Advertisement

ಅವಿಶ್ವಾಸ ಗೊತ್ತುವಳಿ; ಸಂಸತ್‌ಗದ್ದಲ

06:00 AM Mar 20, 2018 | Team Udayavani |

ಹೊಸದಿಲ್ಲಿ: ವಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಮಂಗಳವಾರಕ್ಕೆ ಮುಂದೂಡಲ್ಪಟ್ಟಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಮಂಗಳವಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಎನ್‌ಡಿಎ ತೊರೆದಿರುವ ಟಿಡಿಪಿ ಮತ್ತು ವೈ.ಎಸ್‌.ಆರ್‌. ಕಾಂಗ್ರೆಸ್‌ ಪಕ್ಷ ಕಳೆದ ಶುಕ್ರವಾರ ಪ್ರತ್ಯೇಕವಾಗಿ ನೋಟಿಸ್‌ ನೀಡಿದ್ದವು.

Advertisement

ಸೋಮವಾರ ಹನ್ನೊಂದನೇ ದಿನವಾಗಿದ್ದರೂ ಯಾವುದೇ ಕಲಾಪ ನಡೆಸಲು ಸಾಧ್ಯವೇ ಆಗಲಿಲ್ಲ. ಲೋಕ ಸಭೆಯಲ್ಲಿ ಕಲಾಪ ಆರಂಭ ಆಗುತ್ತಿದ್ದಂತೆ ಎಐಎಡಿಎಂಕೆ, ಟಿಆರ್‌ಎಸ್‌ ತಮಿಳುನಾಡು, ತೆಲಂಗಾಣಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಗದ್ದಲವೆಬ್ಬಿಸಲಾರಂಭಿಸಿದವು. ಗದ್ದಲದ ನಡುವೆಯೇ ಮಾತನಾಡಿದ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ “ಸದನ ಸರಿಯಾಗಿ ಇಲ್ಲದೇ ಇರುವುದರಿಂದ ಅದನ್ನು (ಅವಿಶ್ವಾಸ ಗೊತ್ತುವಳಿ) ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ಕ್ಷಮಿಸಿ’ ಎಂದರು. ಇದರ ನಡುವೆಯೇ ಮಧ್ಯಾಹ್ನ 12 ಗಂಟೆಯ ವರೆಗೆ ಸ್ಪೀಕರ್‌ ಕಲಾಪ ಮುಂದೂಡಿದರು. ಮತ್ತೆ ಸದನ ದಲ್ಲಿ ಅದೇ ಪರಿಸ್ಥಿತಿ ಮುಂದುವರಿದ ಕಾರಣ, ಬೇರೆ ದಾರಿ ಕಾಣದ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ರಾಜ್ಯಸಭೆಯಲ್ಲೂ ಗದ್ದಲ: ರಾಜ್ಯಸಭೆ ಯಲ್ಲಿ ಕಲಾಪ ಆರಂಭವಾಗುತ್ತಿ ದ್ದಂತೆಯೇ ವಿಪಕ್ಷಗಳು ಸಭಾಪತಿ ಎಂ. ವೆಂಕಯ್ಯ ನಾಯ್ಡು ಪೀಠದ ಮುಂಭಾಗಕ್ಕೆ ಬಂದು ಕೋಲಾಹಲ ಎಬ್ಬಿಸಿದವು. ಆಂಧ್ರಪ್ರದೇಶದಿಂದ ಟಿಡಿಪಿ, ವೈ.ಎಸ್‌.ಆರ್‌. ಕಾಂಗ್ರೆಸ್‌ ಪಾರ್ಟಿ ವಿಶೇಷ ಸ್ಥಾನಮಾನ ಮತ್ತು ತಮಿಳುನಾಡಿನಿಂದ ಎಐಎಡಿಎಂಕೆ ಕಾವೇರಿ ಜಲ ನಿರ್ವಹಣ ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಲಾರಂಭಿಸಿದರು. ಮೊದಲ ಹತ್ತು ನಿಮಿಷಗಳ ಕಾಲ ಸಭಾಪತಿ ವೆಂಕಯ್ಯ ನಾಯ್ಡು ಶಾಂತರಾಗಿ ಕಲಾಪಕ್ಕೆ ಅನುವು ಮಾಡಿ ಕೊಡ ಬೇಕು ಎಂದು ಒತ್ತಾಯಿಸಿದರೂ ಪ್ರಯೋಜನವಾಗದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ಶಿವಸೇನೆ ಗೈರು: ಮೋದಿ ಸರಕಾರ ವನ್ನು ಟೀಕಿಸುವ ಶಿವಸೇನೆ ಮತದಾನ ನಡೆಯುವ ಅಗತ್ಯ ಬಂದರೆ ಗೈರು ಹಾಜರಾಗಲು ನಿರ್ಧರಿಸಿದೆ. ಅಕಾಲಿ ದಳ ಮತ್ತು ಜೆಡಿಯು ಸರಕಾರದ ಪರ ನಿಲ್ಲಲು ಮುಂದಾಗಿವೆ. ಟಿಡಿಪಿ, ವೈ.ಎಸ್‌.ಆರ್‌. ಕಾಂಗ್ರೆಸ್‌ ಪಕ್ಷಗಳು ಮಂಡಿಸಿರುವ ಗೊತ್ತುವಳಿಗೆ ಎಸ್‌ಪಿ, ಟಿಎಂಸಿ, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ.

ಕೆಸಿಆರ್‌- ದೀದಿ ಭೇಟಿ
2019ನೇ ಚುನಾವಣೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತಾದ ರಾಜಕೀಯ ರಂಗ ರಚನೆ ಮಾಡುವ ನಿಟ್ಟಿನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೋಲ್ಕತಾದಲ್ಲಿ ಭೇಟಿಯಾಗಿದ್ದಾರೆ. ಒಂದು ಗಂಟೆ ಮಾತುಕತೆ ನಡೆಸಿದ ಬಳಿಕ ಇಬ್ಬರು ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿದರು. “ದೇಶಕ್ಕೆ ಒಳ್ಳೆಯದು ಬೇಕು. ಬಿಜೆಪಿ ಸೋತು ಕಾಂಗ್ರೆಸ್‌ ಗೆದ್ದರೆ ಏನಾದರೂ ಪವಾಡ ನಡೆದೀತೇ? ಇತರ ಸಮಾನ ಮನಸ್ಕ ಪಕ್ಷಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಚಂದ್ರಶೇಖರ ರಾವ್‌ ಹೇಳಿದ್ದಾರೆ. “ಮಾತುಕತೆ ಉತ್ತಮ ಬೆಳವಣಿಗೆ’ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೈತ್ರಿಕೂಟಕ್ಕೆ ಸೇರಲು ಟಿಆರ್‌ಎಸ್‌ ನಾಯಕ ಚಂದ್ರಶೇಖರ ರಾವ್‌ ಎಸ್‌ಪಿ, ಡಿಎಂಕೆ, ಶಿವಸೇನೆ ಜತೆಗೆ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next