾಹೀರಾತು ಫ‌ಲಕಗಳ ತೆರವು: ಜಿಎಸ್‌ಟಿಯಿಂದಾಗಿ ಜಾಹೀರಾತು ತೆರಿಗೆ ಸಂಗ್ರಹಿಸಲು ಸಾಧ್ಯವಿಲ್ಲದ ಕಾರಣ ಹೊಸ ಜಾಹೀರಾತು ನೀತಿ ಜಾರಿಗೊಳಿಸಿ ಜಾಹೀರಾತು ಹರಾಜು ಹಾಕಲು ತೀರ್ಮಾನಿಸಲಾಗಿದೆ. ಜತೆಗೆ ನಗರದಲ್ಲಿನ 2,439 ಅನಧಿಕೃತ ಫ‌ಲಕಗಳ ಪೈಕಿ ಈಗಾಗಲೇ 865 ಫ‌ಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಆಯುಕ್ತರು ಉತ್ತರಿಸಿದರು.

ಹಾಗಾದರೆ ಹಲವಾರು ವರ್ಷಗಳಿಂದ ಪಾಲಿಕೆಗೆ ಬಾಕಿ ಉಳಿಸಿಕೊಂಡಿರುವ ಹಣದ ಕತೆಯೇನು ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಕೇಳಿದಾಗ, ಜುಲೈ 1 ರಿಂದ ಜಿಎಸ್‌ಟಿ ಜಾರಿಯಾಗಿದ್ದು ಅದಕ್ಕೆ ಮೊದಲಿನ ಬಾಕಿ ಸಂಗ್ರಹಕ್ಕೆ ಅವಕಾಶವಿದೆ ಎಂದು ಆಯುಕ್ತರು ತಿಳಿಸಿದರು.

ಸರ್ಕಾರಿ ಕಟ್ಟಡಗಳಿಂದ 300 ಕೋಟಿ ಸೇವಾ ಶುಲ್ಕ: ಸುಪ್ರೀಂ ಕೋರ್ಟ್‌ ಆದೇಶದಂತೆ ಪಾಲಿಕೆ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಂದ ಸೇವಾ ಶುಲ್ಕ ಸಂಗ್ರಹಿಸಲು ಸ್ಥಳೀಯ ಸಂಸ್ಥೆಗೆ ಅವಕಾಶವಿದೆ. ಅದರಂತೆ ಇದೇ ಮೊದಲ ಬಾರಿಗೆ ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ. ಶುಲ್ಕ ಸಂಗ್ರಹಿಸಿದ್ದು, ರಕ್ಷಣೆ, ರೈಲ್ವೆ, ಮೆಟ್ರೊ ಹೀಗೆ ಎಲ್ಲ ಸರ್ಕಾರಿ ಕಟ್ಟಡಗಳಿಗೆ ಆಸ್ತಿ ಘೋಸಿಸುವಂತೆ ತಿಳಿಸಲಾಗಿದೆ. ಸಮರ್ಪಕವಾಗಿ ಸೇವಾ ತೆರಿಗೆ ಸಂಗ್ರಹಿಸಿದರೆ 300 ಕೋಟಿ ಆದಾಯ ಸಂಗ್ರಹವಾಗಲಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. 

ರಸ್ತೆಗುಂಡಿಗಳಿಗೆ ಖರ್ಚಾಗಿದ್ದು 51 ಕೋಟಿ ರೂ. ಮಾತ್ರ: ರಸ್ತೆಗುಂಡಿ ದುರಸ್ತಿಗಾಗಿ ಹಳೆಯ ವಾರ್ಡ್‌ಗಳಿಗೆ 20 ಲಕ್ಷ ಹಾಗೂ ಹೊಸ ವಾರ್ಡ್‌ಗಳಿಗೆ 30 ಲಕ್ಷ ಮೀಸಲಿರಿಡಲಾಗಿದೆ. ಜತೆಗೆ 400 ಕಿ.ಮೀ. ರಸ್ತೆ ನಿರ್ವಹಣೆಗಾಗಿ ಪೈಥಾನ್‌ ಯಂತ್ರ ಬಳಕೆಯಾಗುತ್ತಿದೆ. ಕಳೆದ ವರ್ಷ ನಗರದಲ್ಲಿ ಸುರಿದ ಮಳೆಯಿಂದ ಸೃಷ್ಟಿಯಾದ ಗುಂಡಿಗಳನ್ನು ಮುಚ್ಚಲು ವಾರ್ಡ್‌ಗಳಿಗೆ ನೀಡಿದ ಅನುದಾನ ಸೇರಿ ಸುಮಾರು 51 ಕೋಟಿ ರೂ. ಮಾತ್ರ ಬಳಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. 

ಒಂಟಿ ಮನೆ ಅನುದಾನ ಎರಡು ಕಂತಿನಲ್ಲಿ ಬಿಡುಗಡೆ: ಪಾಲಿಕೆ ವ್ಯಾಪ್ತಿಯ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಒಂಟಿ ಮನೆ ನಿರ್ಮಾಣಕ್ಕಾಗಿ ನೀಡುವ ಅನುದಾನವನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಫ‌ಲಾನುಭವಿಗಳ ಗುರುತಿಸುವ ಹೊಣೆಯನ್ನು ವಾರ್ಡ್‌ ಸಮಿತಿಗಳಿಗೆ ನೀಡಿದ್ದು, ಅನುದಾನದ ಸಮರ್ಪಕ ಬಳಕೆ ಕುರಿತು ಎಂಜಿನಿಯರ್‌ಗಳು ಪರಿಶೀಲನೆ ನಡೆಸಬೇಕು.

ಕನ್ನಡ ಫ‌ಲಕಗಳು ಕಡ್ಡಾಯ: ಪಾಲಿಕೆಯಿಂದ ವಾಣಿಜ್ಯ ಪರವಾನಗಿ ಪಡೆಯುವ ವೇಳೆ ಕಡ್ಡಾಯವಾಗಿ ಕನ್ನಡದಲ್ಲಿರುವ ನಾಮಫ‌ಲಕಗಳನ್ನು ಅಳಡಿಸುವಂತೆ ನಿಯಮ ಹಾಕಲಾಗುವುದು. ಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡಕ್ಕೆ ಆದ್ಯತೆ ನೀಡಿ, ಉಳಿದಂತೆ ಅನ್ಯಭಾಷೆಯ ಹೆಸರುಗಳು ಇರುವಂತೆ ನೋಡಿಕೊಳ್ಳಬೇಕು.

ದೊಮ್ಮೆ ಪರವಾನಗಿ ಪಡೆದ ಒಂದು ತಿಂಗಳಲ್ಲಿ ಕನ್ನಡ ಫ‌ಲಕಗಳನ್ನು ಅಳವಡಿಸದಿದ್ದರೆ ಅಂತಹ ಮಳಿಗೆಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಅದಕ್ಕೆ ದನಿಗೂಡಿಸಿದ ಮೇಯರ್‌ ಸಂಪತ್‌ರಾಜ್‌, ಮೈಸೂರು ಬ್ಯಾಂಕ್‌ ವೃತ್ತದಲ್ಲಿ ವಿಜಯನಗರದ ಹೆಬ್ಟಾಗಿಲನ್ನು ನವೆಂಬರ್‌ ವೇಳೆಗೆ ನಿರ್ಮಿಸಲಾಗುವುದು.

ವಿತ್ತೀಯ ಶಿಸ್ತು ಕಾಪಾಡಲು ರಾಜ್ಯ ಸರ್ಕಾರ 2002ರಲ್ಲಿ ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯಿದೆ ಜಾರಿಗೊಳಿಸಿದ್ದು, ಅದನ್ನು ಪಾಲಿಕೆಯಲ್ಲಿಯೂ ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಶಿಸ್ತು ತರಲು ಪ್ರಯತ್ನಿಸಲಾಗುವುದು. 
-ಆರ್‌.ಸಂಪತ್‌ರಾಜ್‌, ಮೇಯರ್‌ 

ಬಿಬಿಎಂಪಿಯ ಆದಾಯ 3300 ರಿಂದ 3500 ಸಾವಿರ ಕೋಟಿ ರೂ. ಇರುವಾಗ 10 ಸಾವಿರ ಕೋಟಿಗೂ ಅಧಿಕ ಗಾತ್ರದ ಅವಾಸ್ತವಿಕ ಬಜೆಟ್‌ ಮಂಡಿಸಲಾಗಿದೆ. ನಾವು ಕೇಳಿದ ಪ್ರಶ್ನೆಗಳಿಗೆ ಆಯುಕ್ತರು ಸಮರ್ಪಕವಾಗಿ ಉತ್ತರ ನೀಡದೆ ಹಾರಿಕೆ ಉತ್ತರಗಳನ್ನು ನೀಡಿದ್ದಾರೆ.
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next