ನವದೆಹಲಿ: “ಸಂಸತ್‌ನ ಭದ್ರತೆಗೆ ಆಪತ್ತು ತಂದವರ ಮಾಹಿತಿಗಳು ಒಂದೊಂದೇ ಬಹಿರಂಗವಾಗುತ್ತಿದೆ. ದಾಳಿಯಲ್ಲಿ ಪಾಲ್ಗೊಂಡವರ ಡಿಎನ್‌ಎ “ಕಾಂಗ್ರೆಸ್-ಕಮ್ಯುನಿಸ್ಟ್’ ಸಿದ್ಧಾಂತದೊಂದಿಗೆ ಬೇರ್ಪಡಿಸಲಾದ ಸಂಬಂಧ ಹೊಂದಿವೆ ಎಂಬುದು ಸ್ಪಷ್ಟವಾಗಿದೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ಲೋಪಕ್ಕೆ ಸಂಬಂಧಸಿದಂತೆ ಕಲಾಪದಲ್ಲಿ ಚರ್ಚೆಯಾಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
“ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಭಾಗವಾದವರು ಹಾಗೂ ಈ ಹಿಂದಿನ ಸಂಘಟಿತ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದವರು….’ ಎಂದು ಟ್ವೀಟ್(ಎಕ್ಸ್) ಮೂಲಕ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
“ಕೇವಲ ಈಗ ಮಾತ್ರವಲ್ಲ. ಹಿಂದಿನ ಕಲಾಪದ ಸಮಯದಲ್ಲೂ ಶೂನ್ಯ ವೇಳೆ ಹಾಗೂ ಪ್ರಶ್ನಾವಧಿ ವೇಳೆಯಲ್ಲೂ ಪ್ರತಿಪಕ್ಷಗಳು ಸುಗಮವಾಗಿ ಕಲಾಪ ನಡೆಯಲು ಬಿಡಲಿಲ್ಲ. ಇದು ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವನ್ನು ದುರ್ಬಲಗೊಳಿಸುತ್ತಿದೆ’ ಎಂದು ಬಿಜೆಪಿ ಸಂಸದ ರಾಕೇಶ್ ಸಿನ್ಹಾ ದೂರಿದ್ದಾರೆ.