ಅಜ್ಜಂಪುರ: ಸಮೀಪದ ಬಗ್ಗವಳ್ಳಿ ಗ್ರಾಮದ ಐತಿಹಾಸಿಕ ಯೋಗನರಸಿಂಹ ದೇವಾಲಯ ಆವರಣದಲ್ಲಿ ಯೋಗ ನರಸಿಂಹ ದೇವಾಲಯ ಅಭಿವೃದ್ಧಿ ಸಂಘದ ವತಿಯಿಂದ ನಡೆಯುತ್ತಿರುವ 5 ಲಕ್ಷ ರೂ. ವೆಚ್ಚದ “ಉದ್ಯಾನ’ ನಿರ್ಮಾಣ ಕಾಮಗಾರಿಗೆ ಸೋಮವಾರ ಪಂಚಾಯತ್ ಅಧ್ಯಕ್ಷೆ ಸುನೀತಾ ಪ್ರಸಾದ್ ಚಾಲನೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಅನಂತ್ ಜೀ ಮಾತನಾಡಿ, ದೇವಾಲಯ ಆವರಣದಲ್ಲಿ ಉದ್ಯಾನ ನಿರ್ಮಾಣಕ್ಕೆ ಅನುಮತಿ ಕೊಡಿಸುವಂತೆ ಶಾಸಕ ಡಿ.ಎಸ್. ಸುರೇಶ್ ಮತ್ತು ಸಚಿವ ಸಿ. ಟಿ. ರವಿ ಅವರಲ್ಲಿ ಮನವಿ ಮಾಡಲಾಗಿತು. ಅವರ ಪ್ರಯತ್ನದಿಂದಾಗಿ ಪುರಾತತ್ವ ಇಲಾಖೆ ಆಯುಕ್ತ ವೆಂಕಟೇಶ್ ನಮಗೆ ಅನುಮತಿ ನೀಡಿದ್ದಾರೆ. ಇದು ದೇವಾಲಯ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ದೇವಾಲಯ ಪರಿಸರ ಸುಂದರ ಗೊಳಿಸುವುದು, ಆಕರ್ಷಣೀಯ ಗೊಳಿಸುವುದು, ಭಕ್ತರನ್ನು, ಪ್ರವಾಸಿ ಗರನ್ನು ಸೆಳೆಯುವಂತೆ ಮಾಡುವುದು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಐಕ್ಯತಾ ವಿಚಾರಧಾರೆಯ ವಿನಿಮಯ ಹಾಗೂ ಜಾಗೃತಿ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಸಿ.ಎಸ್. ಸಿದ್ದೇಗೌಡ ಹೇಳಿದರು.
ದೇಗುಲದ ಪುನರ್ ನಿರ್ಮಾಣ ಮತ್ತು ಯಾತ್ರಿ ನಿವಾಸ, ಪ್ರಸಾದ ಮಂದಿರ ನಿರ್ಮಾಣ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಎಂದು ಟ್ರಸ್ಟ್ ಕಾರ್ಯದರ್ಶಿ ಶಾಂತಪ್ಪ ತಿಳಿಸಿದರು. ಐತಿಹಾಸಿಕ ಮತ್ತು ಧಾರ್ಮಿಕ ಸಂದೇಶ ಸಾರುವ ಹೊಯ್ಸಳರ ಕಾಲದ ದೇವಾಲಯ ಪುನಶ್ಚೇತನಗೊಳ್ಳಬೇಕು. ಮುಂದಿನ ಪೀಳಿಗೆಗೆ ಉಳಿಯಬೇಕು ಎಂದು ಟ್ರಸ್ಟ್ ಉಪಾಧ್ಯಕ್ಷ ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.
ಪಂಚಾಯತ್ ಸದಸ್ಯ ಶಿವಮೂರ್ತಿ, ಟ್ರಸ್ಟ್‌ನ ಪ್ರಸನ್ನ ಕುಮಾರ್, ತೋಂಟದಾರ್ಯ, ಪ್ರಭುಕುಮಾರ್, ಗಿರೀಶ್, ಸೋಮಶೇಖರಪ್ಪ, ಇ.ಜಿ.ಪ್ರಭು ಮತ್ತಿತರರಿದ್ದರು.