Advertisement

ಉಜಿರೆ: ಪಾರ್ಕಿಂಗ್‌ ಕಿರಿಕಿರಿ ಮುಗಿಯದ ಗೋಳು

02:40 AM Jun 13, 2018 | Karthik A |

ಬೆಳ್ತಂಗಡಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶಿಕ್ಷಣ ನಗರಿ ಉಜಿರೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಕಾರಣದಿಂದ ವಾಹನ ಪಾರ್ಕಿಂಗ್‌ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಶಿರಾಡಿ ಘಾಟಿ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಉಜಿರೆ ದಿನದ 24 ಗಂಟೆಗಳೂ ಕಾರ್ಯಪ್ರವೃತ್ತವಾಗಿದೆ. ರಾತ್ರಿ ವೇಳೆಯೂ ಅನೇಕ ಬಸ್‌ ಗಳು ಈ ಮಾರ್ಗವನ್ನು ಅವಲಂಬಿಸಿರುವ ಕಾರಣ ರಾತ್ರಿಯೂ ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿದೆ.

Advertisement

ಅಲ್ಲಲ್ಲಿ ಬಸ್‌ ನಿಲುಗಡೆ
ಉಜಿರೆ ಪೇಟೆಯಲ್ಲಿ ಎಷ್ಟು ಕಡೆ ಬಸ್‌ ನಿಲುಗಡೆ ಇದೆ ಎಂದು ಹೇಳುವುದೇ ಕಷ್ಟ. ಯಾವ ಬಸ್‌ ನ ನಿಲುಗಡೆ ಎಲ್ಲಿ ಎಂದೇ ತಿಳಿಯುವುದಿಲ್ಲ. ರಾತ್ರಿ ಸಂಚಾರದ ಬಸ್‌ ಗಳು ಕೆಲವು ಮುಖ್ಯವೃತ್ತದ ಬಳಿಯ ಹೊಟೇಲ್‌ ಮುಂಭಾಗದಲ್ಲಿ ನಿಲ್ಲುತ್ತದೆ. ಇನ್ನು ಕೆಲವು ಕಾಲೇಜು ರಸ್ತೆಯಲ್ಲಿನ ಸ್ಟಾಂಡ್‌ ನ‌ಲ್ಲಿ ನಿಲ್ಲುತ್ತದೆ. ಉಜಿರೆಗೆ ಯಾವುದಾದರೂ ಒಂದೇ ಕಡೆ ಬಸ್‌ ನಿಲುಗಡೆ ಇರುವುದು ಒಳಿತು. ಬೆಳಗ್ಗಿನ ಜಾವ ಬೆಂಗಳೂರಿನಿಂದ ಬರುವ ಬಸ್‌ ಗಳು ಕೆಲವು ಕಾಲೇಜು ರಸ್ತೆಯ ಬಸ್‌ಸ್ಟಾಂಡ್‌ ನ‌ಲ್ಲಿ ನಿಂತರೆ, ಇನ್ನು ಕೆಲವು ಟಿ.ಸಿ. ಸ್ಟಾಂಡ್‌ ಬಳಿ ನಿಲ್ಲುತ್ತವೆ.

ತಂಗುದಾಣ ಬೇಕು
ಚಾರ್ಮಾಡಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೂಕ್ತ ಬಸ್‌ ತಂಗುದಾಣದ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಮಳೆಗಾಲದ ಸಂದರ್ಭ ಅಂಗಡಿ ಬಾಗಿಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗುತ್ತಿದೆ.

ಗ್ರಾಹಕರಿಗೆ ಕಷ್ಟ
ವ್ಯಾಪಾರ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ಸಮರ್ಪಕ ವಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ. ಸರಿಯಾಗಿ ಸರತಿ ಸಾಲಿನಲ್ಲಿ ವಾಹನಗಳನ್ನು ಸ್ವಲ್ಪ ಅಂತರ ಬಿಟ್ಟು ನಿಲ್ಲಿಸಿದರೆ ಗ್ರಾಹಕರಿಗೂ ವ್ಯಾಪಾರಿಗಳಿಗೂ ಅನುಕೂಲವಾಗಲಿದೆ.

ಚಕ್ರವ್ಯೂಹಕ್ಕೆ ಹೊಕ್ಕಂತೆ
ಉಜಿರೆ ಪೇಟೆಯಲ್ಲಿ ವಾಹನ ಪಾರ್ಕ್‌ ಮಾಡುವು ದೆಂದರೆ ಚಕ್ರವ್ಯೂಹದ ಒಳಗೆ ಹೊಕ್ಕಂತೆ ಭಾಸವಾಗುತ್ತದೆ. ಪೇಟೆಯಲ್ಲಿ ಎಲ್ಲಿ ನೋಡಿದರೂ ಬಾಡಿಗೆ ವಾಹನಗಳ ಪಾರ್ಕಿಂಗ್‌ ವಲಯವಿರುವುದರಿಂದ ಜನರು ಸ್ವಂತ ವಾಹನಗಳನ್ನು ಪಾರ್ಕ್‌ ಮಾಡುವುದೇ ಕಷ್ಟಕರವಾಗಿದೆ. ಕೆಲವು ಕಡೆಗಳಲ್ಲಿ ಫುಟ್‌ ಪಾತ್‌ ಗಳಲ್ಲಿಯೇ ಅಂಗಡಿಗಳಿದ್ದು, ಪಾದಚಾರಿಗಳು ನಡೆದಾಡಲು ಕಷ್ಟವಾಗಿದೆ. ಈ ಅತಿಕ್ರಮಣಗಳನ್ನು ಸ್ಥಳೀಯ ಗ್ರಾಮ ಪಂಚಾಯತ್‌ ತೆರವುಗೊಳಿಸಿದಲ್ಲಿ ಸಮಸ್ಯೆಯನ್ನು ಬಗೆ ಹರಿಸಬಹುದಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

Advertisement

ಗೋಳು ಕೇಳೋರು ಯಾರು?
ಉಜಿರೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ಹೇಳತೀರದು. ಎಲ್ಲಿಯೂ ಪಾರ್ಕಿಂಗ್‌, ನೋ ಪಾರ್ಕಿಂಗ್‌ ಫಲಕಗಳಿಲ್ಲ. ಕಾರು ತಗೊಂಡು ತರಕಾರಿ ತಂದವ ನಿಜವಾದ ಹೀರೋ ಇಲ್ಲಿ. ರಿಕ್ಷಾಗಳು ಮತ್ತು ಜೀಪುಗಳು, ರಸ್ತೆ ಬದಿಯ ವ್ಯಾಪಾರ ಇಡೀ ಪೇಟೆಯ ರಸ್ತೆಯ ಇಕ್ಕೆಲ ಆವರಿಸಿದೆ. ಸುಮಾರು 1.5 ಕಿ.ಮೀ. ಉದ್ದದ ಪೇಟೆ ಇದಾದರೂ 3 ಕಡೆ ಬಸ್‌ ನಿಲ್ಲುತ್ತದೆ. ಎಲ್ಲಿಯೂ ವಾಹನ ನಿಲುಗಡೆಗೆ ಅವಕಾಶವಿಲ್ಲ. ಇತ್ತೀಚೆಗೆ ಬಂದ ಟ್ರಾಫಿಕ್‌ ಪೊಲೀಸ್‌ ಏನೂ ಫಲಕಾರಿ ಆದಂತೆ ಕಾಣುತ್ತಿಲ್ಲ. ಹೇಗೋ ಜಾಗ ಸಿಕ್ಕಿತಲ್ಲ ಎಂದು ವಾಹನ ನಿಲ್ಲಿಸಿದರೆ ಸೂಚನಾ ಫಲಕ ಇಲ್ಲದಿದ್ದರೂ ದಂಡ ಚೀಟಿ ಬರೆಯುತ್ತಾರೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವ ಕಾರಣ ವಿದ್ಯಾರ್ಥಿಗಳು  ಬಸ್‌ ತಂಗುದಾಣದ ಬಳಿಗೆ ರಸ್ತೆಯಲ್ಲೇ ನಡೆದುಕೊಂಡು ಬರಬೇಕಾಗಿದೆ. ಸರಿಯಾದ ಪಾರ್ಕಿಂಗ್‌, ಫುಟ್‌ ಪಾತ್‌ ಮತ್ತು ಸೂಚನಾ ಫಲಕಗಳು ಅತಿ ಅಗತ್ಯವಾಗಿ ಬೇಕಾಗಿದೆ. ರಸ್ತೆಯ ಬದಿಯ ಬಾಡಿಗೆ ವಾಹನ ನಿಲುಗಡೆಯ ವ್ಯವಸ್ಥೆ ಕೂಡಾ ಕ್ರಮಬದ್ಧಗೊಳಿಸಬೇಕಾಗಿದೆ.
– ಸತ್ಯನಾರಾಯಣ ಭಟ್‌ ಗುರಿಪಳ್ಳ, ಸಹ ಪ್ರಾಧ್ಯಾಪಕರು, SDMIT ಉಜಿರೆ

ಶೀಘ್ರವೇ ನಾಮಫಲಕ
ಉಜಿರೆಯಲ್ಲಿ ಪಾರ್ಕಿಂಗ್‌ ಗೆ ಸೂಕ್ತ ಸ್ಥಳದ ಕೊರತೆಯಿದೆ. ಆದರೂ ಇದ್ದ ಸ್ಥಳದಲ್ಲೇ ವ್ಯವಸ್ಥಿತವಾಗಿ ಪಾರ್ಕಿಂಗ್‌ ಕಲ್ಪಿಸಲು ಈಗಾಗಲೇ ಗ್ರಾ.ಪಂ.ನಲ್ಲಿ ಸಭೆ ನಡೆದಿದೆ. ಬೇರೆ ಬೇರೆ ಊರಿಗೆ ಹೋಗುವ ವಾಹನಗಳಿಗೆ, ಖಾಸಗಿ ಚತುಷcಕ್ರ, ದ್ವಿಚಕ್ರ ವಾಹನಗಳಿಗೆ ನಿರ್ದಿಷ್ಟ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಲು ನಾಮಫಲಕ ಬರೆಸಲಾಗಿದ್ದು, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಫಲಕಗಳನ್ನು ಅಳವಡಿಸಲು ತಡವಾಗಿದೆ. ನೀತಿ ಸಂಹಿತೆ ಜೂ. 15ಕ್ಕೆ ಕೊನೆಗೊಳ್ಳಲಿದ್ದು, ಸಂಬಂಧಪಟ್ಟ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಸಂಚಾರ ಪೊಲೀಸ್‌ ಇಲಾಖೆಗಳ ಸಹಕಾರದೊಂದಿಗೆ ಫಲಕಗಳನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ, ವರ್ತಕರ, ವಾಹನ ಚಾಲಕರ ಸಹಕಾರ ಅತ್ಯವಶ್ಯಕವಾಗಿದೆ.
– ಗಾಯತ್ರಿ ಪಿ. ಪಿಡಿಒ, ಉಜಿರೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next