Advertisement

ಪರ್ಕಳ: ಕೆಸರುಮಯ ರಸ್ತೆ ದುರಸ್ತಿ ಕಾರ್ಯ ಆರಂಭ

12:04 AM Jun 03, 2020 | Sriram |

ಉಡುಪಿ: ಮಣಿಪಾಲ-ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಪರ್ಕಳದ ಪೇಟೆಯ ಕೆನರಾ (ಸಿಂಡಿಕೇಟ್‌) ಬ್ಯಾಂಕ್‌ ಮುಂಭಾಗದ ರಸ್ತೆ ಮಳೆಗೆ ಕೆಸರು ತುಂಬಿ ವಾಹನ ಹಾಗೂ ಪಾದಚಾರಿಗಳಿಗೆ ಸಂಚರಿಸಲು ತೊಡಕಾಗಿತ್ತು.

Advertisement

ಸಂಚಾರದಲ್ಲಿ ಆಗುವ ಸಮಸ್ಯೆಯನ್ನು ಮನಗಂಡ ಹೆದ್ದಾರಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಮಂಗಳವಾರ ದುರಸ್ತಿ ಕೆಲಸ ಆರಂಭಿಸಿದ್ದಾರೆ.

ಹೆದ್ದಾರಿ 169ರಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಅದು ಪೂರ್ಣಗೊಂಡಿಲ್ಲ. ಬ್ಯಾಂಕ್‌ ಮುಂಭಾಗದ ಸುಮಾರು ನೂರೈವತ್ತು ಮೀಟರ್‌ ಉದ್ದದ ರಸ್ತೆಯ ಒಂದು ಬದಿಯನ್ನು ಮಣ್ಣು ತುಂಬಿಸಿ ಎತ್ತರಿಸಲಾಗಿದೆ. ಹಳೆಯ ಡಾಮರು ರಸ್ತೆಯ ಅವಶೇಷ ಮಾತ್ರ ಉಳಿದಿದ್ದು, ಈ ಭಾಗ ಸೇರಿದಂತೆ ಉಳಿದ ಭಾಗವು ಮಣ್ಣಿನಿಂದ‌ ಕೂಡಿದೆ. ಪರಿಸರವು ಕೆಸರಿನಲ್ಲಿ ತುಂಬಿ ವಾಹನಗಳ ಚಕ್ರಗಳು ಇಲ್ಲಿ ಹೂತು ಹೋಗುತ್ತಿದ್ದವು. ವಾಹನಗಳ ವೀಲ್‌ಗ‌ಳು ತಿರುಗದಷ್ಟು ಕೆಸರು ತುಂಬಿಕೊಂಡು ಸಮಸ್ಯೆಯಾಗಿತ್ತು.

ತೊಂದರೆ
ಹೊಂಡ ಮತ್ತು ಮಳೆಗೆ ಕೆಸರುಮಯವಾಗಿದ್ದ ಈ ರಸ್ತೆಯಲ್ಲಿ ಸಂಚಾರದ ವೇಳೆ ಹಲವು ಮಂದಿ ದ್ವಿಚಕ್ರ ಸವಾರರು ಜಾರಿ ಬೀಳುತ್ತಿದ್ದರು. ಇಲ್ಲಿ ಎಷ್ಟೇ ಜಾಗರೂಕತೆಯಿಂದ ಸಂಚಾರ ನಡೆಸಿದರೂ ಸಮಸ್ಯೆಯಾಗುತ್ತಿತ್ತು. ಸೋಮವಾರ ಅನೇಕ ಮಂದಿ ದ್ವಿಚಕ್ರ ಸವಾರರು ಸಂಚಾರ ವೇಳೆ ಜಾರಿ ಬಿದ್ದು ತೊಂದರೆಗೆ ಒಳಗಾಗಿದ್ದರು. ಮೈತುಂಬಾ ಮಣ್ಣು ಮೆತ್ತಿಕೊಂಡಿದ್ದರು.

ಸಾರ್ವಜನಿಕರ ಆಕ್ರೋಶ
ಸಾರ್ವಜನಿಕರು ರಸ್ತೆ ಅವ್ಯವಸ್ಥೆ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡ ಇಲಾಖೆಯವರು ಮಣ್ಣಿನ ರಸ್ತೆ ಮೇಲೆ ಕಲ್ಲು, ಸಿಮೆಂಟ್‌, ಜಲ್ಲಿ ಮಿಶ್ರಿತ ಹುಡಿ ಚೆಲ್ಲಿ ದುರಸ್ತಿಗೊಳಿಸುವ ಕೆಲಸವನ್ನು ಆರಂಭಿಸಿದ್ದಾರೆ.

Advertisement

ಶಾಶ್ವತ ಪರಿಹಾರ ಕಾಣದು
ಹೆದ್ದಾರಿ ಕಾಮಗಾರಿ ನಿಧಾನಗತಿ ಮತ್ತು ಅಪೂರ್ಣದಿಂದ ಸಮಸ್ಯೆ ಇಷ್ಟೊಂದು ಗಂಭೀರತೆಗೆ ತಲುಪಿದೆ. ಈಗ ಅವಸರವಸರವಾಗಿ ಕಲ್ಲು, ಸಿಮೆಂಟ್‌ ಇತ್ಯಾದಿ ತುಂಬಿಸಿ ದುರಸ್ತಿ ಮಾಡಿದ್ದರೂ ಮುಂದೆ ಮಳೆಗೆ ಇಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಿ ಇನ್ನಷ್ಟು ಅನಾಹುತಕ್ಕೆ ಅವಕಾಶ ನೀಡುತ್ತದೆ. ಈ ಮಳೆಗಾಲ ಸಂಚಾರದಲ್ಲಿ ಭಾರಿ ಸಮಸ್ಯೆ ತಲೆದೋರುವುದು. ಅಧಿಕಾರಿಗಳ ನಿರ್ಲಕ್ಷ್ಯದ ಕಾಮಗಾರಿಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next