ನವದೆಹಲಿ:ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಪಾರ್ಥ ಚಟರ್ಜಿ ಅಕ್ರಮಗಳು ಒಂದೊಂದಾಗಿ ಬಯಲಿಗೆ ಬರುತ್ತಿರುವುದಾಗಿ ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕಾಲೇಜಿನಿಂದ ತೆರಳಿದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ; ಆತಂಕದಲ್ಲಿ ಪೋಷಕರು
ಪಶ್ಚಿಮಬಂಗಾಳದ ಡೈಮಂಡ್ ನಗರದಲ್ಲಿ ಪಾರ್ಥ ಚಟರ್ಜಿಯ ಮೂರು ಐಶಾರಾಮಿ ಫ್ಲ್ಯಾಟ್ ಇದ್ದು, ಶ್ವಾನ ಪ್ರೇಮಿ ಎಂದೇ ಖ್ಯಾತಿ ಪಡೆದಿದ್ದ ಪಾರ್ಥ ಸಾರಥಿಯ ಸಂಪೂರ್ಣ ಹವಾನಿಯಂತ್ರಿತ ಮೂರು ಫ್ಲ್ಯಾಟ್ ಗಳಲ್ಲಿ ಒಂದು ಕೇವಲ ನಾಯಿಗಳಿಗೆ ಮೀಸಲಿಟ್ಟಿರುವುದಾಗಿ ವರದಿ ತಿಳಿಸಿದೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಪಶ್ಚಿಮಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಾರ್ಥ ಚಟರ್ಜಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದಲ್ಲಿ 21 ಕೋಟಿ ರೂಪಾಯಿ ನಗದು ಹಾಗೂ ಒಂದು ಕೋಟಿ ರೂ.ಗಿಂತ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಂಡ ನಂತರ ಪಾರ್ಥ ಚಟರ್ಜಿಯನ್ನು ಬಂಧಿಸಲಾಗಿತ್ತು.
69 ವರ್ಷದ ಪಾರ್ಥ ಚಟರ್ಜಿ ಹಲವಾರು ಫ್ಲ್ಯಾಟ್ ಗಳನ್ನು ಹೊಂದಿದ್ದು, ಇದರಲ್ಲಿ ನಟಿ ಅರ್ಪಿತಾ ಮುಖರ್ಜಿಗೆ ಉಡುಗೊರೆಯಾಗಿ ನೀಡಿದ್ದ ಒಂದು ಫ್ಲ್ಯಾಟ್ ಕೂಡಾ ಸೇರಿದೆ. ಅರ್ಪಿತಾ ವಾಸವಾಗಿದ್ದ ಫ್ಲ್ಯಾಟ್ ನಲ್ಲಿಯೇ ಇ.ಡಿ ಅಧಿಕಾರಿಗಳು ಕೋಟ್ಯಂತರ ರೂ. ನಗದು ವಶಪಡಿಸಿಕೊಂಡಿದ್ದರು.