ಕುಂದಾಪುರ: ನಮ್ಮನ್ನು ಎದುರು ಸಾಲಿನಲ್ಲಿ ಕುಳ್ಳಿರಿಸಿದ್ದರು. ಭಾಷಣ, ಸಂವಾದ ಮುಗಿದ ಕೂಡಲೇ ಒಬ್ಬಳು ಓಡಿ ಹೋಗಿ ವೇದಿಕೆಗೆ ತೆರಳಿ ಮೋದಿಯವರ ಕಾಲು ಹಿಡಿದಳು.
ಭದ್ರತೆಯವರು ಇತರರನ್ನು ಬಿಡಲಿಲ್ಲ. ಆಗ ಪ್ರಧಾನಿಯವರೇ ಮಕ್ಕಳ ಬಳಿ ಬಂದರು. ಅಷ್ಟು ದೊಡ್ಡ ವ್ಯಕ್ತಿಯ ಮುಂದೆ ನಿಲ್ಲುವಾಗ, ಹತ್ತಿರ ಬಂದಾಗ ಏನು ಮಾಡಲೂ ತೋಚಲಿಲ್ಲ. ತತ್‌ಕ್ಷಣ ಕಾಲಿಗೆ ಬಿದ್ದೆ. ಬೆನ್ನು ತಟ್ಟಿ ಆಲ್ ದಿ ಬೆಸ್ಟ್ ಎಂದರು.
ಹೀಗೆ ಒಂದೇ ಉಸುರಿಗೆ ತನ್ನೊಳಗಿನ ಭಾವನೆ ಗಳನ್ನೆಲ್ಲ ವಿವರಿಸಿದ್ದು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ.ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ.
ತನ್ನ ಅನುಭವವನ್ನು “ಉದಯ ವಾಣಿ’ ಜತೆ ಹಂಚಿ ಕೊಂಡ ಗಾರ್ಗಿ, ಮೋದಿಯವರ ಪಾದಸ್ಪರ್ಶದ ಅನುಭವ ಹೇಳಲಾಗದು. ಆ ಕ್ಷಣ ನನ್ನ ಬದುಕಿನಲ್ಲಿ ಮರಳಿ ಬರು ವುದೋ, ಇಲ್ಲವೋ ಗೊತ್ತಿಲ್ಲ. ಆದರೆ ಅದು ಅವಿಸ್ಮರಣೀಯ ಎಂದು ಹೇಳಿದರು ಗಾರ್ಗಿ.
ಇಂತಹ ಅವಕಾಶ ಸಿಕ್ಕೀತೆಂದು ಕನಸಲ್ಲೂ ಭಾವಿಸಿರಲಿಲ್ಲ. ಅದು ಸಾಧ್ಯವಾದದ್ದು ಕಲೋತ್ಸವ ದಿಂದ. 2023-2024ನೇ ಸಾಲಿನ ಉತ್ಸವದಲ್ಲಿ ಭರತನಾಟ್ಯದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದು, ಗಣರಾಜ್ಯೋತ್ಸವ ಹಾಗೂ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗಿಯಾಗುವ ಅವಕಾಶ ದೊರೆತಿದೆ ಎಂದರು.
ಪ್ರಧಾನಿಯವರು ಬರುವ ಸ್ವಲ್ಪ ಮೊದಲು ನಮ್ಮ ನೃತ್ಯ
ಪ್ರದರ್ಶನ ಇತ್ತು. ಅವರ ಎದುರು ಪ್ರದರ್ಶನ ನೀಡಲಾಗ ಲಿಲ್ಲ. ಕಲೋತ್ಸವ ತಂಡದಿಂದ ಪ್ರಶ್ನೆ ಕೇಳಲಾಗಿತ್ತು. ಆದರೆ ನನಗೆ ವೈಯಕ್ತಿಕವಾಗಿ ಅವಕಾಶ ಸಿಗಲಿಲ್ಲ. ಇದೆಲ್ಲವೂ ನನ್ನ ಶಾಲೆ, ಮನೆಯ ವರಿಂದಾಗಿ ಸಾಧ್ಯವಾ ಯಿತು ಎನ್ನುತ್ತಾರೆ ಗಾರ್ಗಿದೇವಿ.
ಸುಳ್ಯ: ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾ ಪೆ ಚರ್ಚಾ-7ರಲ್ಲಿ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆ ಅವರು ಚಂದ್ರಯಾನ-3ರ ವೈಜ್ಞಾನಿಕ ಮಾದರಿ ಪ್ರದರ್ಶಿಸಿದರು.
ಅಚಲ್ ಚಂದ್ರಯಾನ-3 ಕಾರ್ಯ ವೈಖರಿಯನ್ನು ಜನ ಸಾಮಾನ್ಯರಿಗೂ ಅರ್ಥವಾಗುವಂತೆ ವೈಜ್ಞಾನಿಕ ಮಾದರಿ ತಯಾರಿಸಿ ಪ್ರದರ್ಶಿಸಿದ್ದಾರೆ. 100ಕ್ಕೂ ಅಧಿಕ ಮಾರಿಗಳ ಪ್ರದರ್ಶನ ಮಾಡಲಾಗಿತ್ತು, ಇದರಲ್ಲಿ ಅಚಲ್ ಅವರದೂ ಒಂದಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಉನ್ನತ ಅಧಿಕಾರಿಗಳು, 2 ಸಾವಿರಕ್ಕೂ ಅಧಿಕ ಮಕ್ಕಳು ವೈಜ್ಞಾನಿಕ ಮಾದರಿಯನ್ನು ವೀಕ್ಷಿಸಿದರು.
ಎಲ್ಲ ಮಾದರಿಗಳನ್ನು ವೀಕ್ಷಿಸಿದ ಬಳಿಕ ವಿದ್ಯಾರ್ಥಿ ಗಳೊಂದಿಗೆ ಪ್ರಧಾನಿ ಮೋದಿ ಮಾತನಾಡುತ್ತಾ ಇಂದು ಇಲ್ಲಿ ಪ್ರದರ್ಶಿಸಲಾದ ವಿವಿಧ ಮಾದರಿಗಳು ಅದ್ಭುತವಾಗಿವೆ. ಇವುಗಳನ್ನು ವೀಕ್ಷಿಸಲು ಸಮಯ ಸಾಲದು ಎಂದು ಬಣ್ಣಿಸಿ, ವಿದ್ಯಾರ್ಥಿಗಳನ್ನು ಪ್ರಶಂಶಿಸಿದರು.