ಬೆಂಗಳೂರು: ಬಿಬಿಎಂಪಿಯಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗುತ್ತದೆ. ಆದರೆ ಬಜೆಟ್‌ನ ಅರ್ಧದಷ್ಟು ಅಂಶಗಳೂ ಅನುಷ್ಠಾನವಾಗದಿರುವುದು ಕಳೆದ ಆರು ವರ್ಷಗಳ ಅಂಕಿ-ಅಂಶಗಳಿಂದ ಸಾಬೀತಾಗಿದೆ. ಪಾಲಿಕೆಯ ಬಜೆಟ್ ಗಾತ್ರ ಹಿಗ್ಗುತ್ತಿದ್ದರೂ ಅನುಷ್ಠಾನ ಮಾತ್ರ ಇಳಿಮುಖವಾಗುತ್ತಿರುವ, ಇಲ್ಲವೇ ಸ್ಥಿರವಾಗಿರುವುದು ಸ್ಪಷ್ಟವಾಗಿದೆ.
2011-12ನೇ ಸಾಲಿನಲ್ಲಿ ಶೇ.37ರಷ್ಟಿದ್ದ ಬಜೆಟ್ ಅನುಷ್ಠಾನ ಪ್ರಮಾಣ, ಪ್ರಸಕ್ತ ಸಾಲಿನಲ್ಲಿ (ಮಾರ್ಚ್ 31ಕ್ಕೆ 2016-17ನೇ ಹಣಕಾಸು ವರ್ಷದ ಅವಧಿ ಮುಗಿಯಲಿದೆ) ಶೇ.60ಕ್ಕೆ ಏರಿಕೆಯಾಗಿದೆ ಎಂದು ಪಾಲಿಕೆ ಸಮರ್ಥಿಸಿಕೊಳ್ಳುತ್ತದೆ. ಆದರೆ ಆಡಳಿತಾಧಿಕಾರಿಗಳ ಅವಧಿ ಇದ್ದ ಆರು ತಿಂಗಳಲ್ಲಷ್ಟೇ ಬಜೆಟ್ ಅಂಶಗಳ ಅನುಷ್ಠಾನ ಪ್ರಮಾಣ ಶೇ.87.36ರಷ್ಟಿದೆ. ನಂತರದ ಅನುಷ್ಠಾನ ಪ್ರಮಾಣ ಶೇ.60ಕ್ಕೆ ಕುಸಿದಿದೆ.
ಆನ್‌ಲೈನ್ ಸಾಫಲ್ಯ: 2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿರುವ ಕಲ್ಯಾಣ ಕಾರ್ಯಕ್ರಮ ಸೇರಿದಂತೆ ಹಲವು ಯೋಜನೆಗಳು ಘೋಷಣೆಗಷ್ಟೇ ಸೀಮಿತವಾಗಿದ್ದವು. ಆದರೆ, ಪೌರಕಾರ್ಮಿಕರಿಗೆ ಬಿಸಿಯೂಟ, ರಸ್ತೆ ಅಗೆತಕ್ಕೆ ಆನ್‌ಲೈನ್ ಮೂಲಕ ಅನುಮತಿ, ಜಿಐಎಸ್ ಆಧಾರಿತ ಆಸ್ತಿ ಪತ್ತೆ, ಆನ್‌ಲೈನ್ ಮೂಲಕ ಜಾಹೀರಾತು ತೆರಿಗೆ ಪಾವತಿ ಮತ್ತು ಅನುಮತಿ ನೀಡುವುದು, ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಯಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಬಿಬಿಎಂಪಿ ಸಫಲವಾಗಿರುವುದರಿಂದ ಅನುಷ್ಠಾನ ಪ್ರಮಾಣ ಹೆಚ್ಚಾಗಿದೆ.
ಹದಗೆಟ್ಟ ಆರ್ಥಿಕ ಪರಿಸ್ಥಿತಿ: ಪಾಲಿಕೆಯ ವಿವಿಧ ಮೂಲಗಳಿಂದ ನಿರೀಕ್ಷಿತ ಪ್ರಮಾಣದ ಆದಾಯ ಸಂಗ್ರಹವಾಗಿಲ್ಲ. ಜತೆಗೆ ಸರ್ಕಾರದಿಂದ ನಿರೀಕ್ಷಿಸಿದಷ್ಟು ಅನುದಾನವೂ ಬಿಡುಗಡೆಯಾಗಿಲ್ಲ. ಅಲ್ಲದೆ ಗುತ್ತಿಗೆದಾರರಿಗೆ 1,200 ಕೋಟಿ ರೂ. ಬಾಕಿ ಪಾವತಿಸಬೇಕಿದ್ದು, ಹಲವಾರು ವರ್ಷಗಳಿಂದ ಕುಟುಂತ್ತಲೇ ಸಾಗಿರುವ ಕಾಮಗಾರಿಗಳ ಮೊತ್ತ 12 ಸಾವಿರ ಕೋಟಿ ರೂ. ಮೀರಿರುವುದು ಪಾಲಿಕೆಯ ಆರ್ಥಿಕ ಸ್ಥಿತಿ ದುರ್ಬಲಗೊಳ್ಳುವಂತೆ ಮಾಡಿದೆ.
* ವೆಂ. ಸುನೀಲ್ ಕುಮಾರ್