ಪಣಜಿ : ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ತಾವು ಚಿಕಿತ್ಸೆ ಪಡೆಯುತ್ತಿರುವ ದಿಲ್ಲಿಯಲ್ಲಿನ ಏಮ್ಸ್ ಆಸ್ಪತ್ರೆಯಿಂದಲೇ ಸರಕಾರಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ ಎಂದು ಅವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಸುದಿನ್ ಧಳವೀಕರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಪರೀಕರ್ ಅವರು ತಮ್ಮ ಅನಾರೋಗ್ಯದ ನಡುವೆಯೇ ತಮಗೆ ಕಳುಹಿಸಲಾಗುವ ಯಾವುದೇ ಕಡತಗಳನ್ನು 2-3 ದಿನಗಳ ಒಳಗೆ ವಿಲೇವಾರಿ ಮಾಡುತ್ತಿದ್ದಾರೆ ಎಂದು ಸಚಿವ ಧಳವೀಕರ್ ತಿಳಿಸಿದರು.
ಗೋವೆಯ ನೀರು ಪೂರೈಕೆ ಮತ್ತು ಶೌಚ ವ್ಯವಸ್ಥೆ ಕುರಿತಾಗಿ ಪೋರ್ತುಗೀಸ್ ಸರಕಾರದೊಂದಿಗಿನ ತಿಳಿವಳಿಕೆ ಒಪ್ಪಂದಕ್ಕೆ ಹಾಕುವ ಸಹಿ ಹಾಕುವ ಕಾರ್ಯಕ್ರಮವೊಂದರ ಪಾರ್ಶ್ವದಲ್ಲಿ ಸುದ್ದಿ ಗಾರರರೊಂದಿಗೆ ಮಾತನಾಡುತ್ತಾ ದಳವೀಕರ್ ಈ ವಿಷಯ ತಿಳಿಸಿದರು.
ಸಿಎಂ ಪರೀಕರ್ ಅವರ ಸೂಚನೆಯ ಪ್ರಕಾರ ಪ್ರತೀ ಬುಧವಾರ ರಾಜ್ಯ ಸಚಿವ ಸಂಪುಟವು ಪರಿಶೀಲನಾ ಸಭೆಯನ್ನು ನಡೆಸುತ್ತಿದೆ ಮತ್ತು ಆ ಸಭೆಯ ವರದಿಯನ್ನು ಸಿಎಂ ಮುಂದೆ ಇಡಲಾಗುತ್ತಿದೆ ದಳವೀಕರ್ ಹೇಳಿದರು.
ಪರೀಕರ್ ಸಂಪುಟದ ಎಲ್ಲ ಸಚಿವರು ತಮ್ಮ ತಮ್ಮ ಕಾರ್ಯಭಾರವನ್ನು ಸಮರ್ಪಕವಾಗಿ ನಿಭಾಯಿಸುವಷ್ಟು ಸಮರ್ಥರಿದ್ದಾರೆ. ಸಿಎಂ ನೇತೃತ್ವದಲ್ಲಿ ಸರಕಾರದ ಎಲ್ಲ ಕೆಲಸಗಳು ಸಾಂಗವಾಗಿ ನಡೆಯುತ್ತಿವೆ ಎಂದು ಸಚಿವ ದಳವೀಕರ್ ಹೇಳಿದರು.
62ರ ಹರೆಯದ ಪರ್ರೀಕರ್ ಅವರು ಕಳೆದ ಸೆಪ್ಟಂಬರ್ 15ರಿಂದ ದಿಲ್ಲಿಯ ಏಮ್ಸ್‌ನಲ್ಲಿ ಮೇಧೋಜ್ಜೀರಕ ಗ್ರಂಥಿಯ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಮೊದಲು ಅವರು ಅಮೆರಿಕಕ್ಕೂ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಅಸ್ವಸ್ಥ ಸಿಎಂ ಪರೀಕರ್ ಅವರ ಸುದೀರ್ಘ ಅನುಪಸ್ಥಿತಿಯಲ್ಲಿ ರಾಜ್ಯದಲ್ಲಿ ಆಡಳಿತೆ ಕುಸಿದು ಬಿದ್ದಿದೆ ಎಂದು ಈಚೆಗೆ ಹುಯಿಲೆಬ್ಬಿಸಿದ್ದ ಕಾಂಗ್ರೆಸ್, ರಾಜ್ಯದಲ್ಲಿ ತನಗೆ ಸರಕಾರ ರಚಿಸಲು ಅವಕಾಶ ನೀಡಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಂಡಿಸಿತ್ತು.