ಮುಂಬಯಿ, ಜು. 20: ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗಾಗಿ ಮಹಾರಾಷ್ಟ್ರ ಸರಕಾರ ಶೀಘ್ರದಲ್ಲೇ ಪಾಲಕರ ನೀತಿಯನ್ನು ಜಾರಿಗೆ ತರಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಹೇಳಿದ್ದಾರೆ.
ಪಿಟಿಐ ಜತೆಗೆ ಮಾತನಾಡಿದ ಅವರು, ಪಾಲಕರ ನೀತಿ ಕೇವಲ ಅನಾಥರಿಗೆ ಮಾತ್ರವಲ್ಲದೆ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೂ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ತರಬೇತಿ ನೀಡುವ ಯೋಜನೆ : ಪ್ರತಿ ಮಗುವಿಗೆ ಕುಟುಂಬದಲ್ಲಿ ತನ್ನ ಆರೈಕೆ ಮಾಡುವ ಹಕ್ಕು ಬೇಕಾಗಿರುವುದರಿಂದ ನಾವು ಸಾಕು ಪೋಷಕರ ನೀತಿಯನ್ನು ರೂಪಿಸಿದ್ದೇವೆ. ಈ ಯೋಜನೆ ಮೂಲಕ ಮಗುವಿಗೆ ಅಲ್ಪ ಅಥವಾ ವಿಸ್ತೃತ ಅವ ಧಿಗೆ ಮನೆಯನ್ನು ಒದಗಿಸಲಾಗುತ್ತದೆ ಎಂದವರು ಹೇಳಿದ್ದಾರೆ. ಈ ನೀತಿಯ ಭಾಗವಾಗಿ ಸಾಕು ಕುಟುಂಬಗಳನ್ನು ಅವರ ಸಾಮರ್ಥ್ಯ, ಉದ್ದೇಶ, ಮತ್ತು ಮಕ್ಕಳನ್ನು ನೋಡಿಕೊಳ್ಳುವಲ್ಲಿ ಅವರ ಪೂರ್ವಾನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆ ಮಾಡಲಾದ ಈ ಸಾಕು ಕುಟುಂಬಗಳಿಗೆ ಮಗುವಿನ ಅಗತ್ಯತೆಗಳು ಮತ್ತು ಹಕ್ಕುಗಳನ್ನು ಪೂರೈಸಲು ತರಬೇತಿ ನೀಡಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.
ಮಾರ್ಗಸೂಚಿಗಳು ಸಿದ್ಧವಾಗಿವೆ : ಈ ಸಾಕು ಕುಟುಂಬವು ಶಾಶ್ವತವಾಗಿರುವುದಿಲ್ಲ ಮತ್ತು ಮಗುವಿನ ಮೇಲೆ ಕಾನೂನು ಹಕ್ಕುಗಳನ್ನು ಹೊಂದಿರುವುದಿಲ್ಲ ಎಂದವರು ಹೇಳಿದ್ದಾರೆ. ಬಾಲಾಪರಾಧ ನ್ಯಾಯ ಕಾಯಿದೆಯಡಿ ಸಾಕು ಪೋಷಕರನ್ನು ಕಡ್ಡಾಯಗೊಳಿಸಲಾಗಿದೆ. ಈ ಕುರಿತ ಮಾರ್ಗಸೂಚಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಮತ್ತು ವಿವಿಧ ಮಧ್ಯಸ್ಥಗಾರರ ಸರಿಯಾದ ತರಬೇತಿಯ ಬಳಿಕ ಅನುಷ್ಠಾನ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ. ಮಕ್ಕಳ ಆರೈಕೆ ಮತ್ತು ರಕ್ಷಣೆ ಮುಖ್ಯವಾಗಿದೆ. ಈ ನೀತಿಯನ್ನು ಮುಂಬಯಿ ಉಪನಗರ, ಸೊಲ್ಲಾಪುರ, ಪುಣೆ, ಪಾಲ್ಘರ್ ಮತ್ತು ಅಮರಾವತಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲಾಗುವುದು ಎಂದವರು ಹೇಳಿದ್ದಾರೆ.
ಸಮಾಲೋಚನಾ ಗುಂಪುಗಳ ರಚನೆ : ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 3,164 ಮೇಲ್ವಿಚಾರಕರು ಮತ್ತು ಅಂಗನವಾಡಿ ಕಾರ್ಯಕರ್ತರು ವಾಟ್ಸಾಪ್ ಗುಂಪುಗಳನ್ನು ರೂಪಿಸಿ ಶಾಲಾಪೂರ್ವ ಚಟುವಟಿಕೆಗಳ ವೀಡಿಯೋಗಳ ಮೂಲಕ 1,43,504 ಮಕ್ಕಳನ್ನು ತಲುಪಿಸಿದ್ದಾರೆ. ಅಂತೆಯೇ ಪೋಷಣೆ, ಆರೋಗ್ಯ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಪರಿಹರಿಸಲು ಪೋಷಕರ ಮೊಬೈಲ್ ಆಧಾರಿತ ಸಮಾಲೋಚನಾ ಗುಂಪುಗಳನ್ನು ಕೂಡ ರಚಿಸಲಾಗಿದೆ ಎಂದು ಸಚಿವೆ ಠಾಕೂರ್ ಹೇಳಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ದುರ್ಬಲ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಬೆಳವಣಿಗೆಯ ಮೇಲ್ವಿಚಾರಣೆಯನ್ನು ಪುನರಾರಂಭಿಸುವಂತೆಯೂ ಇಲಾಖೆಯ ಅಧಿ ಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.