ಭಟ್ಕಳ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಿ ಹೋಗುತ್ತಿರುವುದರಿಂದ ಇತರೆ ಜನರಿಗೆ ತೊಂದರೆಯಾಗುತ್ತಿದ್ದು, ಇದನ್ನು ಮನಗಂಡ ರೈಲ್ವೆ ಪೊಲೀಸರು ಶಿಸ್ತುಬದ್ಧ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ.
ಮುಟ್ಟಳ್ಳಿಯಲ್ಲಿರುವ ರೈಲ್ವೆ ನಿಲ್ದಾಣದ ಎದುರು ಶಿಸ್ತಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ರೈಲ್ವೆ ಪೊಲೀಸರು ಜಾರಿಗೆ ತಂದಿದ್ದು, ಇನ್ನು ಮುಂದೆ ವಾಹನ ಸವಾರರು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ವಾಹನಕ್ಕೆ ಸರಪಳಿಯಲ್ಲಿ ಕಟ್ಟಿಹಾಕಲಾಗುತ್ತದೆ. ಇದನ್ನು ಬಿಡಿಸಿಕೊಂಡು ಹೋಗಬೇಕಿದ್ದರೆ ದಂಡ ಕಟ್ಟುವುದು ಅನಿವಾರ್ಯವಾಗಲಿದೆ.
ರೈಲ್ವೆ ನಿಲ್ದಾಣದ ಎದುರು ಪಾರ್ಕಿಂಗ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಇದ್ದರೂ ಕೆಲವರು ರೈಲ್ವೆ ನಿಲ್ದಾಣಕ್ಕೆ ಒಳಹೋಗುವ ದ್ವಾರದ ಆಸುಪಾಸಿನಲ್ಲೇ ವಾಹನ ಪಾರ್ಕಿಂಗ್ ಮಾಡುತ್ತಿದ್ದರು. ಇದರಿಂದ ರೈಲ್ವೆ ನಿಲ್ದಾಣಕ್ಕೆ ಬರುವ-ಹೋಗುವ ಪ್ರಯಾಣಿಕರಿಗೆ, ಆಟೋ ರಿಕ್ಷಾದಲ್ಲಿ ಬರುವವವರಿಗೆ ತೊಂದರೆಯಾಗುತ್ತಿತ್ತು. ಹಲವು ಬಾರಿ ಸವಾರರಿಗೆ ಇಲ್ಲಿ ವಾಹನ ನಿಲ್ಲಿಸಬೇಡಿ ಎಂದು ಸೂಚಿಸಿದ್ದರೂ, ಫಲಕ ಹಾಕಿದ್ದರೂ ಪ್ರಯೋಜನವಾಗದೆ ಯಥಾಸ್ಥಿತಿ ಮುಂದುವರಿದಿತ್ತು.
ರೈಲ್ವೆ ನಿಲ್ದಾಣದ ಹೊರಗೆ ಎರಡು ಕಡೆ ಪಾರ್ಕಿಂಗ್ ಗೋಸ್ಕರವೇ ಶೆಡ್ ನಿರ್ಮಿಸಿದ್ದರೂ ಕೆಲವರು ಅಲ್ಲಿ ವಾಹನ ನಿಲ್ಲಿಸದೇ ನಿಲ್ದಾಣದ ಎದುರಿಗೆ ನಿಲ್ಲಿಸುತ್ತಿರುವುದು ಹಾಗೂ ಇದರಿಂದ ಕಿರಿಕಿರಿ ಆಗುತ್ತಿರುವ ಕುರಿತು ರೈಲ್ವೆ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ರೈಲ್ವೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ರೈಲ್ವೆ ನಿಲ್ದಾಣದೊಳಗೆ ಹೋಗುವ ದ್ವಾರದ ಆಸುಪಾಸಿನಲ್ಲಿ ವಾಹನ ಪಾರ್ಕಿಂಗ್ ಮಾಡಿದಲ್ಲಿ ದಂಡ ಸಹಿತ ವಾಹನಕ್ಕೆ ಸರಪಳಿ ಹಾಕಿ ಲಾಕ್ ಮಾಡಲಾಗುತ್ತಿದೆ. ದ್ವಾರದ ಆಸುಪಾಸಿನಲ್ಲಿ ಪಾರ್ಕಿಂಗ್ ಮಾಡಿದವರಿಂದ ಹೇಳಿಕೆ ಪಡೆದು ವಾಹನ ಬಿಡುವ ವ್ಯವಸ್ಥೆಯನ್ನೂ ರೂಪಿಸಿರುವುದು ರೈಲ್ವೆ ನಿಲ್ದಾಣದಲ್ಲಿ ಶಿಸ್ತುಬದ್ಧ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ ನೀಡಿದಂತಾಗಿದೆ. ರೈಲ್ವೆ ಪೊಲೀಸರ ಕ್ರಮದಿಂದ ವಾಹನ ಸವಾರರು ನಿಗದಿತ ಸ್ಥಳದಲ್ಲಿ ತಮ್ಮ ವಾಹನ ಪಾರ್ಕಿಂಗ್ ಮಾಡಿ ಬರುವಂತಾಗಿದೆ. ರೈಲ್ವೆ ಪೊಲೀಸರು ಪಾರ್ಕಿಂಗ್ ವ್ಯವಸ್ಥೆಯಲ್ಲಿ ಇದೇ ಶಿಸ್ತನ್ನು ನಿರಂತರವಾಗಿರುವಂತೆ ಗಮನಹರಿಸಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.